ಚಳ್ಳಕೆರೆ
ಶಿಕ್ಷಣ ಇಲಾಖೆ ಇತ್ತೀಚಿನ ದಿನಗಳಲ್ಲಿ ಹಲವಾರು ಬದಲಾವಣೆಗಳ ಮೂಲಕ ಶಿಕ್ಷಣ ಕ್ರಾಂತಿಯನ್ನೇ ಪ್ರಾರಂಭಿಸಿದೆ. ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವೃತ್ತಿ ಪರ ಶಿಕ್ಷಣ, ಜ್ಞಾನದ ಜೊತೆಗೆ ಪರಿಸರ ಜಾಗೃತಿಯನ್ನುಂಟು ಮಾಡುವ ಕಾರ್ಯ ಸಾಗಿದೆ. ಈ ನಿಟ್ಟಿನಲ್ಲಿ ವೃತ್ತಿಪರ ಶಿಕ್ಷಕರ ಕಾರ್ಯಚಟುವಟಿಕೆ ಶ್ಲಾಘನೀಯವಾದದ್ದು ಎಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಧಿಕಾರಿ, ಪರಿವೀಕ್ಷಕ ಸಿ.ಎಂ.ತಿಪ್ಪೇಸ್ವಾಮಿ ತಿಳಿಸಿದರು.
ಅವರು, ಮಂಗಳವಾರ ನಗರದ ಹೊರವಲಯದಲ್ಲಿರುವ ಆದರ್ಶ ಶಿಕ್ಷಣ ವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವೃತ್ತಿ ಪರ ಶಿಕ್ಷಕರ ಸಮಾವೇಶನದಲ್ಲಿ ಶಿಕ್ಷಣ ಇಲಾಖೆ ಹೊರ ತಂದಿರುವ ಹಸಿರು ಸಿರಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಪುಸ್ತಕದಲ್ಲಿ ಶಾಲಾ ಆವರಣದ ಪರಿಸರ ಜಾಗೃತಿಯ ಬಗ್ಗೆ ಗಮನ ಸೆಳೆಯಲಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಜ್ಞಾನವನ್ನು ಅರಿತರೆ ಸಾಲದು, ಬದಲಾಗಿ ಬದುಕಿಗೆ ಅಮೂಲ್ಯವಾದ ನೈಸರ್ಗಿಕ ಕಾಳಜಿಯ ಬಗ್ಗೆಯೂ ಸಹ ಅರಿತುಕೊಳ್ಳಬೇಕೆಂದರು.
ಜಿಲ್ಲಾ ಶಿಕ್ಷಣಾಧಿಕಾರಿ ಪಿ.ರಾಮಯ್ಯ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕೃಷಿ ಚಟುವಟಿಕೆ ಬಗ್ಗೆಯೂ ಸಹ ಮಾಹಿತಿ ನೀಡಬೇಕಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಹೆಚ್ಚು ತಿಳಿಯುವ ಅವಶ್ಯಕತೆ ಇದೆ. ಕೃಷಿ ಈ ರಾóಷ್ಟ್ರದ ಮೂಲಬೆನ್ನೆಲುಬು. ಕೈಗಾರಿಕೆಗಳನ್ನು ಹೊರತು ಪಡಿಸಿದರೆ ಕೃಷಿಯೇ ಎಲ್ಲರ ಬದುಕಿಗೆ ಆಧಾರ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಬಗ್ಗೆ ಮಾರ್ಗದರ್ಶನ ನೀಡುವುದು ಅವಶ್ಯಕವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಯಲ್ಲೇ ನೈಸರ್ಗಿಕ ಸಂಪತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯ ಮಹತ್ವಪೂರ್ಣವಾಗಿದೆ. ಪ್ರತಿಯೊಂದು ಶಾಲೆಗಳಲ್ಲೂ ಶಿಕ್ಷಕರು ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೈತೋಟ ಬೆಳೆಸುವ ಮೂಲಕ ಗಿಡಗಳ ಸಂರಕ್ಷಣೆಯ ಬಗ್ಗೆ ತಿಳಿಸಬೇಕಿದೆ. ನಮ್ಮ ಸುತ್ತಲು ಮರಗಿಡಗಳು ಇದ್ದಲ್ಲಿ ಮಾತ್ರ ನಾವು ಬದಕಲು ಸಾಧ್ಯ. ಯಾವುದೇ ಹಂತದಲ್ಲೂ ಮರಗಳನ್ನು ಕಡಿಯದೆ ಅವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ.
ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ, ಪ್ರಾರಂಭದ ಹಂಥದಲ್ಲಿ ವೃತ್ತಿಪರ ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಪರಿಸರ ರಕ್ಷಣೆಗೆ ಪೂರಕವಾಗಿದ್ದು, ವೃತ್ತಿಪರ ಶಿಕ್ಷಕರು ಪರಿಶ್ರಮದಿಂದ ಕಾರ್ಯನಿರ್ವಹಿಸಿ ಪರಿಸರ ರಕ್ಷಣೆಯ ಜೊತೆಗೆ ಪರಿಸರದಿಂದ ಆಗುವ ಸೌಲಭ್ಯಗಳ ಬಗ್ಗೆಯೂ ಸಹ ಮಾಹಿತಿ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ವಹಿಸಿದ್ದರು. ವೇದಿಕೆಯಲ್ಲಿ ತಿಪ್ಫೇಸ್ವಾಮಿ, ವಿಷಯ ಪರಿವೀಕ್ಷಕರಾದ ಸುನಿತಾ, ಗೋವಿಂದಪ್ಪ, ತೋಟಗಾರಿಕೆ ಅಧಿಕಾರಿ ಮಂಜುನಾಥ, ಕೃಷಿ ಅಧಿಕಾರಿ ಗಿರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.