ಶಿರಾ
ಶಿಕ್ಷಣದಿಂದ ಮಾತ್ರ್ರ ನಿಶ್ಚಿತವಾದ ಗುರಿ ಮುಟ್ಟಲು ಸಾಧ್ಯವಾಗಿದ್ದು, ಮಕ್ಕಳು ಪೋಷಕರ ಸಲಹೆಗಳನ್ನು ಸ್ವೀಕರಿಸುವ ಮೂಲಕ ಸಾಧನೆಯ ಹಾದಿ ತುಳಿಯಬೇಕಿದೆಯಷ್ಟೇ ಅಲ್ಲದೆ, ಶಿಸ್ತು ಹಾಗೂ ಸಂಯಮಗಳಿಂದ ಮಾತ್ರ್ರ ಮಕ್ಕಳ ಬೌದ್ಧಿಕ ಬೆಳವಣಿಗೆ ಸಾಧ್ಯ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಗುರುವಾರ ಕೈಗೊಳ್ಳಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್, ಸಾಂಸ್ಕತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜೀವನದಲ್ಲಿ ಸಾಧಿಸುವಂತಾದ್ದು ಸಾಕಷ್ಟಿದ್ದು ಅವುಗಳತ್ತ ಎಲ್ಲರ ಗಮನವಿರಬೇಕು. ನಾನೂ ಕೂಡ ಚಿಕ್ಕವನಿದ್ದಾಗ ಶಿಕ್ಷಣದತ್ತ ಹೆಚ್ಚು ಗಮನ ನೀಡದ ಪರಿಣಾಮ ತಂದೆಯ ಕಟ್ಟುನಿಟ್ಟಿನ ಸೂಚನೆ ನನ್ನನ್ನು ತಿದ್ದಿ ತೀಡುವಂತೆ ಮಾಡಿತು. ಇದೇ ಪ.ಪೂ. ಕಾಲೇಜಿಗೆ ನನ್ನ ತಂದೆ ಹಾಗೂ ತಾಯಿಯ ಸ್ಮರಣಾರ್ಥ ಈ ಹಿಂದೆ ಎರಡು ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದು, ಹಂತ ಹಂತವಾಗಿ ಈ ಕಾಲೇಜಿನ ನೂತನ ಕಟ್ಟಡದ ನಿರ್ಮಾಣಕ್ಕೂ ಈ ಹಿಂದೆ ಶ್ರಮಿಸಿದ ತೃಪ್ತಿ ನನಗಿದೆ ಎಂದರು.
ಮಕ್ಕಳು ಕೇವಲ ಪಠ್ಯಕ್ರಮಕ್ಕಷ್ಟೇ ಸೀಮಿತಗೊಂಡರೆ ಸಾಮಾಜಿಕ ಬೆಳವಣಿಗೆಯ ಅರಿವು ಇರಲಾರದು. ಪತ್ರಿಕೆಗಳು, ಪುಸ್ತಕಗಳನ್ನು ಓದುವ ಹಾಗೂ ಸೇವಾದಳ, ಸ್ಕೌಟ್ಸ್‍ಗಳಂತಹ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು.ಪ್ರಾಂಶುಪಾಲ ಕೃಷ್ಣಾನಾಯ್ಕ, ಪುರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ಜಯನಾರಾಯಣ್, ಮಂಡಿ ವರ್ತಕ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ