ಪಡಿತರಕ್ಕೆ ಹಣ ಪಡೆದರೆ ಕಠಿಣ ಕ್ರಮ..!

ಬೆಂಗಳೂರು

      ನ್ಯಾಯಬೆಲೆ ಅಂಗಡಿಯವರು ಪಡಿತರಕ್ಕಾಗಿ ಜನರಿಂದ ಹಣ ಪಡೆದರೆ ಅಂತಹ ಅಂಗಡಿಗಳ ಪರವಾನಗಿ ರದ್ದುಮಾಡಲಾಗುವುದು ಎಂದು ಆಹಾರ ಸಚಿವ ಗೋಪಾಲಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

      ಪಡಿತರ ಅಂಗಡಿಯವರು ಯಾವುದೇ ಕಾರಣಕ್ಕೂ ಹಣ ಪಡೆಯಬಾರದು. ಎಲ್ಲರಿಗೂ ಸರಿಯಾಗಿ ರೇಷನ್ ವಿತರಣೆ ಮಾಡುವಂತೆ ಸೂಚನೆ ನೀಡಿದ್ದೇನೆ. ಒಂದು ವೇಳೆ ಸಾರ್ವಜನಿಕರಿಂದ ಹಣ ಪಡೆದರೆ ಅಂತಹ ಪಡಿತರ ಅಂಗಡಿಗಳ ಲೈಸೆನ್ಸ್ ರದ್ದು ಮಾಡುವುದಾಗಿ ಅವರು ಹೇಳಿದರು.

      ನಗರದ ಪೀಣ್ಯ, ಸುಂಕದಕಟ್ಟೆ, ಹೆಗ್ಗನಹಳ್ಳಿ ಪ್ರದೇಶದಲ್ಲಿ ಇರುವ ನ್ಯಾಯಬೆಲೆ ಅಂಗಡಿಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪಡಿತರ ವಿತರಣೆ ಸಮರ್ಪಕವಾಗಿ ನಡೆದಿದೆಯೇ ಎಂಬುದನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಪಡಿತರ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಬಯೊಮೆಟ್ರಿಕ್ ಉಪಯೋಗಿಸದೆ ಪಡಿತರ ಚೀಟಿಗಳನ್ನು ನೋಡಿ ರೇಷನ್ ವಿತರಿಸಿ ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

     ಇದೇ ಸಂದರ್ಭದಲ್ಲಿ ಸಚಿವರು, ಪಡಿತರದಾರರ ಸಮಸ್ಯೆಗಳನ್ನು ಆಲಿಸಿ ಎಲ್ಲರಿಗೂ ಪಡಿತರ ವಿತರಿಸಲು ಸರ್ಕಾರ ಬದ್ಧವಿದೆ ಎಂದು ಹೇಳಿದರು. ಆಹಾರ ಇಲಾಖೆಯ ಆಯುಕ್ತ ಸಲ್ಮಾ ಇಕ್ಬಾಲ್ ಉಪಸ್ಥಿತÀರಿದ್ದರು.

ಲೈಸೆನ್ಸ್ ರದ್ದು

     ಈ ನಡುವೆ ನಗರದಲ್ಲಿ ಪಡಿತರ ಆಹಾರ ವಿತರಣೆಯಲ್ಲಿ ಲೋಪವೆಸಗಿದ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದು ಪಡಿಸಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣಮೂರ್ತಿರವರು ತಿಳಿಸಿದ್ದಾರೆ.

     ನ್ಯಾಯಬೆಲೆ ಅಂಗಡಿಗಳ ಮೇಲೆ ನಡೆಸಿದ ಅನಿರೀಕ್ಷಿತ ಭೇಟಿ ವೇಳೆ 3 ನ್ಯಾಯಬೆಲೆ ಅಂಗಡಿ ಮಾಲೀಕರು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಡಿತರ ವಿತರಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಲಾಕ್‍ಡೌನ್‍ನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಮ್ಮೆಲೆ ನೀಡಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆಯೇ ಎಂಬ ಬಗ್ಗೆ ತಪಾಸಣೆ ನಡೆಸಲಾಯಿತು.

     ಲೋಪವೆಸಗಿದ ಎರಡು ಪಡಿತರ ವಿತರಣಾ ಕೇಂದ್ರಗಳನ್ನು ಅಮಾನತ್ತಿನಲ್ಲಿಡುವಂತೆ ಆಹಾರ ಇಲಾಖೆ ಉಪನಿರ್ದೇಶಕ ನಾಗಭೂಷಣ್ ಅವರಿಗೆ ಸೂಚನೆ ನೀಡಲಾಗಿದೆ ಎಂದ ಅವರು ತಿಳಿಸಿದರು. ತಪಾಸಣೆ ವೇಳೆ ಆಹಾರ ಆಯೋಗದ ಸದಸ್ಯ ಹೆಚ್.ವಿ. ಶಿವಶಂಕರ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link