ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಅಮಾನತಿಗೆ ಆದೇಶ : ಡಾ.ಜಿ.ಪರಮೇಶ್ವರ್

ಕೊರಟಗೆರೆ

   ಕರ್ನಾಟಕ ರಾಜ್ಯವು ಅಭಿವೃದ್ದಿಯಲ್ಲಿ ಭಾರತ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ ಇನ್ನೂ ಶೇ.90ರಷ್ಟು ಕುಟುಂಬಗಳು ಬಡತನ ರೇಖೆಗಿಂತೆ ಕೆಳಗಿರುವ ಬಗ್ಗೆ ಆಹಾರ ಇಲಾಖೆಯಿಂದ ಅಂಕಿ ಅಂಶ ಲಭ್ಯವಾಗಿದೆ. ಕರ್ನಾಟಕ ರಾಜ್ಯ ಇನ್ನೂ ಬಡ ರಾಜ್ಯ ಎಂದು ಅಧಿಕಾರಿಗಳೆ ಸ್ಪಷ್ಟ ಪಡಿಸಿದ್ದಾರೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತ ಪಡಿಸಿದರು.

    ಪಟ್ಟಣದಲ್ಲಿ ತುಮಕೂರು ಜಿಪಂ ಮತ್ತು ಕೊರಟಗೆರೆ ತಾಪಂ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸರಕಾರಿ ಇಲಾಖೆಗಳ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

     ಆಹಾರ ಇಲಾಖೆಯ ಅಂಕಿಅಂಶದ ಪ್ರಕಾರ ನನ್ನ ಕ್ಷೇತ್ರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ 40,619 ಮಾತ್ರ.. ಅದೇ ಆಹಾರ ಇಲಾಖೆಯ ಅಂಕಿ ಅಂಶದ ಪ್ರಕಾರ 43,485 ಪಡಿತರ ಕಾರ್ಡುಗಳ ಕುಟುಂಬಗಳಿವೆ. ಹೆಚ್ಚಾಗಿರುವ 2866ರಷ್ಟು ಪಡಿತರ ಕಾರ್ಡುಗಳ ಅಂಕಿಅಂಶದ ಮಾಹಿತಿ ಇನ್ನು ಮೂರು ತಿಂಗಳೊಳಗೆ ನನಗೆ ಬೇಕು ಎಂದು ಆದೇಶ ನೀಡಿದರು.

     ನಾನು ಎಂದಾದರೂ ನಿಮ್ಮ ಕೆಲಸದಲ್ಲಿ ತಲೆ ಹಾಕಿದ್ದೇನೆಯೆ? . ನನ್ನಿಂದ ಯಾರಿಗಾದರೂ ತೊಂದರೆ ಆvದೆಯೆ? ನಿಮ್ಮಿಂದ ಏನಾದರು ಬಯಸಿದ್ದೇನೆಯೆ ಹೇಳಿ. ನಿಮಗೆ ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿಕೊಳ್ಳಿ. ಕ್ಷೇತ್ರದ ಅಭಿವೃದ್ದಿ ಮತ್ತು ಸಾರ್ವಜನಿಕರ ಕೆಲಸದ ವಿಚಾರದಲ್ಲಿ ನೀವು ನಿರ್ಲಕ್ಷ್ಯ ಮಾಡಬೇಡಿ. ನೀವು ನಿಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡದಿದ್ದರೆ ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಸೂಚನೆ ನೀಡಿದರು.

     ಸರಕಾರಿ ಅಧಿಕಾರಿ ವರ್ಗ ವಾಸಸ್ಥಾನದಲ್ಲಿಯೆ ಇರದೆ ಬೆಂಗಳೂರು ನಗರದಿಂದ ಕೊರಟಗೆರೆ ಸರಕಾರಿ ಕಚೇರಿಗೆ ಆಗಮಿಸಿ, ಕಾಟಾಚಾರದಿಂದ ಸಾರ್ವಜನಿಕರ ಕೆಲಸ ಮಾಡಿದರೆ ಸ್ಥಳದಲ್ಲಿಯೇ ಅಮಾನತಿಗೆ ಆದೇಶ ನೀಡುತ್ತೇನೆ. ಡಿಸಿಎಂ ಕ್ಷೇತ್ರದಲ್ಲಿ ಹೆಮ್ಮೆ ಮತ್ತು ಖುಷಿಯಿಂದ ರೈತರ ಕೆಲಸ ಮಾಡಿ, ನಾನೆ ನಿಮ್ಮನ್ನು ಗೌರವಿಸುತ್ತೇನೆ. ನಿರ್ಲಕ್ಷ್ಯ ತೋರಿದರೆ ನಿಮ್ಮನ್ನು ರೈತರ ಮನೆಯಲ್ಲಿ ಮಲಗಿಸಿ ಕೆಲಸ ಮಾಡಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.

     ನನ್ನ ಕ್ಷೇತ್ರದ ಅಭಿವೃದ್ದಿಗೆ ಎಷ್ಟು ಅನುದಾನ ಬೇಕು? ನನಗೆ ಮಾಹಿತಿ ನೀಡಿ. ಅಷ್ಟು ಅನುದಾನವನ್ನು ಸರಕಾರದಿಂದ ಕೊಡಿಸುತ್ತೇನೆ. ನನ್ನ ಕ್ಷೇತ್ರದ ಪ್ರತಿ ಸರಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯ ಇರಬೇಕು. ಬಿಇಓ ಪ್ರತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಸುಂದರ ಪರಿಸರ ನಿರ್ಮಾಣ ಮಾಡಿ, ಕಚೇರಿ ಡೈರಿಯಲ್ಲಿ ಸಹಿ ಹಾಕಬೇಕು. ನಾನು ಕ್ಷೇತ್ರಕ್ಕೆ ಭೇಟಿ ನೀಡುವ ವೇಳೆ ಪರಿಶೀಲನೆ ನಡೆಸುತ್ತೇನೆ. ಲೋಪ ಕಂಡುಬಂದರೆ ಕ್ರಮ ಖಚಿತ ಎಂದು ಹೇಳಿದರು.

     ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾತನಾಡಿ, ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಕಾಮಗಾರಿಯನ್ನು ನಾನೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯನ್ನು ಅಧಿಕಾರಿ ವರ್ಗ ಸಮರ್ಪಕವಾಗಿ ಮಾಡಿ, ವರದಿ ನೀಡಬೇಕು. ಸಾರ್ವಜನಿಕರು ಮತ್ತು ರೈತರ ಸಮಸ್ಯೆಯನ್ನು ಸ್ಥಳದಲ್ಲಿಯೇ ಸರಿಪಡಿಸುವ ಕೆಲಸ ಮಾಡಬೇಕು. ಲೋಪ ಕಂಡುಬಂದರೆ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.

     ಸಭೆಯಲ್ಲಿ ಕೃಷಿ, ರೇಷ್ಮೆ, ಬೆಸ್ಕಾಂ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ, ಪಶು, ಸಮಾಜ ಕಲ್ಯಾಣ, ಮೀನುಗಾರಿಕೆ, ಬಿಸಿಎಂ, ಅಕ್ಷರ ದಾಸೋಹ, ಲೊಕೋಪಯೋಗಿ, ಗ್ರಾಮೀಣ ಕುಡಿಯುವ ನೀರು, ಕಂದಾಯ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದೇವರಾಜ ಅರಸು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮುಂದಿನ ಸಭೆಗೆ ಆಗಮಿಸುವ ವೇಳೆ ಕಳೆದ ಐದು ವರ್ಷದ ಅಂಕಿ ಅಂಶದ ಸಂಪೂರ್ಣ ಮಾಹಿತಿ ತರಬೇಕು ಎಂದು ಸೂಚನೆ ನೀಡಿದರು.

     ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ, ಜಿಪಂ ಮುಖ್ಯಾಧಿಕಾರಿ ಶುಭಕಲ್ಯಾಣ್, ಮಧುಗಿರಿ ಎಸಿ ಚಂದ್ರಶೇಖರ್, ತಾಪಂ ಅಧ್ಯಕ್ಷ ನಾಜೀಮಾಬಿ, ಉಪಾಧ್ಯಕ್ಷ ವೆಂಕಟಪ್ಪ, ಜಿಪಂ ಸದಸ್ಯರಾದ ಶಿವರಾಮಯ್ಯ, ಪ್ರೇಮಾ, ಅಕ್ಕಮಹಾದೇವಿ, ನಾರಾಯಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ತಹಸೀಲ್ದಾರ್ ಶಿವರಾಜು, ಇಓ ಶಿವಪ್ರಕಾಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap