ಅಯೋಧ್ಯೆ ತೀರ್ಪು ಬೆನ್ನಲ್ಲೆ ರಾಜ್ಯದೆಲ್ಲಡೆ ಕಟ್ಟೆಚ್ಚರ..!

ಬೆಂಗಳೂರು

    ಅಯೋಧ್ಯೆಯ ವಿವಾದಿತ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸ್ ನೀಡಿ ಸುಪ್ರಿಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೆ ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕೈಗೊಂಡು ಕಟ್ಟೆಚ್ಚರ ವಹಿಸಲಾಗಿದೆ.ಬೆಂಗಳೂರು,ಮೈಸೂರು,ಹುಬ್ಬಳ್ಳಿ-ಧಾರವಾಡ,ಬೆಳಗಾವಿ,ಕಲ್ಬುರ್ಗಿ ಸೇರಿದಂತೆ ರಾಜ್ಯದ ಎಲ್ಲಾ ನಗರ ಪಟ್ಟಣಗಳಲ್ಲದೇ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹಚ್ಚಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ.

    ತೀರ್ಪು ಪರ ವಿಜಯೋತ್ಸವಕ್ಕೆ ಅವಕಾಶ ನೀಡದೆ, ಗುಂಪು ಸೇರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದು ದೇವಸ್ಥಾನ ಮಸೀದಿ ಇನ್ನಿತರ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.ಬೆಂಗಳೂರು,ಮೈಸೂರು,ಹುಬ್ಬಳ್ಳಿ-ಧಾರವಾಡ,ಬೆಳಗಾವಿ,ಕಲ್ಬುರ್ಗಿಗಳಲ್ಲಿ ಪೊಲೀಸ್ ಆಯುಕ್ತರು ಜಿಲ್ಲೆಗಳಲ್ಲಿ ಎಸ್‌ಪಿಗಳು ಭದ್ರತೆಯ ನಿಗಾ ವಹಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

    ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆಯಪ್, ಟ್ವಿಟ್ಟರ್ ಹಾಗೂ ಇನ್ನಿತರೇ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು/ಪೋಸ್ಟ್ ಗಳನ್ನು, ಕಮೆಂಟ್ ಗಳನ್ನು ಹಾಕುವವರ ಮೇಲೂ ನಿಗಾವಹಿಸಲಾಗಿದೆ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್ ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್, ಟ್ವಿಟ್ಟರ್ ಹಾಗೂ ಇನ್ನಿತರೇ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸು ಸೂಚಿಸಲಾಗಿದೆ ಎಂದರು.

    ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಈ ನಡುವೆ ನಗರದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ಇಂದು ತಡರಾತ್ರಿ 12ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದ್ದು ಪರಿಸ್ಥಿತಿ ಅವಲೋಕಿಸಿ ನಿಷೇದಾಜ್ಞೆ ತೆರೆವುಗಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.

   ನಗರದಲ್ಲಿ ಗುಂಪು ಸೇರಿ ಮೆರವಣಿಗೆ ಮಾಡುವುದು ಹಾಗೂ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಾಳೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಈ ಬಗ್ಗೆ ಅಬಕಾರಿ ಇಲಾಖೆಗೂ ಈಗಾಗಲೇ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

    ‘ರಸ್ತೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೆರವಣಿಗೆ ಮಾಡಬಾರದು. ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು ಹಾಗೂ ಬಣ್ಣ ಎರಚುವುದನ್ನು ನಿಷೇಧಿಸಲಾಗಿದೆ. ತಲೆಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡುವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಭಾಸ್ಕರ್ ರಾವ್ ಹೇಳಿದರು.

    ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಮೇಲೆ ಕಣ್ಣಿಡಲಾಗಿದ್ದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಮುಲಾಜಿಲ್ಲದೆ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು ನಗರದಲ್ಲಿ ಭದ್ರತೆಗಾಗಿ 50 ಕೆಎಸ್‌ಆರ್‌ಪಿ ತುಕಡಿ,30 ನಗರ ಸಶಸ್ತ್ರ ಮೀಸಲು ಪಡೆ ತುಕಡಿ,ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ತುಕಡಿ,1,200: ಗೃಹರಕ್ಷಕರು,250 ಮಂದಿ ಪೌರ ರಕ್ಷಕರು 8 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕೇಸ್ ದಾಖಲಿಸುವ ಎಚ್ಚರಿಕೆ

    ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ, ಪೋಸ್ಟ್‌ಗಳನ್ನು ಹಾಗೂ ಕಮೆಂಟ್‌ಗಳನ್ನು ಹಾಕುವವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್‌ಟಾಗ್ರಾಂ, ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ತೀರ್ಪು ಕುರಿತಂತೆ ಆಕ್ಷೇಪಾರ್ಹ ಸಂದೇಶಗಳನ್ನು ನೀಡಬಾರದೆಂದು ಎಚ್ಚರಿಸಿರುವ ಪೊಲೀಸ್ ಇಲಾಖೆ, ಸೂಚನೆ ಪಾಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ರವಾನೆ ಮಾಡಿದ್ದೇ ಆದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಹಾಗೂ ಜೈಲಿಗಟ್ಟಲಾಗುವುದೆಂದು ಪೊಲೀಸರು ಎಚ್ಚರಿಸಿದ್ದಾರೆ.

     ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಿದ್ದು, ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಪೊಲೀಸ್ ಇಲಾಖೆ ನೀಡಿರುವ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗಲಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂದೇಶಗಳನ್ನು ಹರಿಬಿಡುವಂತಿಲ್ಲ. ಒಂದು ವೇಳೆ ಗ್ರೂಪ್‌ನ ಸದಸ್ಯರು ಪ್ರಚೋದನಾಕಾರಿ ಸಂದೇಶಗಳನ್ನು ಗ್ರೂಪ್‌ಗಳಿಗೆ ರವಾನಿಸಿದ್ದೇ ಆದಲ್ಲಿ ಅದಕ್ಕೆ ಗ್ರೂಪ್‌ನ ಅಡ್ಮಿನ್‌ಗಳೇ ಹೊಣೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link