ತುಮಕೂರು

ತುಮಕೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ ಮತ್ತು ಯೋಜನಾ ವಿಭಾಗಗಳಲ್ಲಿ ಪಾರದರ್ಶಕತೆ ಇಲ್ಲ, ಅಕ್ರಮಗಳಾಗುತ್ತಿವೆ ಎಂದು ನೇರ ಹಾಗೂ ಗಂಭೀರ ಆರೋಪವನ್ನು ಸ್ವತಃ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಡಿದ ಹಾಗೂ ಇದಕ್ಕೆ ದಾಖಲಾತಿ ನೀಡಿದರೆ ತಕ್ಷಣವೇ ಸೂಕ್ತ ಕ್ರಮ ಜರುಗಿಸುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಭರವಸೆ ನೀಡಿದ ಅಪರೂಪದ ಬೆಳವಣಿಗೆಯೊಂದು ನಡೆಯಿತು.
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸಚಿವರು ತುಮಕೂರು ಮಹಾನಗರ ಪಾಲಿಕೆಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುವಾಗ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಪಾಲಿಕೆಯ ಕಂದಾಯ ವಿಭಾಗ ಮತ್ತು ಯೋಜನಾ ವಿಭಾಗಗಳ ವಿರುದ್ಧ ಹರಿಹಾಯ್ದರು.
ಬ್ರೋಕರ್‍ಗಳ ಕೈ ಮೇಲಾಗಿದೆಯೆಂದು ದೂರಿದರು. ಇವೆರಡು ವಿಭಾಗಗಳಲ್ಲಿ ಪಾರದರ್ಶಕತೆಯೇ ಇಲ್ಲ. ಸಾರ್ವಜನಿಕರಿಗೆ ಸೇರಿದ ಯಾವುದಾದರೂ ಕೆಲಸ ಮಾಡಿಕೊಡಲು ನಾವು ಹೇಳಿದರೆ, ಆಗುವುದಿಲ್ಲ ಎನ್ನಲು ಇವರ ಬಳಿ ನೂರು ಉತ್ತರಗಳು ಸಿದ್ಧವಾಗಿರುತ್ತವೆ. ಆದರೆ ಅದಾದ 15 ದಿನಗಳಲ್ಲಿ ಬೇರೆ ಬ್ರೋಕರ್‍ಗಳ ಮೂಲಕ ಅದೇ ಕೆಲಸ ಆಗಿಬಿಟ್ಟಿರುತ್ತದೆ. ಆಗ ಇವರಿಗೆ ಯಾವ ಕಾನೂನೂ ಅಡ್ಡಬರುವುದಿಲ್ಲ ಎಂದು ನೇರ ಹಾಗೂ ಗಂಭೀರ ಆರೋಪ ಮಾಡಿದರು.
ಸಭೆಯಲ್ಲಿದ್ದ ಪಾಲಿಕೆ ಸದಸ್ಯರುಗಳು ಮೇಜು ಕುಟ್ಟಿ ಸಹಮತ ಸೂಚಿಸಿದರು.ಇದಕ್ಕೆ ಅಷ್ಟೇ ಗಂಭೀರವಾಗಿ ಪ್ರತಿಕ್ರಿಯಿಸಿದ ಸಚಿವ ಬಸವರಾಜ್, ನೀವು ಈಗ ಮಾಡಿದ ಆರೋಪದ ಬಗ್ಗೆ ಸೂಕ್ತ ದಾಖಲಾತಿ ಇದ್ದರೆ ನೇರವಾಗಿ ನನಗೆ ಕೊಡಿ. ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಒತ್ತಿ ಹೇಳಿದರು. ಆದರೆ ಶಾಸಕರು ಈಗ ಇಲ್ಲಿ ಅದು ಬೇಡ ಎಂದು ನಿರಾಕರಿಸಿದರು.
ಖಾತೆ ಆಗುತ್ತಿಲ್ಲ
ಈ ಚರ್ಚೆಯ ವೇಳೆಯಲ್ಲಿ ಎದ್ದುನಿಂತ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ (ಜೆಡಿಎಸ್- 23 ನೇ ವಾರ್ಡ್-ಸತ್ಯಮಂಗಲ), ಪಾಲಿಕೆಯಲ್ಲಿ ರೆವಿನ್ಯೂ ನಿವೇಶನಗಳಿಗೆ ಸಂಬಂಧಿಸಿದ ಖಾತೆಗಳು ಆಗದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು. ಜೆಡಿಎಸ್ ಸದಸ್ಯ ಧರಣೇಂದ್ರ ಕುಮಾರ್ (28 ನೇ ವಾರ್ಡ್- ಸದಾಶಿವನಗರ) ಮಾತನಾಡಿ, ಪಾಲಿಕೆಯ ಉಪ ಆಯುಕ್ತ (ಕಂದಾಯ)ರು ಟೂಡಾ ಆಯುಕ್ತರೂ ಆಗಿರುವುದರಿಂದ ಪಾಲಿಕೆಯಲ್ಲಿನ ಕೆಲಸ ಕಾರ್ಯಗಳು ಕುಂಠಿತವಾಗುತ್ತಿವೆ. ಬ್ರೋಕರ್‍ಗಳು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್- ಅರಳಿಮರದ ಪಾಳ್ಯ), ರೆವಿನ್ಯೂ ನಿವೇಶನಗಳಿಗೆ ಖಾತೆ ಮಾಡಿದರೆ, ಪಾಲಿಕೆಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸಂದಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್‍ನ ಸೈಯದ್ ನಯಾಜ್ (8ನೇ ವಾರ್ಡ್- ಪಿ.ಜಿ. ಲೇಔಟ್) ಮಾತನಾಡಿ, ಈ ಹಿಂದೆ ರೆವಿನ್ಯೂ ನಿವೇಶನಗಳಲ್ಲಿನ ಆಸ್ತಿಗೆ ಪಿ.ಐ.ಡಿ. ಸಂಖ್ಯೆಯನ್ನು ನೀಡಲಾಗಿದ್ದು, ಈಗ ಪರವಾನಗಿ ಸಿಗದೆ ಜನರು ಪರಿತಪಿಸುತ್ತಿದ್ದಾರೆ. ಅಲ್ಲದೆ ಆಜೀವ ಪರ್ಯಂತ ನಿಗದಿಗಿಂತ ಎರಡು ಪಟ್ಟು ಹೆಚ್ಚು ದಂಡಶುಲ್ಕ ಪಾವತಿ ಮಾಡಬೇಕಾಗಿದೆ. ಇದರಿಂದ ಸಾರ್ವಜನಿಕರು ತುಂಬ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆಂದು ಸುದೀರ್ಘ ವಿವರಣೆ ನೀಡಿದರು. ಬಿಜೆಪಿಯ ನಳಿನಾ ಇಂದ್ರಕುಮಾರ್ (1ನೇ ವಾರ್ಡ್- ಮರಳೇನಹಳ್ಳಿ) ಸಹ, ನಗರದ ಹೊರವಲಯದ ವಾರ್ಡ್‍ಗಳಲ್ಲಿರುವ ಆಸ್ತಿದಾರರು ಫಾರಂ ನಂಬರ್-3 ಪಡೆಯುವುದು ದುಸ್ತರವಾಗಿದೆಯೆಂದು ಸಚಿವರ ಗಮನ ಸೆಳೆದರು. ಸದಸ್ಯರ ಭಾವನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್ ಈ ಬಗ್ಗೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.
ಹೆಚ್ಚಿನ ಅನುದಾನ ಅಗತ್ಯ
ಮತ್ತೆ ಮಾತನ್ನು ಮುಂದುವರೆಸಿದ ಲಕ್ಷ್ಮೀನರಸಿಂಹರಾಜು, ತುಮಕೂರು ನಗರದ ಹೊರವಲಯಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಅನುದಾನದ ಅಗತ್ಯವಿದೆ ಎಂಬ ಬೇಡಿಕೆಯನ್ನು ಸಚಿವರ ಮುಂದಿಟ್ಟರು. ಈ ಮಾತಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಹೌದು ಇದು ಅತ್ಯಂತ ಮುಖ್ಯ ವಿಷಯ. ನಮ್ಮ ನಗರದಲ್ಲಿ ಸುಮಾರು 1,000 ಕಿ.ಮೀ.ಗಳಷ್ಟು ರಸ್ತೆ ಇದೆ. ಆದರೆ ಕೇವಲ ಸುಮಾರು 350 ಕಿ.ಮೀ.ಗಳಷ್ಟು ರಸ್ತೆ ಮಾತ್ರ ಡಾಂಬರೀಕರಣಗೊಂಡಿದೆ. ಆದ್ದರಿಂದ ನಗರದ ಹೊರವಲಯದಲ್ಲಿ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಅನಿವಾರ್ಯವಾಗಿದೆ ಎಂದು ಸಚಿವರ ಗಮನ ಸೆಳೆದರು.
ಸಿ.ಎಂ. ಬಳಿ ಚರ್ಚಿಸೋಣ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್, ಶಾಸಕರನ್ನು ಉದ್ದೇಶಿಸಿ ನಾನು, ನೀವು ಮತ್ತು ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜ್ ಸೇರಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತುಮಕೂರಿಗೆ ವಿಶೇಷ ಅನುದಾನ ನೀಡುವ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಬಿಲ್ ಕೊಟ್ಟಿಲ್ಲ
ಈ ಮಧ್ಯೆ ಪಕ್ಷೇತರ ಸದಸ್ಯ ವಿಷ್ಣುವರ್ಧನ್ (30 ನೇ ವಾರ್ಡ್- ವಿಜಯನಗರ) ಇಂದಿರಾ ಕ್ಯಾಂಟೀನ್ ಅಕ್ರಮಗಳ ಬಗ್ಗೆ ಸಚಿವರಿಗೆ ಮನವಿ ಪತ್ರ ನೀಡಿದಾಗ ಸಚಿವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತ, ಇಂದಿರಾ ಕ್ಯಾಂಟೀನ್ ವಿರುದ್ಧ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಆ ಸಂಸ್ಥೆಯವರಿಗೆ ನೀಡಬೇಕಾದ ಒಂದೂವರೆ ಕೋಟಿ ರೂ.ಗಳ ಬಿಲ್ ತಡೆಹಿಡಿಯಲಾಗಿದೆ. ದೂರುಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಅಗತ್ಯ ಕ್ರಮ ಕೈಗೊಂಡು ಬಳಿಕ ಬಿಲ್ ಪಾವತಿ ಮಾಡಲಾಗುವುದು ಎಂದು ಉತ್ತರಿಸಿದರು.
5 ಲಕ್ಷಕ್ಕೆ ಏರಿಕೆ ಮಾಡಿ
ವಿರೋಧ ಪಕ್ಷದ (ಬಿಜೆಪಿ) ನಾಯಕ ಸಿ.ಎನ್. ರಮೇಶ್ (31 ನೇ ವಾರ್ಡ್- ಶೆಟ್ಟಿಹಳ್ಳಿ) ಮಾತನಾಡಿ, ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ 1 ಲಕ್ಷ ರೂ. ಮೊತ್ತದವರೆಗೆ ಟೆಂಡರ್ ಕರೆಯದೆ ಕಾಮಗಾರಿ ಕೈಗೊಳ್ಳಬಹುದಾಗಿದೆ. ಆದರೆ ಈ ಮೊತ್ತ ಈಗಿನ ಸನ್ನಿವೇಶದಲ್ಲಿ ತುಂಬ ಕಡಿಮೆ ಎನಿಸುತ್ತದೆ. ಯಾವೊಂದು ಸಣ್ಣಪುಟ್ಟ ಕಾಮಗಾರಿಯನ್ನೂ ಈ ಮೊತ್ತದಲ್ಲಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಕರೆಯದೆ 5 ಲಕ್ಷ ರೂ.ವರೆಗೆ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯ ಮಾದರಿಯಲ್ಲೇ ಪಾಲಿಕೆಯಲ್ಲೂ ಕನಿಷ್ಟ 5 ಲಕ್ಷ ರೂ.ವರೆಗೆ ಟೆಂಡರ್ ಇಲ್ಲದೆಯೆ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಇದಕ್ಕೆ ಸಚಿವರು ಇದು ಸರ್ಕಾರದ ನೀತಿಯಾಗಿದ್ದು, ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಮುಂದಿಟ್ಟ ಬೇಡಿಕೆಗಳು
ಈ ಮಧ್ಯೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಪಾಲಿಕೆ ವತಿಯಿಂದ ಕೆಲವು ಬೇಡಿಕೆಗಳನ್ನು ಸಚಿವರ ಮುಂದಿಟ್ಟರು. 1)ಇಂದಿರಾ ಕ್ಯಾಂಟೀನ್‍ಗಳಿಗೆ ಸಂಬಂಧಿಸಿದಂತೆ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸುತ್ತಿರುವಂತೆ ಮಹಾನಗರ ಪಾಲಿಕೆಗಳಿಗೂ ಸರ್ಕಾರದಿಂದಲೇ ಅನುದಾನ ಭರಿಸಲು, 2)ಪ್ರತಿ ಇಂದಿರಾ ಕ್ಯಾಂಟೀನ್‍ಗಳಲ್ಲಿ ದಿನಕ್ಕೆ 1500 ಟೋಕನ್‍ಗಳಷ್ಟು ಆಹಾರ ಸರಬರಾಜು ಮಾಡಲಿದ್ದು, ಈ ಟೋಕನ್ ಸಂಖ್ಯೆಯನ್ನು ಕಡಿಮೆಗೊಳಿಸಲು, 3)ಪಾಲಿಕೆಯ ನೂತನ ಕಚೇರಿ ಕಟ್ಟಡದ 2 ನೇ ಮತ್ತು 3 ನೇ ಅಂತಸ್ತಿನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಒದಗಿಸಲು, 4)ಪಾಲಿಕೆ ವ್ಯಾಪ್ತಿಯಲ್ಲಿ ಈಗ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ತೆರಿಗೆ ವಿಧಿಸುತ್ತಿದ್ದು, ಕೈಗಾರಿಗಳಿಂದ ತೆರಿಗೆ ಸಂಗ್ರಹಕ್ಕೆ ಪ್ರತ್ಯೇಕ ಸ್ಲಾಬ್‍ಗೆ ಅವಕಾಶ ಕೊಡಬೇಕು, 5)ಪಾಲಿಕೆಯಲ್ಲಿ ಖಾಲಿ ಇರುವ ಗ್ರೂಪ್-ಬಿ, ಗ್ರೂಪ್-ಸಿ, ಗ್ರೂಪ್-ಡಿ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಆಯುಕ್ತರು ಮನವಿ ಮಾಡಿಕೊಂಡರು.
ಸಭೆಯಲ್ಲಿ ಅಂತಿಮವಾಗಿ ಮಾತನಾಡಿದ ಸಚಿವ ಬಸವರಾಜ್, ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಆದ್ಯಗಮನ ಕೊಡಬೇಕು. ನಗರದ ಹೊರವಲಯಗಳ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರು ಗಮನಿಸಬೇಕು. ಇನ್ನು ಆರು ತಿಂಗಳುಗಳೊಳಗೆ ನಗರಾದ್ಯಂತ ಎಲ್.ಇ.ಡಿ. ಬೀದಿದೀಪಗಳ ಅಳವಡಿಕೆ ಅನುಷ್ಠಾನವಾಗಲೇಬೇಕು. ಸ್ಮಾರ್ಟ್‍ಸಿಟಿ ಕಾಮಗಾರಿಗಳು 3 ತಿಂಗಳುಗಳೊಳಗೆ ಮುಕ್ತಾಯವಾಗುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಆಯುಕ್ತರು ನಿರ್ದೇಶಿಸಬೇಕು. ಆಯಾ ವಾರ್ಡ್‍ನ ಅವಶ್ಯಕತೆಗನುಗುಣವಾಗಿ ಪೌರಕಾರ್ಮಿಕರ ನೇಮಕಕ್ಕೆ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮತ್ತೆ ಶಾಸಕರ ಆರೋಪ
ಕೊನೆಯಲ್ಲಿ ಮತ್ತೊಮ್ಮೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಧ್ಯೆಪ್ರವೇಶಿಸಿ, ಪಾಲಿಕೆಯ ಕಂದಾಯ ಮತ್ತು ಯೋಜನಾ ವಿಭಾಗದ ಅಕ್ರಮಗಳನ್ನು ಪುನರುಚ್ಛರಿಸಿದರು. ಈ ವಿಭಾಗಗಳಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಏಕೆಂದರೆ ಕಂದಾಯ ವಿಭಾಗದಲ್ಲಿ ದುರುದ್ದೇಶದಿಂದ ತಪ್ಪುಗಳನ್ನು ಮಾಡಿ, ಸಾರ್ವಜನಿಕರು ಅಲೆದಾಡುವಂತೆ ಮಾಡಲಾಗುತ್ತಿದೆ ಎಂದು ದೂರಿದರು. ಆಗ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಪ್ರತಿಕ್ರಿಯಿಸಿ, ಇಂತಹ ಉದಾಹರಣೆಯಿದ್ದರೆ ಅದರ ಸಮಗ್ರ ವಿವರವನ್ನು ನನಗೇ ನೇರವಾಗಿ ಕೊಡಿ. ನಾನೇ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಆದರೆ ವಿಷಯ ಅಷ್ಟಕ್ಕೇ ಅಂತ್ಯಗೊಂಡು ಸಭೆಯೂ ಮುಕ್ತಾಯವಾಯಿತು.
ಸನ್ಮಾನ ನಿರಾಕರಣೆ
ಪಾಲಿಕೆಗೆ ಮೊದಲ ಬಾರಿಗೆ ಆಗಮಿಸಿದ ನಗರಾಭಿವೃದ್ಧಿ ಸಚಿವ ಬಸವರಾಜ್ ಅವರಿಗೆ ಪಾಲಿಕೆ ವತಿಯಿಂದ ಸನ್ಮಾನಿಸುತ್ತಿರುವುದಾಗಿ ಸಭೆಯ ಅಂತ್ಯದಲ್ಲಿ ಆಯುಕ್ತ ಟಿ.ಭೂಬಾಲನ್ ಪ್ರಕಟಿಸಿದಾಗ, ಸಚಿವರು ನಯವಾಗಿಯೇ ಸನ್ಮಾನವನ್ನು ನಿರಾಕರಿಸಿದರು.ವೇದಿಕೆಯಲ್ಲಿ ಮೇಯರ್ ಫರೀದಾಬೇಗಂ (ಕಾಂಗ್ರೆಸ್), ಉಪಮೇಯರ್ ಶಶಿಕಲಾ ಗಂಗಹನುಮಯ್ಯ (ಜೆಡಿಎಸ್) ಉಪಸ್ಥಿತರಿದ್ದರು. ಸಭೆಯಲ್ಲಿ ಪಾಲಿಕೆಯ ಎಲ್ಲ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
