ದಾವಣಗೆರೆ:
ಸಮೀಪದ ತೊಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯ ಕಟ್ಟಡದಲ್ಲಿ ತೆರೆದಿರುವ ಭದ್ರತಾ ಕೊಠಡಿ ಸೇರಿರುವ ಮತಯಂತ್ರಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಮತಯಂತ್ರಗಳು ಒಂದು ತಿಂಗಳು ಕಾಲ ಈ ಸ್ಟ್ರಾಂಗ್ ರೂಮ್‍ನಲ್ಲಿಯೇ ಭದ್ರವಾಗಿ ಇರಲಿವೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆದ ನಂತರದಲ್ಲಿ ಚುನಾವಣಾ ಸಿಬ್ಬಂದಿಗಳು, 25 ಅಭ್ಯರ್ಥಿಗಳ ಭವಿಷ್ಯ ಅಡಕವಾಗಿರುವ ಮತಯಂತ್ರಗಳನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ತೆರೆದಿದ್ದ ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ಒಪ್ಪಿಸಿದರು. ಅಲ್ಲಿಂದ ಅವುಗಳನ್ನು ದಾವಣಗೆರೆ ವಿವಿ ಕಟ್ಟಡಕ್ಕೆ ತರಲಾಯಿತು.
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಗಳೂರು ವಿಧಾನ ಕ್ಷೇತ್ರದ ಮತ ಯಂತ್ರಗಳನ್ನು ದಾವಣಗೆರೆ ವಿವಿಯ ನಾಲೆಡ್ಜ್ ಪ್ಲಾಜಾದ 1ನೇ ಫ್ಲೋರ್ ನಾರ್ತ್-ಈಸ್ಟ್. ಹರಪನಹಳ್ಳಿ ಕ್ಷೇತ್ರದ ಮತಯಂತ್ರಗಳನ್ನು ಸೈನ್ಸ್ ಬ್ಲಾಕ್‍ನ 1ನೇ ಫ್ಲೋರ್ ಸೌತ್-ವೆಸ್ಟ್, ಹರಿಹರ ಕ್ಷೇತ್ರದ ಇವಿಎಂಗಳನ್ನು ಸೈನ್ಸ್ ಬ್ಲಾಕ್ 1ನೇ ಫ್ಲೋರ್‍ನ ನಾರ್ತ್-ವೆಸ್ಟ್ ಕೊಠಡಿಯಲ್ಲಿ, ದಾವಣಗೆರೆ ಉತ್ತರ ಕ್ಷೇತ್ರದ ಮತ ಯಂತ್ರಗಳನ್ನು ನಾಲೆಡ್ಜ್ ಪ್ಲಾಜಾದ ಗ್ರೌಂಡ್ ಫ್ಲೋರ್ ಸೌತ್-ವೆಸ್ಟ್ ಕೊಠಡಿಯಲ್ಲಿ,
ದಾವಣಗೆರೆ ದಕ್ಷಿಣ ಕ್ಷೇತ್ರದ ಮತಯಂತ್ರಗಳನ್ನು ನಾಲೆಡ್ಜ್ ಪ್ಲಾಜಾದ ಗ್ರೌಂಡ್ ಫ್ಲೋರ್ ನಾರ್ತ್-ಈಸ್ಟ್ ಕೊಠಡಿಯಲ್ಲಿ ಮಾಯಕೊಂಡ ಕ್ಷೇತ್ರದ ಮತಯಂತ್ರಗಳನ್ನು ನಾಲೆಡ್ಜ್ ಪ್ಲಾಜಾದ 1ನೇ ಫ್ಲೋರ್‍ನ ಸೌತ್-ವೆಸ್ಟ್ ಕೊಠಡಿಯಲ್ಲಿ, ಚನ್ನಗಿರಿ ಕ್ಷೇತ್ರದ ಮತಯಂತ್ರಗಳನ್ನು ಸೋಷಿಯಲ್ ಬ್ಲಾಕ್ 1ನೇ ಫ್ಲೋರ್ ನಾರ್ತ್ ಕೊಠಡಿಯಲ್ಲಿ, ಹೊನ್ನಾಳಿ ಕ್ಷೇತ್ರದ ಮತ ಯಂತ್ರಗಳನ್ನು ಸೈನ್ಸ್ ಬ್ಲಾಕ್‍ನ 1ನೇ ಫ್ಲೋರ್ ಸೌತ್ ಕೊಠಡಿಯಲ್ಲಿ ಇರಿಸಲಾಗಿದ್ದು, ಮೇ.23ರಂದು ಆಯಾ ಕೊಠಡಿಗಳಲ್ಲಿಯೇ ಮತ ಎಣಿಕೆ ನಡೆಯಲಿದ್ದು, ಬುಧವಾರ ಬೆಳಗ್ಗೆ ಮತಯಂತ್ರಗಳಿರುವ ಕೊಠಡಿಗಳಿಗೆ ಬೀಗ ಹಾಕಿ, ಮುದ್ರೆ ಒತ್ತಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಹೆಚ್ಚುವರಿ ಎಸ್ಪಿ ಟಿ.ಜೆ.ಉದೇಶ್, ಡಿವೈಸ್ಪಿ, ಸಿಪಿಐ, ಪಿಎಸ್‍ಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಅಲ್ಲದೇ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಕೆಲವರು ಹಾಗೂ ಅವರ ಏಜೆಂಟರು ಹಾಜರಿದ್ದು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ವಿಡಿಯೊ ಚಿತ್ರೀಕರಣ:
ಮತಯಂತ್ರಗಳನ್ನು ಭದ್ರತಾ ಕೊಠಡಿಗೆ ತರುವುದು ಹಾಗೂ ಇಡುವುದಕ್ಕೆ ಚುನಾವಣಾ ಆಯೋಗ ಮಾರ್ಗಸೂಚಿ ನೀಡಿದೆ. ಜಿಪಿಎಸ್ ಉಪಕರಣ ಹೊಂದಿದ ವಾಹನದಲ್ಲಿಯೇ ಮತಯಂತ್ರಗಳನ್ನು ಸಾಗಣೆ ಮಾಡಲಾಗಿದೆ. ಸಿಬ್ಬಂದಿ ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ಇವುಗಳ ಮೇಲೆ ನಿಗಾ ಇಟ್ಟಿದ್ದರು.
ಭದ್ರತಾ ಕೊಠಡಿಗೆ ಭದ್ರತಾ ಲೋಪ ಉಂಟಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. . ಭದ್ರತಾ ಕೊಠಡಿಗಳನ್ನು ಇಟ್ಟಿರುವ ಕಟ್ಟಡಕ್ಕೆ ಸರ್ಪಗಾವಲು ಹಾಕಲಾಗಿದ್ದು ವಿವಿಧ ರಾಜ್ಯಗಳಿಂದ ಬಂದಿರುವ ಭದ್ರತಾ ಸಿಬ್ಬಂದಿ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಚುನಾವಣಾ ಸಿಬ್ಬಂದಿ ಹಾಗೂ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಇಲ್ಲಿ ಪ್ರವೇಶ ನೀಡುವುದಿಲ್ಲ. ಸಿಸಿಟಿವಿ ಕಣ್ಗಾವಲು: ಭದ್ರತಾ ಕೊಠಡಿ ಸೇರಿದಂತೆ ಇಡೀ ಕಟ್ಟಡಕ್ಕೆ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಇದೆ. ಪ್ರತಿ ಚಟುವಟಿಕೆಯೂ ಇದರಲ್ಲಿ ದಾಖಲಾಗುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
