ಕುಣಿಗಲ್
ನಾಡಬ್ಬವಾದ ದಸರಾವನ್ನು ಈ ಬಾರಿ ಬಿಸಿಲಿನ ತಾಪ ಬೆಂಬಿಡದೆ ಕಾಡಿತ್ತು. ಜನರು ಬಿಸಿಲಿನ ಝಳಪಕ್ಕೆ ಅಲ್ಲಲ್ಲಿ ನೆರಳುಡುಕುತ್ತ ಸಾವಕಾಶದಿಂದ ತಮ್ಮ ತಮ್ಮ ಹಬ್ಬದೋಪಕರಣಗಳನ್ನ ಕೊಳ್ಳುವ ತವಕದಲ್ಲಿದ್ದರು. ಆದರೆ ಈ ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಜೈ ಘೋಷದೊಂದಿಗೆ ವಿದ್ಯಾರ್ಥಿಗಳ ಸಾಲು ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತಕ್ಕೆ ಆಗಮಿಸಿದ್ದನ್ನು ಕಂಡ ಜನರು ಕುತುಹಲ, ಅಚ್ಚರಿಯೊಂದಿಗೆ ತಮ್ಮ ವ್ಯವಹಾರಗಳನ್ನ ಬಿಟ್ಟು ವಿದ್ಯಾರ್ಥಿಗಳನ್ನೇ ನೋಡುವಂತೆ ಮಾಡಿದ್ದು ಮಾತ್ರ ಈ ನವದುರ್ಗಿಯರು.
ಅಂದರೆ ಶ್ರೀ ಚಾಮುಂಡೇಶ್ವರಿಯ ಅವತಾರಗಳನ್ನ ಧರಿಸಿದ್ದ ಜ್ಞಾನಭಾರತಿ ಕಾಲೇಜು ವಿದ್ಯಾರ್ಥಿನಿಯರು. ಇಂತಹ ಅಪರೂಪದ ದೃಶ್ಯವನ್ನು ಕಣ್ಣಾರೆ ಕಂಡ ಜನರು ಸಂತೋಷವ್ಯಕ್ತಪಡಿಸುತ್ತ ವಿದ್ಯಾರ್ಥಿಗಳಿಗೆ ಶುಭಕೋರಿ ಆಶೀರ್ವದಿಸಿದರು.ಒಂದಲ್ಲಾ ಒಂದು ವಿನೂತನ ಸಾಂಪ್ರಾದಾಯಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ತಾಲೂಕಿನ ಜನಮಾನಸದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿರುವ ಕಾಲೇಜು ಈ ಜ್ಞಾನಭಾರತಿ.
ವಿಭಿನ್ನವಾದ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥಸ್ವಾಮಿ ಸೇರಿದಂತೆ ಗಣ್ಯರು ಪ್ರಶಂಸೆಗೆ ಕಾರಣವಾಯಿತು. ಸಾಮಾಜಿಕ ಜಾಲತಾಣವನ್ನ ನೋಡಿ ಶೇರ್ ಮಾಡುವ ಮೂಲಕ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರ ಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ದಿದಾತ್ರಿ ಮತ್ತು ಆದಿಶಕ್ತಿಯರ ಹಾಗೂ ಮಹಿಸಾಸುರ ವೇಷಧಾರಿಗಳಾಗಿ ಅದ್ಬುತ ನೃತ್ಯ ಪ್ರದರ್ಶನ ನೀಡಿದ ವಿದ್ಯಾರ್ಥಿನಿಯರಾದ ಕಾವ್ಯ, ಅನುಷ, ಸಿಂಧು, ಮೋನಿಕಾ, ಪದ್ಮಾವತಿ, ನಿತ್ಯಶ್ರೀ, ಆಶಾ, ಅರ್ಪಿತ, ಪ್ರಿಯಾಂಕ, ರೋಹನ್ ಅವರಿಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯ ಕಪನಿಪಾಳ್ಯ ರಮೇಶ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಮಾಜಿ ಶಾಸಕ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಬಿ. ರಾಮಸ್ವಾಮಿಗೌಡ ಮತ್ತು ಕಾರ್ಯದರ್ಶಿ ಅನಂತಯ್ಯ ನಿರ್ದೇಶಕ ಬಿ.ಎಂ.ಹುಚ್ಚೇಗೌಡ ಸಮ್ಮುಖದಲ್ಲಿ ಆಯೋಜಿಸಿದ್ದ ಆಯುಧಪೂಜೆ ಮತ್ತು ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಒಂದೊಂದು ತರಗತಿಯವರು ಒಂದೊಂದು ಬಣ್ಣದ ವಸ್ತ್ರ ತೊಟ್ಟು ನವರಾತ್ರಿ ಹಬ್ಬಕ್ಕೆ ರಂಗು ನೀಡಿದರು.
ಅದ್ಬುತ ಪ್ರದರ್ಶನ ನೀಡಿದರು. ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್, ಗ್ರಾಮದೇವತೆ ಮತ್ತು ಮಂದೇಮಾರಮ್ಮ ದೇವಾಲಯಗಳ ಆವರಣದಲ್ಲಿ ಪ್ರದರ್ಶನ ನೀಡಿದರು. ಬಳಿಕ ಬೆಳ್ಳೂರು ಬಳಿಯ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ದರ್ಶನ ಪಡೆದು ಭಕ್ತರ ಸಮ್ಮುಖದಲ್ಲಿ ನವದುರ್ಗಿಯರು ಮಹಿಸಾಸುರನನ್ನು ವರ್ಧಿಸುವ ಪ್ರದರ್ಶನವನ್ನು ನೀಡಿ ಅಲ್ಲಿನ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮೆಚ್ಚುಗೆಗೆ ಪಾತ್ರರಾದರು.
ಅಲ್ಲಿಂದ ವಾಪಾಸ್ಸಾಗಿ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ದರ್ಶನ ಮುಗಿಸಿ ಸನ್ನಿಧಿಯಲ್ಲಿ ಸಾವಿರಾರು ಪ್ರವಾಸಿಗರು ಮತ್ತು ಭಕ್ತರ ಸಮ್ಮುಖದಲ್ಲಿ ಪ್ರದರ್ಶನ ನೀಡಿ ನೆರೆದಿದ್ದ ಭಕ್ತ ಸಮೂಹ ಭಾವಪರವಶವಾಗುವಂತೆ ಮಾಡಿದರು. ಈ ರೋಮಾಂಚಕ ದೃಶ್ಯವನ್ನು ಕಂಡು ಭಕ್ತಿಯ ಹೊನಲಲ್ಲಿ ತೇಲಿದರು.
ಇದಕ್ಕೂ ಮುನ್ನ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತರಗತಿ ಕೊಠಡಿಗಳನ್ನು ತಳಿರು, ತೋರಣ ಹೂಗಳಿಂದ ಸಿಂಗರಿಸಿ ಸರಸ್ವತಿ ಮಾತೆಯನ್ನು ಪ್ರತಿಷ್ಟಾಪಿಸಿ ಭಕ್ತಿ ಸಮರ್ಪಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ವರ್ಣಾಲಂಕಾರವನ್ನು ಪುರುಷೋತ್ತಮ್ ಮಾಡಿದರು. ನಿರ್ದೇಶಕರಾದ ಸೋಮಣ್ಣ, ಮುಖ್ಯ ಶಿಕ್ಷಕಿ ಗಂಗಮ್ಮ, ಪ್ರಸನ್ನಕುಮಾರ್, ಸುಪ್ರೀತ್, ಉಪನ್ಯಾಸಕರು, ವಿದ್ಯಾರ್ಥಿಗಗಳು, ಹಾಜರಿದ್ದರು..