ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮ..!!

ತುಮಕೂರು

     ಸಭೆಗೆ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿಯಲ್ಲಿಂದು ನರೇಗಾ ಮತ್ತು ನೀರು ಸಂರಕ್ಷಣೆ ಕುರಿತು ಪ್ರಗತಿ ಪರಿಶೀಲಾನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒದಗಿಸುವ ಮಾಹಿತಿ ನಿಖರವಾಗಿರಬೇಕು. ಅಸ್ಪಷ್ಟ ಮಾಹಿತಿ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಮಾಡಲಾಗುವುದೆಂದ ಅವರು ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶೇ.48ರಷ್ಟು ಮಾತ್ರ ಉದ್ಯೋಗ ಒದಗಿಸಲಾಗಿದೆ.

       ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಇದರಿಂದ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಲ್ಲಿ ರಾಷ್ಟ್ರ ಮಟ್ಟದಲ್ಲಿ ಹಿಂದುಳಿದಿದ್ದೇವೆ . ನರೇಗಾ ಯೋಜನೆಯಡಿ ಗುರಿ ಮೀರಿ ಸಾಧನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೃಷಿ ಭಾಗ್ಯ ಯೋಜನೆಯಡಿ ಕೈಗೊಳ್ಳಲಾಗುವ ಕೃಷಿ ಹೊಂಡ ಕಾಮಗಾರಿಯನ್ನು ಜುಲೈ 31ರೊಳಗಾಗಿ ಪೂರ್ಣಗೊಳಿಸಬೇಕು. ಮಳೆಗಾಲ ಪ್ರಾರಂಭವಾಗುವ ಮುನ್ನವೇ ಪೂರ್ಣಗೊಳಿಸಬೇಕಿತ್ತು. ಮಳೆ ಬಂದ ನಂತರ ಕೈಗೊಂಡರೆ ಏನು ಪ್ರಯೋಜನ? ರೈತರು ಮತ್ತೊಂದು ವರ್ಷ ಕಾಯಬೇಕಾ? ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ತಾಕೀತು ಮಾಡಿದರು.

        ರೈತರಿಗೆ ಅನುಕೂಲವಾಗುವಂತೆ ರೇಷ್ಮೆ, ಕೃಷಿ, ತೋಟಗಾರಿಕೆ, ಪಶುಪಾಲನೆ, ಅರಣ್ಯ ಇಲಾಖೆಗಳು ಸಂಯುಕ್ತವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಕಾರ್ಯಾಗಾರವನ್ನು ಹಮ್ಮಿಕೊಂಡು ವರ್ಷಪೂರ್ತಿ ಆದಾಯ ತರುವಂತಹ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಹೆಚ್ಚು ಇಳುವರಿ ನೀಡುವಂತಹ ಬಹು ಬೆಳೆ ಪದ್ಧತಿಯನ್ನು ಅನುಸರಿಸುವ ಬಗ್ಗೆ ಮಾಹಿತಿ ನೀಡಬೇಕು.

        ಬಡ ರೈತರನ್ನು ಗುರುತಿಸಿ ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯ, ಸಹಾಯಧನ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರಲ್ಲದೆ ಜಿಲ್ಲೆಯಲ್ಲಿ ಉದ್ಯೋಗ ಚೀಟಿ ನೀಡಲಾಗಿರುವ ಎಲ್ಲರಿಗೂ ಕಡ್ಡಾಯವಾಗಿ ಉದ್ಯೋಗ ಒದಗಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಹಾಗೂ ಬರ ನಿರ್ವಹಣೆ ತಮಗೆ ಮೆಚ್ಚುಗೆ ತಂದಿದೆ ಎಂದು ತಿಳಿಸಿದರು.

         ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲು ಪ್ರಸಕ್ತ ವರ್ಷದಲ್ಲಿ ಸಾಮಾಜಿಕ ಅರಣ್ಯ, ಪ್ರಾದೇಶಿಕ ಅರಣ್ಯ, ಕೃಷಿ, ರೇಷ್ಮೆ, ತೋಟಗಾರಿಕೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ 227991 ಮಾನವ ದಿನಗಳನ್ನು ಸೃಜಿಸಲಾಗಿದೆ. ಈವರೆಗೂ ಶೇ.13.65ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

        ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್, ತಾಲೂಕು ಪಂಚಾಯತಿಗಳ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap