ಚಳ್ಳಕೆರೆ
ಕಳೆದ ಹಲವಾರು ವರ್ಷಗಳ ನಿರಂತರ ಬರಗಾಲ ಹಿನ್ನೆಲೆಯಲ್ಲಿ ತಾಲ್ಲೂಕಿನ ಜನತೆ ಕಂಗಾಲಾಗಿದ್ದು, ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕು ಕಚೇರಿಗೆ ಆಗಮಿಸಿದಾಗ ಅವರ ಕೆಲಸ ಕಾರ್ಯಗಳು ಆಗದೆ ವಿಳಂಬ ದೋರಣೆ ಅನುಸರಿಸುವುದು, ಸಾರ್ವಜನಿಕರನ್ನು ವಿನಾಕಾಲ ಅಲೆದಾಡಿಸಿದಲ್ಲಿ, ಹಣಕ್ಕಾಗಿ ಪೀಡಿಸಿದಲ್ಲಿ ಬೇರೆ ರೀತಿ ಅವರ ಮೇಲೆ ದೌರ್ಜನ್ಯ ನಡೆಸಿದಲ್ಲಿ ಅದನ್ನು ಸಹಿಸಲಾಗದು ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶನಿವಾರ ದಿಢೀರನೆ ಇಲ್ಲಿನ ತಾಲ್ಲೂಕು ಕಚೇರಿ ಸೇರಿದಂತೆ ಹಲವಾರು ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ವರ್ಗಕ್ಕೆ ತರಾಟೆಗೆ ತೆಗೆದುಕೊಂಡರು.
ಪ್ರಾರಂಭದಲ್ಲಿ ಇಲ್ಲಿನ ಉಪನೊಂದಾವಣೆ ಕಚೇರಿಗೆ ಆಗಮಿಸಿ ಅವರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗವನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಇದನ್ನು ಸರಿಪಡಿಸಿಕೊಂಡು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಉಪ ಖಜಾನೆಗೂ ಸಹ ಭೇಟಿ ನೀಡಿ, ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ ವೇತನ ಮುಂತಾದವುಗಳನ್ನು ನಿಗದಿತ ಅವಧಿಯಲ್ಲೇ ಫಲಾನುಭವಿಗಳ ಕೈಸೇರುವಂತೆ ಕಾರ್ಯನಿರ್ವಹಿಸಿ, ಎರಡ್ಮೂರು ತಿಂಗಳು ನೀವೇ ಹಣವನ್ನು ಇಟ್ಟುಕೊಂಡು ಪಾವತಿ ಮಾಡದೇ ಇದ್ದರೆ ಅವರು ಜೀವ ನಿರ್ವಹಿಸುವುದೇ ಹೇಗೆ ಎಂದು ಪ್ರಶ್ನಿಸಿದರು.
ತಾಲ್ಲೂಕು ಕಚೇರಿಯ ಆಧಾರ ಕಾರ್ಡ್ ಶಾಖೆ, ವೃದ್ದಾಪ್ಯ ವೇತನ ಮಂಜೂರು ಶಾಖೆ, ಆಹಾರ ಇಲಾಖೆ, ಪಹಣಿ ಶಾಖೆಗಳಿಗೆ ಭೇಟಿ ನೀಡಿದ ಅವರು, ಸಂಬಂಧಪಟ್ಟ ನೌಕರರಿಂದ ಮಾಹಿತಿ ಪಡೆದರು. ಯಾರೂ ಯಾವ ಕಾರ್ಯಗಳನ್ನು ನಿರ್ವಹಿಸುತ್ತೀರುವರು ಎಂಬ ಬಗ್ಗೆ ತಹಶೀಲ್ದಾರ್‍ರಿಂದ ಮಾಹಿತಿ ಪಡೆದ ಅವರು, ಪ್ರತಿನಿತ್ಯವೂ ಇಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಸಾಕಷ್ಟು ಇದ್ದು, ಈ ಬಗ್ಗೆ ಸಿಬ್ಬಂದಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಯಾರೇ ಆಗಲಿ ಸಾರ್ವಜನಿಕರನ್ನು ವಿನಾಕಾಲ ಅಲೆದಾಡಿಸಿದಲ್ಲಿ, ಹಣಕ್ಕಾಗಿ ಪೀಡಿಸಿದಲ್ಲಿ ಬೇರೆ ರೀತಿ ಅವರ ಮೇಲೆ ದೌರ್ಜನ್ಯ ನಡೆಸಿದಲ್ಲಿ ಅದನ್ನು ಸಹಿಸಲಾಗದು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಕಚೇರಿಯಲ್ಲಿಟ್ಟುಕೊಳ್ಳಿ, ಕಾರ್ಯನಿರ್ವಹಿಸದ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಎಂದರು.
ಇಲ್ಲಿನ ಆಹಾರ ಇಲಾಖೆಯ ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಹಾರ ನಿರೀಕ್ಷಕ ರಂಗಸ್ವಾಮಿ ಈ ತಿಂಗಳಲ್ಲಿ ಈಗಾಗಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿಗಳು ಬಂದಿದ್ದು, 2100 ಅರ್ಜಿಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ. ಶೀಘ್ರದಲ್ಲೆ ಎಲ್ಲರಿಗೂ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾವ ರೀತಿ ಆಹಾರ ಪದಾರ್ಥಗಳು ನ್ಯಾಯ ಬೆಲೆ ಅಂಗಡಿ ಮೂಲಕ ಸುಲಲಿತವಾಗಿ ಮಾರಾಟವಾಗುತ್ತಿವೆ ಎಂಬ ಬಗ್ಗೆ ನಿಗಾವಹಿಸಿ ಎಂದರು. ಪಡಿತರ ಚೀಟಿಗಳನ್ನು ತ್ವರಿತ ಗತಿಯಲ್ಲಿ ನೀಡುವಂತೆ ಸೂಚನೆ ನೀಡಿದರು.
ಆಡಳಿತ ಶಿರಸ್ತೇದಾರ್ ಮಂಜುನಾಥಸ್ವಾಮಿಗೆ ಎಚ್ಚರಿಕೆ ನೀಡಿದ ಶಾಸಕ ಟಿ.ರಘುಮೂರ್ತಿ ನಿಮ್ಮ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಈ ಹಿಂದೆ ಈ ಬಗ್ಗೆ ಕ್ರಮ ಕೈಗೊಳ್ಳದೆ ವಿನಾಯಿತಿ ನೀಡಲಾಯಿತು. ಆದರೂ ನೀವು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಿ ಸಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ ತಹಶೀಲ್ದಾರ್‍ರವರನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.
ಸರ್ವೆ ಇಲಾಖೆಗೆ ಭೇಟಿ ನೀಡಿದ ಶಾಸಕರು, ಗ್ರಾಮಾಂತರ ಪ್ರದೇಶದ ರೈತರು ತಮ್ಮ ಜಮೀನುಗಳ ಅಳತೆಗಾಗಿ ತಿಂಗಳಾನುಗಟ್ಟಲೇ ಓಡಾಡುತ್ತಾರೆ ಅದ್ದರಿಂದ ಇಲಾಖೆ ಸಿಬ್ಬಂದಿಗೆ ಸೂಕ್ತ ನಿರ್ದೇಶಕ ನೀಡಿದ ಯಾವ ರೈತರಿಗೂ ಅನ್ಯಾಯವಾಗದಂತೆ ಕಾನೂನು ಪ್ರಕಾರ ಕಾರ್ಯನಿರ್ವಹಿಸುವಂತೆ ಸರ್ವೆ ಅಧಿಕಾರಿ ಬಾಬುರೆಡ್ಡಿಗೆ ಸೂಚನೆ ನೀಡಿದರು. ನಂತರ ಪೊಲೀಸ್ ಠಾಣೆಗೆ ತೆರಳಿದ ಅವರು, ಪಕ್ಕದಲ್ಲೇ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗುತ್ತಿದ್ದು, ಠಾಣೆಯ ಮುಂಭಾಗದಲ್ಲಿ ವಿಶಾಲವಾದ ನಾಮಫಲಕ ಅಳವಡಿಸುವಂತೆ ಪಿಎಸ್‍ಐ ಕೆ.ಸತೀಶ್‍ನಾಯ್ಕರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಮ್ಯಾಡಂ ಶಿವಮೂರ್ತಿ, ಆರ್.ಪ್ರಸನ್ನಕುಮಾರ್, ಮಂಜುನಾಥ, ಸೈಯದ್, ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
