ವಿದ್ಯಾರ್ಥಿಗಳಿಗೆ ಮೇ. 16 ರಿಂದ ಮಾಹಿತಿ ಶಿಬಿರ ಆಯೋಜನೆ- ವಿನೋತ್ ಪ್ರಿಯಾ

ಚಿತ್ರದುರ್ಗ

      ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ಎಸ್‍ಎಸ್‍ಎಲ್‍ಸಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಇರುವ ಶೈಕ್ಷಣಿಕ ಅವಕಾಶಗಳೇನು ಎಂಬುದರ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತಾಲ್ಲೂಕುವಾರು ಮಾಹಿತಿ ಶಿಬಿರ ಆಯೋಜಿಸಿದ್ದು, ಸೂಕ್ತ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಪಿಯುಸಿ ಫಲಿತಾಂಶದ ವಿಶ್ಲೇಷಣೆ ಹಾಗೂ ಎಸ್‍ಎಸ್‍ಎಲ್‍ಸಿ ಪಾಸಾದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಆಯೋಜನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಈ ಬಾರಿಯ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ರಾಜ್ಯದಲ್ಲಿ 6 ನೇ ಸ್ಥಾನ ಪಡೆದುಕೊಂಡಿದೆ. ಆದರೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಗಮನಿಸಿದಾಗ, ಕೊನೆಯ ಸ್ಥಾನಕ್ಕೆ ಕುಸಿದಿದೆ. ದ್ವಿತೀಯ ಪಿಯು ಫಲಿತಾಂಶ ಇಷ್ಟೊಂದು ಕುಸಿತಕ್ಕೆ ಕಾರಣಗಳನ್ನು ಗಮನಿಸಿದಾಗ, ನಿರಾಸಕ್ತಿ ವಿಷಯಗಳ ಹಾಗೂ ಸಾಮಥ್ರ್ಯ ಮೀರಿದ ವಿಷಯಗಳ ವ್ಯಾಸಂಗಕ್ಕೆ ಕುಟುಂಬದಲ್ಲಿನ ಒತ್ತಡ,

       ಸ್ನೇಹಿತರ ಪ್ರಭಾವ ಹೀಗೆ ಬಹಳಷ್ಟು ಅಂಶಗಳು ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ವಿಜ್ಞಾನ ವಿಷಯ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳ ಪೈಕಿ ಬಹಳಷ್ಟು ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಫೇಲ್ ಆಗಿದ್ದರೆ, ಕಲಾ ವಿಭಾಗದ ವಿದ್ಯಾರ್ಥಿಗಳು ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದಾರೆ.

       ಇವೆಲ್ಲವನ್ನು ಗಮನಿಸಿದಾಗ, ವಿದ್ಯಾರ್ಥಿಗಳು ಪಿಯುಸಿ ವಿಷಯ ಅಧ್ಯಯನ ಮಾಡುವುದಕ್ಕೂ ಪೂರ್ವದಲ್ಲಿ ತನಗೆ ಯಾವ ವಿಷಯದ ಅಧ್ಯಯನಕ್ಕೆ ಆಸಕ್ತಿ ಹಾಗೂ ಸಾಮಥ್ರ್ಯ ಇದೆ. ಯಾವ ಕೋರ್ಸ್‍ಗಳನ್ನು ಅಧ್ಯಯನ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.

       ಕೇವಲ ವಿಜ್ಞಾನ ವಿಷಯ ಓದಿದರೆ ಮಾತ್ರ ಹೆಚ್ಚಿನ ಅವಕಾಶಗಳು ಎಂಬ ಕಲ್ಪನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದು, ಇತರೆ ವಿಷಯಗಳಲ್ಲಿಯೂ ಹೆಚ್ಚಿನ ಅವಕಾಶಗಳಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಮಾಹಿತಿ ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ.

       ಮೇ. 16 ರಂದು ಚಿತ್ರದುರ್ಗದ ತ.ರಾ.ಸು. ರಂಗಮಂದಿರದಲ್ಲಿ, ಮೇ. 17 ರಂದು ಚಳ್ಳಕೆರೆಯ ಬಿ.ಎಂ. ಸರ್ಕಾರಿ ಪ್ರೌಢಶಾಲೆ. ಮೇ. 18 ರಂದು ಹೊಳಲ್ಕೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮೇ. 20 ರಂದು ಹಿರಿಯೂರಿನ ಗುರುಭವನದಲ್ಲಿ, ಮೇ. 21 ರಂದು ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೇ. 22 ರಂದು ಮೊಳಕಾಲ್ಮೂರಿನ ಗುರುಭವನದಲ್ಲಿ ಮಾಹಿತಿ ಶಿಬಿರ ಆಯೋಜಿಸಲಾಗಿದೆ.

      ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಬೇಕು. ವಿದ್ಯಾರ್ಥಿಗಳೊಂದಿಗೆ ಸಂವಹನದಲ್ಲಿ ನುರಿತರಾಗಿರುವ ವಿಷಯತಜ್ಞರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಬೇಕು. ವಿಷಯಾಧಾರಿತ, ಆಸಕ್ತಿ ಆಧಾರಿತ ವಿದ್ಯಾರ್ಥಿಗಳನ್ನು ವಿಷಯವಾರು 4 ವಿಭಾಗಗಳಲ್ಲಿ ವಿಂಗಡಿಸಬೇಕು.

        ವಿದ್ಯಾರ್ಥಿ ತನ್ನ ಪೋಷಕರೊಂದಿಗೆ ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಯಾವ ವಿಷಯದ ಬಗ್ಗೆ ಆಸಕ್ತಿ ಇದೆಯೋ, ಆ ವಿಷಯದ ವಿಭಾಗದ ಬಗ್ಗೆ ಮಾಹಿತಿ ಪಡೆಯುವಂತಾಗಬೇಕು. ಅಗತ್ಯವಿದ್ದಲ್ಲಿ ಮಕ್ಕಳಿಗೆ ಆಸಕ್ತಿಯುತ, ಇಷ್ಟ-ಕಷ್ಟಗಳ ಬಗ್ಗೆ ಪೋಷಕರ ಸಮ್ಮುಖದಲ್ಲಿ ಸಂವಾದ ನಡೆಸುವಂತೆ ಸೂಚನೆ ನೀಡಿದರು.

        ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯಗಳನ್ನು ಪಡೆದು, ದ್ವಿತೀಯ ಪಿಯುಸಿ ಅಥವಾ ಇತರೆ ಕೋರ್ಸ್ ವ್ಯಾಸಂಗ ಮಾಡಲಿ, ಒಟ್ಟಾರೆ, ಈ ಬಾರಿ ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷಾ ಫಲಿತಾಂಶ ಉತ್ತಮಗೊಳ್ಳಬೇಕು. ಯಾವುದೇ ವಿದ್ಯಾರ್ಥಿ ಅನುತ್ತೀರ್ಣನಾಗಿ, ಶೈಕ್ಷಣಿಕವಾಗಿ ಹಿಂದುಳಿಯುವುದು ಬೇಡ, ಅದರ ಜೊತೆಗೆ ಈ ಬಾರಿ ಶಾಲೆಯಿಂದ ಯಾವುದೇ ವಿದ್ಯಾರ್ಥಿ ಹೊರಗುಳಿಯದಂತೆ, ಶಾಲೆಗಳು ಪ್ರಾರಂಭವಾದ ಕೂಡಲೆ ಶಾಲಾ ದಾಖಲಾತಿ ಆಂದೋಲನ ಏರ್ಪಡಿಸುವಂತೆ ತಾಕೀತು ಮಾಡಿದರು.

        ಡಿಡಿಪಿಐ ಅಂಥೋನಿ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪಾಸಾಗಿರುವ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಗತಿಗೆ ಪ್ರತಿ ತಾಲ್ಲೂಕಿನಲ್ಲಿಯೂ ಮಾಹಿತಿ ಶಿಬಿರವನ್ನು ಆಯೋಜಿಸಲಾಗುವುದು. ವಿಷಯ ಹಾಗೂ ಶೈಕ್ಷಣಿಕ ಕೋರ್ಸ್‍ಗಳ ವಿಭಾಗವಾರು ಆಧಾರಿತ ವಿದ್ಯಾರ್ಥಿಗಳನ್ನು ವಿಷಯವಾರು 4 ವಿಭಾಗಗಳಲ್ಲಿ ವಿಂಗಡಿಸಲಾಗುವುದು.

       ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ (ಪಿಸಿಎಂಬಿ), ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ (ಹೆಚ್‍ಇಪಿಎಸ್), ಇತಿಹಾಸ, ಅರ್ಥಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ (ಹೆಚ್‍ಇಬಿಎ). ಹಾಗೂ ತಾಂತ್ರಿಕ ಶಿಕ್ಷಣ ಜೊತೆಗೆ ಐಟಿಐ ಶಿಕ್ಷಣ ಸೇರಿದಂತೆ ಇತರೆ ಲಭ್ಯವಿರುವ ಕೋರ್ಸ್‍ಗಳ ಬಗ್ಗೆ ಅಲ್ಲದೆ ಈ ಕೋರ್ಸ್‍ಗಳ ವ್ಯಾಸಂಗದಿಂದ ವಿದ್ಯಾರ್ಥಿಗಳಿಗೆ ಲಭ್ಯವಾಗಬಹುದಾದ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಮೇ. 29 ರಿಂದ ಆರಂಭವಾಗಲಿದ್ದು, ಜೂನ್ ಮೊದಲನೆ ವಾರ ಜಿಲ್ಲೆಯಾದ್ಯಂತ ಮಕ್ಕಳ ದಾಖಲಾತಿ ಆಂದೋಲನ ಏರ್ಪಡಿಸಲಾಗುವುದು ಎಂದು ತಿಳಿಸಿದರು.

       ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ನರಸಿಂಹಪ್ಪ, ಸೇರಿದಂತೆ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap