ಸರಕಾರದ ಅನುದಾನ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮಾಡಿದರೆ ಕಟ್ಟುನಿಟ್ಟಿನ ಕ್ರಮ :ಜಿಪಂ ಉಪಕಾರ್ಯದರ್ಶಿ

ಕೊರಟಗೆರೆ

    ಗ್ರಾಮೀಣ ಪ್ರದೇಶದ ಬಡಜನರ ಅಭಿವೃದ್ದಿಗೆ ಸರಕಾರದ ಅನುದಾನ ಅನುಷ್ಠಾನದ ಕಾರ್ಯವೈಖರಿ ಬಗ್ಗೆ ತಾಪಂ ಇಓ ಮತ್ತು ಸಹಾಯಕ ನಿರ್ದೇಶಕ ಸಂಪೂರ್ಣ ವಿಫಲ ಆಗಿದ್ದೀರಿ ಎಂದು ತುಮಕೂರು ಜಿಪಂ ಅಭಿವೃದ್ದಿ ಉಪಕಾರ್ಯದರ್ಶಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ .ಪಟ್ಟಣದ ತಾಪಂ ಸಭಾಂಗಣದಲ್ಲಿ ತುಮಕೂರು ಜಿಪಂ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು 24 ಗ್ರಾಪಂಗಳ ಅಭಿವೃದ್ದಿ ಹಾಗೂ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಂದಾಯ ಮತ್ತು ಪೋಲೀಸ್ ಇಲಾಖೆ ಹೊರತುಪಡಿಸಿ ಇನ್ನಿತರ ಸರಕಾರಿ ಇಲಾಖೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಅನುದಾನವನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನ ಗೊಳಿಸಲು ಗ್ರಾಪಂ ಪಿಡಿಓಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಭಿವೃದ್ದಿ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನತೆ ತೋರುವ ಪಿಡಿಓ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಗ್ರಾಪಂ ಪಿಡಿಓ ಮತ್ತು ಕಾರ್ಯದರ್ಶಿ ಸಮಗ್ರ ಕೃಷಿ ಪದ್ದತಿ ಅನುಷ್ಠಾನದ ಬಗ್ಗೆ ಕೃಷಿ, ಅರಣ್ಯ, ರೇಷ್ಮೆ, ತೋಟಗಾರಿಕೆ ಇಲಾಖೆ ಸಹಕಾರದಿಂದ ರೈತರ ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸಬೇಕು. ತಮ್ಮ ಮನೆ ಮತ್ತು ಜಮೀನಿನ ದಾಖಲೆಯ ಬಗ್ಗೆ ಜಾಗೃತಿ ವಹಿಸುವ ರೀತಿಯಲ್ಲಿಯೇ ಸರಕಾರಿ ಕಟ್ಟಡ ಮತ್ತು ಜಮೀನಿನ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

    ಕೊರಟಗೆರೆಯ 24 ಗ್ರಾಪಂಗಳ ಕೊಳವೆ ಬಾವಿಗಳ ಪಟ್ಟಿ ತಯಾರಿಸಿ ಪ್ರತ್ಯೇಕ ಫೈಲ್ ಮಾಡಿ ಸಂಪೂರ್ಣ ಅಂಕಿಅಂಶದ ಜೊತೆ ಪ್ರತಿಯೊಂದು ಗ್ರಾಪಂಯಿಂದ ಒಂದು ಸಾವಿರ ಗಿಡಗಳ ಪೋಷಣೆ ಮತ್ತು ರಕ್ಷಣೆ ಮಾಡುವ ಯೋಜನೆ ರೂಪಿಸಬೇಕು. ಗ್ರಾಪಂಯಿಂದ ಅನುಮತಿ ಮತ್ತು ತೆರಿಗೆ ಪಾವತಿಸಿದ ನಂತರವೆ ಇಟ್ಟಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಬೇಕು ಎಂದು ಪಿಡಿಓಗಳಿಗೆ ಸೂಚಿಸಿದರು.

   ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆಯ ಅಂಗನವಾಡಿ ಕಟ್ಟಡ, ಸರಕಾರಿ ಶಾಲೆ, ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಪಂಯ ಸಹಕಾರ ಪಡೆದು ಅಭಿವೃದ್ದಿಗೆ ಸಹಕಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಡಿ ಗ್ರಾಪಂಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಸಿಬ್ಬಂದಿವರ್ಗ ಅಭಿವೃದ್ದಿ ವಿಚಾರದಲ್ಲಿ ವಿಫಲ ಆಗಿದ್ದಾರೆ ಎಂದು ತಿಳಿಸಿದರು.

     ಸಭೆಯಲ್ಲಿ ತಾಪಂ ಇಓ ಶಿವಪ್ರಕಾಶ್, ಸಹಾಯಕ ನಿರ್ದೇಶಕ ನಾಗರಾಜು, ಸಿಡಿಪಿಓ ಶ್ರೀಧರ್, ಗ್ರಾಮೀಣ ಎಇಇ ರಂಗಪ್ಪ, ಪಶು ಇಲಾಖೆ ಶಶಿಕುಮಾರ್, ಕೃಷಿ ಇಲಾಖಾ ನೂರ್ ಆಜಾಂ, ಗ್ರಾಪಂ ಪಿಡಿಓ ರಾಮಚಂದ್ರರಾವ್, ರಾಘವೇಂದ್ರ, ರಮೇಶ, ಯಶೋಧ, ಲಕ್ಷ್ಮಣ್, ನಾಗರಾಜು, ರಂಗನರಸಪ್ಪ ಸೇರಿದಂತೆ 24 ಗ್ರಾಪಂಗಳ ಪಿಡಿಓ, ಕಾರ್ಯದರ್ಶಿ ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link