ಕಳಪೆ ಮೇವು ವಿತರಿಸಿದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ

ಚಳ್ಳಕೆರೆ

   ಪ್ರತಿನಿತ್ಯ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ನೀಡಲಾಗುವ ಹುಲ್ಲಿನ ಗುಣಮಟ್ಟವನ್ನು ಪರಿಶೀಲಿಸಬೇಕು, ಮೇವು ಸರಬರಾಜು ಮಾಡುವವರು ಗುಣಮಟ್ಟದ ಹುಲ್ಲು ನೀಡದೇ ಇದ್ದಲ್ಲಿ ಅಂತಹವರ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಜಾನುವಾರುಗಳು ಕಳಪೆ ಹುಲ್ಲನ್ನು ಸೇವಿಸದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

   ಅವರು ಶುಕ್ರವಾರ ತಾಲ್ಲೂಕಿನ ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ ಗ್ರಾಮದ ಗೋಶಾಲೆಗೆ ದಿಢೀರ್ ಭೇಟಿ ನೀಡಿ ಅಲ್ಲಿರುವ ಜಾನುವಾರುಗಳಿಗೆ ಪ್ರತಿನಿತ್ಯ ವಿತರಣೆ ಮಾಡುವ ಹುಲ್ಲಿನ ಗುಣಮಟ್ಟವನ್ನು ಪರಿಶೀಲಿಸಿದರೆಲ್ಲದೆ, ರೈತರಿಂದಲೂ ಸಹ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಸರ್ಕಾರ ಪ್ರತಿನಿತ್ಯ ಇಂತಿಷ್ಠೇ ಪ್ರಮಾಣದಲ್ಲಿ ಗುಣಮಟ್ಟದ ಮೇವು ಸರಬರಾಜು ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದೆ.

     ಆದರೆ, ಕೆಲವೊಮ್ಮೆ ಕಳಪೆ ಮಟ್ಟದ ಹುಲ್ಲನ್ನು ಸರಬರಾಜು ಮಾಡುತ್ತಾರೆಂಬ ಆರೋಪವಿದೆ. ಆದ್ದರಿಂದ ರೈತರು ಯಾವುದೇ ಕ್ಷಣದಲ್ಲಾದರೂ ತಮ್ಮ ಜಾನುವಾರುಗಳಿಗೆ ಉತ್ತಮ ಮೇವು ದೊರಕದೆ ಇದ್ದಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಗೋಶಾಲೆಯಲ್ಲಿ ಹಲವಾರು ರೈತರು ಮಾತನಾಡಿ, ಗೋಶಾಲೆಯನ್ನು ಮುಚ್ಚುತ್ತಾರೆಂಬ ವದಂತಿಯನ್ನು ಹರಡಲಾಗುತ್ತಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು ಜಾನುವಾರುಗಳನ್ನು ಸಾಕುವ ಸಾಮಥ್ರ್ಯವನ್ನು ಕಳೆದುಕೊಂಡಿದ್ಧಾರೆ.

    ಹುಲ್ಲು, ಮೇವು ಎಲ್ಲೂ ಸಿಗುತ್ತಿಲ್ಲ. ಜಿಲ್ಲಾಡಳಿತ ಗೋಶಾಲೆಗಳನ್ನು ಮುಚ್ಚಿದರೆ ಸಾವಿರಾರು ಜಾನುವಾರುಗಳ ಸಾವು ಸಂಭವಿಸುತ್ತದೆ. ದಯಮಾಡಿ ಇನ್ನು ಕೆಲವಾರು ದಿನಗಳ ಕಾಲವಾದರೂ ಕಡೆ ಪಕ್ಷ ಸಮೃದ್ಧ ಮಳೆಯಾಗುವ ತನಕ ಮುಂದುವರೆಸುವಂತೆ ಮನವಿ ಮಾಡಿದರು. ಅಲ್ಲಲ್ಲಿ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಬೇಕು, ಜಾನುವಾರುಗಳಿಗೆ ಈಗ ನೀಡುತ್ತಿರುವ ಮೇವು ಸಾಕಾಗುತ್ತಿಲ್ಲ ಆದ್ದರಿಂದ ಮೇವಿನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

    ಜಿಲ್ಲಾಧಿಕಾರಿ ಮಾತನಾಡಿ, ಪ್ರಸ್ತುತ ಸ್ಥಿತಿಯಲ್ಲಿ ಗೋಶಾಲೆಯನ್ನು ಮುಚ್ಚುವಂತೆ ಸರ್ಕಾರ ಆದೇಶ ನೀಡಿಲ್ಲ, ಆದರೆ ಸರ್ಕಾರದಿಂದ ಆದೇಶ ಬಂದಲ್ಲಿ ಮಾತ್ರ ಮುಂದುವರೆಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಪತ್ರಬರೆಯುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ದೊಡ್ಡ ಉಳ್ಳಾರ್ತಿ ಹರಿಜನ ಕೇರಿಗೆ ಭೇಟಿ ನೀಡಿದ ಅವರು, ಅಲ್ಲಿನ ಕುಡಿಯುವ ನೀರು, ಚರಂಡಿ, ರಸ್ತೆಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಕಂದಾಯಾಧಿಕಾರಿ ಮಹಮ್ಮದ್ ರಫೀ, ಗ್ರಾಮ ಲೆಕ್ಕಿಗ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap