ಬೀದಿ ದೀಪ ನಿರ್ವಹಣೆ ವೈಪಲ್ಯಕ್ಕೆ ಆಕ್ರೋಶ

ತುಮಕೂರು

          ಜಿಲ್ಲಾ ಕೇಂದ್ರವೂ ಆಗಿರುವ ತುಮಕೂರು ನಗರದಲ್ಲಿ ಕಳೆದ ಕೆಳ ದಿನಗಳಿಂದ ಬೀದಿ ದೀಪಗಳ ನಿರ್ವಹಣೆಯು ಸಂಪೂರ್ಣ ವಿಫಲಗೊಂಡಿದ್ದು, ಈ ಬಗ್ಗೆ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಂದ ಮತ್ತು ನಗರಾದ್ಯಂತದ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

        ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಒಳಪ್ರದೇಶದ ರಸ್ತೆಗಳಲ್ಲಿ ರಾತ್ರಿ ವೇಳೆ ಹೈಮಾಸ್ಟ್ ದೀಪಗಳೂ ಸೇರಿದಂತೆ ಬೀದಿ ದೀಪಗಳು ಬೆಳಗದಿರುವ ಹಿನ್ನೆಲೆಯಲ್ಲಿ ಅನೇಕ ರಸ್ತೆಗಳು ಕಗ್ಗತ್ತಲಲ್ಲಿ ಮುಳುಗುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಸಂಚಾರಿಗರಲ್ಲಿ ಕಳವಳ ಮೂಡಿಸುತ್ತಿದೆ. ಸೂಕ್ತ ಬೀದಿದೀಪಗಳಿಲ್ಲದೆ ರಾತ್ರಿ ವೇಳೆ ಅಪಘಾತಗಳಾಗುವ ಹಾಗೂ ಅಪರಾ‘ ಪ್ರಕರಣಗಳು ಸಂಧಾವಿಸುವ ಆತಂಕವನ್ನು ಸಾರ್ವಜನಿಕರಲ್ಲಿ ಸೃಷ್ಟಿಸುತ್ತಿದೆ.

ಮಾಸಿಕ 24 ಲಕ್ಷ ರೂ. ವೆಚ್ಚ

      ‘‘ನಗರದಲ್ಲಿರುವ ಬೀದಿದೀಪಗಳ ವಾರ್ಷಿಕ ದುರಸ್ತಿ ಹಾಗೂ ನಿರ್ವಹಣೆಯ ಹೊಣೆಯನ್ನು ತುಮಕೂರು ಮಹಾನಗರ ಪಾಲಿಕೆಯು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡುತ್ತದೆ. ಪ್ರಸ್ತುತ ಈ ಕೆಲಸದ ಗುತ್ತಿಗೆದಾರರಿಗೆ ಪ್ರತಿ ತಿಂಗಳೂ ಪಾಲಿಕೆಯು 24 ಲಕ್ಷ ರೂಗಳನ್ನು ವಿನಿಯೋಗಿಸುತ್ತಿದೆ. ಹೀಗಿದ್ದೂ ನಗರದಲ್ಲಿ ಬೀದಿದೀಪಗಳ ನಿರ್ವಹಣೆಯು ಸರಿಯಾಗಿಲ್ಲ ಎಂದರೆ ಏನರ್ಥ? ಕೆಟ್ಟುಹೋಗಿರುವ ಬೀದಿದೀಪಗಳ ದುರಸ್ತಿಯೇ ಆಗುವುದಿಲ್ಲವೆಂದರೆ ಏನರ್ಥ? ಇಂಥ ನಿಷ್ಕ್ರಿಯತೆಗೆ ಏನು ಕಾರಣ?’’ ಎಂದು ನಗರದ ಸಾರ್ವಜನಿಕ ಹೋರಾಟಗಾರರು ಮತ್ತು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಪರದಾಡುತ್ತಿರುವ ಹೊಸಬರು

       ಈ ಮಧ್ಯ ಮಹಾನಗರ ಪಾಲಿಕೆಗೆ ಹೊಸದಾಗಿ ಆಯ್ಕೆಗೊಂಡಿರುವ ಸದಸ್ಯರುಗಳು ಹಾಗೂ ‘‘ಪತಿರಾಯರುಗಳು’’ ಬೀದಿ ದೀಪಗಳ ಸಮಸ್ಯೆಗೆ ಸಂಬಂಧಿಸಿದಂತೆ ಪರದಾಡುವಂತಾಗಿದೆ. ಇವರುಗಳು ದಿನವೂ ಮಹಾನಗರ ಪಾಲಿಕೆ ಕಚೇರಿಗೆ ಬಂದು ಸಂಬಂಧಿಸಿದ ಅಧಿಕಾರಿಗಳತ್ತ ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ಅಲವತ್ತುಕೊಳ್ಳುತ್ತಿರುತ್ತಾರೆ. ಇತ್ತ ಕೆಲಸ ಆಗದೆ, ಅತ್ತ ಆಯಾ ವಾರ್ಡ್‌ನ ಜನರ ಒತ್ತಡ ತಾಳಲಾರದೆ ಹೊಸಬರು ಜೀತಿ ಪಡುತ್ತಿದ್ದಾರೆಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಅಲ್ಲಿ ಆದದ್ದು ಇಲ್ಲೇಕೆ ಆಗದು?

      ‘‘ಬೆಂಗಳೂರಿನಲ್ಲಿ ಸಹ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳು ಬೆಂಗಳೂರಿನ ವಿವಿಧೆಡೆ ಸರಿಸುಮಾರು 10 ಸಾವಿರ ಬೀದಿದೀಪಗಳು ಉರಿಯುತ್ತಿಲ್ಲವೆಂಬುದನ್ನು ಗುರುತಿಸಿ, ಸಂಬಂಧಿಸಿದ ಗುತ್ತಿಗೆದಾರನ ಬಿಲ್ ಅನ್ನು ತಡೆಹಿಡಿದರು. ಅಂಥ ಉದಾಹರಣೆ ತುಮಕೂರು ಪಾಲಿಕೆಯಲ್ಲಿದೆಯೇ? ಇಲ್ಲಿನ ಅಧಿಕಾರಿಗಳು ರಾತ್ರಿ ವೇಳೆ ನಗರ ಸಂಚಾರ ಮಾಡಿ ಬೀದಿದೀಪಗಳ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಿದ್ದಾರೆಯೇ? ಬೆಂಗಳೂರಿನಲ್ಲಿ ಆಗುವಂಥದ್ದು ಇಲ್ಲೇಕೆ ಆಗುತ್ತಿಲ್ಲ?’’ ಎಂಬುದು ಬೀದಿ ದೀಪ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪ ಕುರಿತು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ ಅವರು ಮುಂದಿಡುವ ಪ್ರಶ್ನೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link