ಬೈಕ್‍ಗೆ ಕಾರು ಡಿಕ್ಕಿ: ವಿದ್ಯಾರ್ಥಿನಿ ಸಾವು

ದಾವಣಗೆರೆ:

      ತರಗತಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಸಮೀಪದ ತೊಳಹುಣಸೆಯ ದಾವಣಗೆರೆ ವಿಶ್ವ ವಿದ್ಯಾನಿಲಯದ ಮುಖ್ಯ ದ್ವಾರದ ಎದುರು ಶನಿವಾರ ನಡೆದಿದೆ.
ದಾವಣಗೆರೆ ವಿವಿಯ ಗಣಿತ ವಿಭಾಗದ ವಿದ್ಯಾರ್ಥಿನಿ ಶೈಲಜಾ(23 ವರ್ಷ) ಮೃತಪಟ್ಟಿರುವ ನತದೃಷ್ಟ ವಿದ್ಯಾರ್ಥಿನಿಯಾಗಿದ್ದಾರೆ.

      ವಿದ್ಯಾರ್ಥಿನಿ ಶೈಲಜಾ ತರಗತಿ ಮುಗಿಸಿಕೊಂಡು ಮನೆಗೆ ಹೋಗಲೆಂದು ತಮ್ಮ ದ್ವಿಚಕ್ರ ವಾಹನದಲ್ಲಿ ವಿವಿಯಿಂದ ಹೊರಗೆ ಬರುತ್ತಿದ್ದಾಗ ಚಾಲಕನ ಅತೀ ವೇಗ, ಅಜಾಗರೂಕತೆಯ ವಾಹನ ಚಾಲನೆಯಿಂದ ನುಗ್ಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶೈಲಜಾ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿದೆ. ತಕ್ಷಣವೇ ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

      ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದ ಶೈಲಜಾರ ಅವರನ್ನು ಕುರ್ಕಿ ಗ್ರಾಮದ ಯುವರಾಜ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ನಂತರವೂ ಶೈಲಜಾಗೆ ಗಂಡನ ಮನೆಯವರು ಓದಿಸುತ್ತಿದ್ದರು. ಕಾಲೇಜು ಮುಗಿಸಿಕೊಂಡು ಮನೆಗೆ ವಾಪಾಸ್ಸಾಗಲೆಂದು ವಿವಿಯಿಂದ ಬರುತ್ತಿದ್ದಾಗ ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಆಕೆ ಮೃತಪಟ್ಟಿದ್ದಾಳೆ.

     ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ನಿತ್ಯವೂ ಸಾವಿರಾರು ವಾಹನ ಸಂಚರಿಸುತ್ತಿದ್ದು, ಅತೀ ವೇಗ, ಅಜಾಗರೂಕತೆ ವಾಹನ ಚಾಲನೆ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ದಾಟಲು, ದಾವಣಗೆರೆಯಿಂದ ವಿವಿಗೆ ಬರುವ ವಿವಿ ಗೇಟ್ ಪ್ರವೇಶಿಸುವಾಗ ಪ್ರಾಣ ಕೈಯಲ್ಲೇ ಹಿಡಿದು ವಾಹನ ತಿರುಗಿಸಬೇಕಿದೆ, ಭಯದಿಂದಲೇ ಹೆಜ್ಜೆ ಹಾಕಬೇಕಾದ ಪರಿಸ್ಥಿತಿ ಇಲ್ಲಿದೆ. ಇಡೀ ರಸ್ತೆಯಲ್ಲಿ ಹುಡುಕಿದರೂ ಸೂಚನಾ ಫಲಕಗಳಿಲ್ಲ. ರಸ್ತೆ ತಡೆಗಳೂ ಇಲ್ಲ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.

    ತಕ್ಷಣವೇ ಶಿವಗಂಗೋತ್ರಿ ದಾವಣಗೆರೆ ವಿವಿ ಸುತ್ತಮುತ್ತಲಿನ ಪ್ರದೇಶದಲ್ಲಿ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲಲ್ಲಿ ರೋಡ್ ಹಂಪ್ಸ್‍ಗಳನ್ನು, ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ವಾಹನಗಳು ನಿಧಾನವಾಗಿ ಸಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿ ಶೈಲಜಾ ಸಾವಿಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅಸಡ್ಡೆಯೂ ಕಾರಣವಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ