ಬೆಂಗಳೂರು
ಕೆಪಿಸಿಸಿ ರಾಜ್ಯ ಹಾಗೂ ಬ್ಲಾಕ್ ಮಟ್ಟದ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಮಾಡದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕೆಲವು ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದು, ಪದಾಧಿಕಾರಿ ನೇಮಕಾತಿ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಪರವಿರೋಧ ಹೇಳಿಕೆಗಳು ಸಹ ಆರಂಭವಾಗಿವೆ.
ಪಕ್ಷದ ಶಿಸ್ತು ಹಳಿ ತಪ್ಪುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಕಿಡಿಕಾರಿರುವ ಡಿ.ಕೆ.ಶಿವಕುಮಾರ್, ಕೋವಿಡ್ ಸಂದರ್ಭದಲ್ಲಿ ಪಕ್ಷದ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಮುಗಿಯುವವರೆಗೂ ಯಾವುದೇ ಘಟಕಕ್ಕೂ ಪದಾಧಿಕಾರಿಗಳನ್ನು ಬದಲಾಯಿಸುವುದಾಗಲೀ, ಹೊಸಬರ ನೇಮಕವಾಗಲೀ ಮಾಡುವುದಿಲ್ಲ. ಯಾವುದೇ ಬದಲಾವಣೆಯಾಗಲಿ ಇಲ್ಲ ಎಂದಿದ್ದಾರೆ.ಜನರು ಕೊರೋನಾದಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಪಕ್ಷದ ವಿವಿಧ ಘಟಕಗಳ ನೇಮಕಾತಿಗೆ ಆದ್ಯತೆ ನೀಡದೇ ಮೊದಲು ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯವಾಗಿದೆ. ಸದ್ಯಕ್ಕೆ ಕೆಪಿಸಿಸಿ ಘಟಕಗಳ ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರ ನೇಮಕವೂ ಸಧ್ಯಕ್ಕೆ ಇಲ್ಲ, ಯಾರನ್ನೂ ತೆಗೆಯುವುದೂ ಇಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರದ ಹೊರತು ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಯಾರೂ ಕೂಡ ಈ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲದ ಹೇಳಿಕೆಗಳನ್ನಾಗಲೀ, ಪಕ್ಷಕ್ಕೆ ಮುಜುಗರವಾಗುವಂತಹ ವಿಚಾರಗಳನ್ನಾಗಲೀ, ಬರಹಗಳನ್ನಾಗಲೀ ಮಾಧ್ಯಮಗಳಿಗೆ ಹೇಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ಟಿಪ್ಪಣಿ ಮಾಡಬಾರದು. ಒಂದು ವೇಳೆ ತಮ್ಮ ನಿರ್ದೇಶನವನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂತವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯ ಎಂದು ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ
ಕೆಪಿಸಿಸಿಯಲ್ಲಿ ಅಧ್ಯಕ್ಷರ ನೇಮಕಾತಿ ಆಗಿದೆಯೇ ಹೊರತು ಇದೂವರೆಗೂ ಯಾವುದೇ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಿಲ್ಲ. ಕೆಲವು ದಿನಗಳ ಹಿಂದೆ ಯುವಘಟಕಕ್ಕೆ ಯುವ ಸಂಘಟನೆ ಅಧ್ಯಕ್ಷ ಬಸನಗೌಡ ಬಾದರ್ಲಿ ಶಿವಕುಮಾರ್ ಅವರ ಗಮನಕ್ಕೆ ತಾರದಂತೆ ಕೆಲವು ಪದಾಧಿಕಾರಿಗಳನ್ನು ನೇಮಿಸಿದ್ದರು.ಇದರಿಂದ ಡಿ.ಕೆ.ಶಿವಕುಮಾರ್ ಕಿಡಿಕಾರಿ ನೇಮಕಾತಿಯನ್ನೇ ರದ್ದುಗೊಳಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ