ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಸೃಜನ-2019 ಹೆಸರಿನ ಈ ಶೈಕ್ಷಣಿಕ ಸಾಲಿನ ಕ್ರೀಡೆ, ಎನ್.ಎಸ್.ಎಸ್., ಎನ್.ಸಿ.ಸಿ., ರೆಡ್‍ಕ್ರಾಸ್, ಸ್ಕೌಡ್ಸ್ ಮತ್ತು ಗೈಡ್ಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್.ನಾಗಣ್ಣ ಅವರು ಮಾತನಾಡಿ, ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಬೇಕು. ಸಾಮಾಜಿಕ ಜಾಲತಾಣಗಳಿಗೆ ದಾಸರಾಗಬಾರದು, ಕಲಿಯುವ ದಿನಗಳಲ್ಲಿ ವಿದ್ಯಾರ್ಜನೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಸಲಹೆಗಳನ್ನು ನೀಡಿದರು.
ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಮಾತನಾಡಿ, ಈ ಕಾಲೇಜು ಹಲವು ಮಹನಿಯರು ಭವಿಷ್ಯ ರೂಪಿಸಿಕೊಂಡ ಕಾಲೇಜಾಗಿದೆ. ನೀವುಗಳು ಸಹ ಅವರಂತೆ ಆಗಬೇಕು. ನೀವೆಲ್ಲರು ಅತಿಬುದ್ದಿವಂತರಾಗಿದ್ದು, ಸಮಯ ಪ್ರಜ್ಞೆ ಕಡಿಮೆಯಾಗಿದೆ. ಆದ್ದರಿಂದ ನಿಮ್ಮ ಹೊಣೆಗಾರಿಕೆಯನ್ನು ಅರಿತು ನಿಮ್ಮ ವ್ಯಕ್ತಿತ್ವವನ್ನು ಪರಿಪೂರ್ಣತೆ ಕಡೆಗೆಕೊಂಡೊಯ್ಯಬೇಕು ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಮತ್ತೊಬ್ಬ ಅತಿಥಿಗಳು ಹೃದ್ರೋಗತಜ್ಞ ಡಾ||ಯೋಗಣ್ಣ ಎಸ್.ಡಿ ಮಾತನಾಡಿ, ದೇಹ ಶೃಂಗಾರಕ್ಕಿಂತ ಮನಸ್ಸಿನ ಶೃಂಗಾರ ಮುಖ್ಯವಾದುದು. ಇಡೀ ಸೃಷ್ಠಿಯಲ್ಲಿ ಮನಸ್ಸಿಗಿಂತ ಶಕ್ತಿಶಾಲಿಯಾದ ಮತ್ತೊಂದು ಸಾಧನವಿಲ್ಲ. ಹಾಗಾಗಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕಾದ ಅಗತ್ಯ ತುಂಬಾ ಇದೆ ಎಂದು ಹೇಳಿದರು. ಕುಲಸಚಿವರು ಮಾತನಾಡಿ ನಿಮ್ಮ ಕನಸುಗಳು ನನಸಾಗಲು ಅಧ್ಯಯನಶೀಲತೆ ಮುಖ್ಯವಾಗಿದು. ಅದಕ್ಕೆ ಪರಿಶ್ರಮ ಅಗತ್ಯ. ಆದ್ದರಿಂದ ಆ ನಿಮ್ಮ ಪರಿಶ್ರಮವು ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ವಿಜ್ಞಾನಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ಬಿ.ಆರ್ ಅವರು ಅಧ್ಯಕ್ಷತೆವಹಿಸಿ, ವಿಜ್ಞಾನದ ವಿದ್ಯಾರ್ಥಿಗಳು ಕೇವಲ ಸರಕು ಉತ್ಪಾದಿಸುವವರಷ್ಟೆಯಲ್ಲ ಮಾನವೀಯ ಮೌಲ್ಯವುಳ್ಳವರು. ಕಲಾ ಆರಾಧಕರು, ಅಶಕ್ತರಿಗೆ ಶಕ್ತಿ ತುಂಬುವವರು, ಭಾವನಾಜೀವಿಗಳು ಎಂಬುದಾಗಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಗಣ್ಯರನ್ನು ದ್ವಾರಕನಾಥ್ ಅವರು ಸ್ವಾಗತಿಸಿದರು, ಭರತ್ ಶಿಲ್ಪಿ ಪ್ರಾರ್ಥನೆ ಮಾಡಿದರು, ರಾಜಲಕ್ಷ್ಮಿಅ.ಗೋವನಕೊಪ್ಪ ವಂದಿಸಿದರು, ಡಾ.ಗೀತಾ ವಸಂತ ನಿರೂಪಣೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
