ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು : ಆರ್.ಜಿ.ಚನ್ನೇಗೌಡ

ಹಿರಿಯೂರು :

      ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ವೃತ್ತ ನಿರೀಕ್ಷಕ ಆರ್.ಜಿ.ಚನ್ನೇಗೌಡ ಹೇಳಿದರು.

      ನಗರದ ವಾಣಿ ಸಕ್ಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್‍ಕ್ರಾಸ್ ಮತ್ತು ರೋವರ್ಸ್ ಘಟಕಗಳ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

      ಇಂದು ಯಾವುದೇ ವಿಷಯ ಅಧ್ಯಯನ ಮಾಡುವುದು ವ್ಯರ್ಥವಲ್ಲ. ಕಲಾ, ವಾಣಿಜ್ಯ ವಿಭಾಗಗಳನ್ನು ತೆಗೆದುಕೊಂಡವರು ಕೂಡಾ ಶ್ರದ್ದೆಯಿಂದ ವ್ಯಾಸಂಗ ಮಾಡಿದರೆ ಭವಿಷ್ಯತ್ತಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಆದರೆ ಇಂದು ಬಹಳಷ್ಟು ವಿದ್ಯಾರ್ಥಿಗಳು ಫೇಸ್‍ಬುಕ್, ವಾಟ್ಸಾಪ್, ಯೂಟೂಬ್, ಮೊಬೈಲ್ ಗೀಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವುಗಳನ್ನು ಧನಾತ್ಮಕವಾಗಿ ಉಪಯೋಗಿಸಿದರೆ ಸಮಾಜ ಹಾಗೂ ಕುಂಟುಂಬಕ್ಕೆ ಒಳ್ಳೆಯ ಹೆಸರು ತರಬಹುದು ಎಂದರು.

      ಚಿತ್ರದುರ್ಗ ಮಹಾರಾಜ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ವಿ.ಬಸವರಾಜ್ ಮಾತನಾಡಿ, ವಿಶ್ವದಲ್ಲಿಯೇ ಅತಿಶ್ರೇಷ್ಠವಾದ ಸಂಪತ್ತು ಎಂದರೆ ಜ್ಞಾನಸಂಪತ್ತು, ಆದ್ದರಿಂದ ವಿದ್ಯಾರ್ಥಿಗಳು ಈ ಜ್ಞಾನವನ್ನು ಬೆಳೆಸುವಂತಹ ಓದುವುದು ಹಾಗೂ ಬರೆಯುವುದನ್ನು ರೂಡಿಸಿಕೊಳ್ಳಬೇಕು. ಅಂಕಗಳಿಕೆ ಮಾತ್ರ ಸೀಮಿತವಾಗದೇ ಕೌಶಲ್ಯ, ಸಂವಹನ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದರು.

      ಇದೇ ಸಂದರ್ಭದಲ್ಲಿ 2018-19ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾಲಯದ ಬಿ.ಕಾಂನಲ್ಲಿ 5ನೇ ರ್ಯಾಂಕ್‍ಗಳಿಸಿದ ಬಿ.ಎಸ್.ಕಸ್ತೂರಿ ಹಾಗೂ ಬಿ.ಎ.ಎಸ್.ಕೆ.ಎಚ್ ವಿಭಾಗದಲ್ಲಿ 5ನೇ ರ್ಯಾಂಕ್‍ಗಳಿಸಿದ ಎನ್.ಹೇಮಲತಾ ಅವರಿಗೆ ಶಾಶ್ವತ ದತ್ತಿನಿಧಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

      ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಧರಣೇಂದ್ರಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯ ಡಾ.ಜಗನ್ನಾಥ್, ದೈಹಿಕ ಶಿಕ್ಷಣ ನಿರ್ದೇಶಕ ತಿಪ್ಪೇಸ್ವಾಮಿ, ಪ್ರಾಧ್ಯಾಪಕರಾದ ಜಿ.ಎಸ್.ರಾಮಪ್ಪ, ಡಾ.ಗೀರಿಶನಾಯಕ, ಜಗನ್ನಾಥ್, ಆರ್.ಪುಷ್ಪಲತಾ, ಸಿದ್ದಲಿಂಗಯ್ಯ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link