ಬೆಂಗಳೂರು
ಚಿಕ್ಕಪ್ಪನ ಜೊತೆಗಿನ ಜಗಳದಿಂದ ಬೇಸತ್ತ ಪಿಯುಸಿ ವಿದ್ಯಾರ್ಥಿಯೊಬ್ಬ ಅಪಾರ್ಟ್‍ಮೆಂಟ್‍ನ 11ನೇ ಮಹಡಿಯಿಂದ ಕೆಳಗೆಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.
ವರ್ತೂರಿನ ಪಿಐಎಸ್‍ಪಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸಾಕೇತ್ ರೆಡ್ಡಿ (16) ಮೃತ ವಿದ್ಯಾರ್ಥಿಯಾಗಿದ್ದಾನೆ. ಬಿಟಿಎಂ ಲೇಔಟ್‍ನ 24ನೇ ಕ್ರಾಸ್‍ನ ಪಾರ್ಕ್ ಅವಿನ್ಯೂ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಸಾಕೇತ್ ರೆಡ್ಡಿ ಕಳೆದ ಬುಧವಾರ ರಾತ್ರಿ 10ರ ವೇಳೆ 2ನೇ ಮಹಡಿಯ ಮನೆಯಿಂದ 11ನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಜಿಗಿದಿದ್ದಾನೆ.
2ನೇ ಮಹಡಿಯ ಬಾಲ್ಕನಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ಸಾಕೇತ್ ರೆಡ್ಡಿ ಅವರ ತಂದೆ ಸುರೇಶ್ ರೆಡ್ಡಿ ಹಾಗೂ ತಾಯಿ ಕೆಲಸದ ಮೇಲೆ ಆಂಧ್ರಾಕ್ಕೆ ತೆರಳಿದ್ದರು. ತಂಗಿಯ ಜೊತೆ ಇದ್ದ ಸಾಕೇತ್ ರೆಡ್ಡಿಯನ್ನು ನೋಡಿಕೊಳ್ಳಲು ಅದೇ ಅಪಾರ್ಟ್‍ಮೆಂಟ್‍ನಲ್ಲಿ 4ನೇ ಮಹಡಿಯಲ್ಲಿದ್ದ ಸೋದರ ಶ್ರೀನಾಥ್ ರೆಡ್ಡಿಗೆ ಹೇಳಿಹೋಗಿದ್ದರು.
ಮಾರ್ಚ್ 20 ರಂದು ರಾತ್ರಿ ಶ್ರೀನಾಥ್ ರೆಡ್ಡಿ ಹಾಗೂ ಸಾಕೇತ್ ರೆಡ್ಡಿಗೆ ಗಲಾಟೆಯಾಗಿದ್ದು, ಇದರಿಂದ ನೊಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.ಹೆಚ್‍ಎಸ್‍ಆರ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಇಶಾಪಂಥ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








