ಹುಳಿಯಾರು
ಬಸ್‍ಪಾಸ್ ಇದ್ದರೂ ಸಹ ಐಡಿ ಕಾರ್ಡ್ ಇಲ್ಲವೆಂದು ಶಾಲಾ ವಿದ್ಯಾರ್ಥಿಗಳನ್ನು ಮಾರ್ಗ ಮಧ್ಯದಲ್ಲಿ ಇಳಿಸಿ ಹೋದ ಬಸ್ ಕಂಡಕ್ಟರ್‍ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ನಡೆದಿದೆ.ಹುಳಿಯಾರಿನ ವಾಸವಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸದುರ್ಗ ತಾಲ್ಲೂಕಿನ ಕೈನಡು ಗ್ರಾಮದ ವಿದ್ಯಾರ್ಥಿಗಳು ಶಾಲೆ ಮುಗಿಸಿಕೊಂಡು ಊರಿಗೆ ಹಿಂದಿರುಗುವ ಸಲುವಾಗಿ ತುಮಕೂರು ಡಿಪೋದ ಬೆಂಗಳೂರು-ಶಿವನಿ ಕೆಎಸ್‍ಆರ್‍ಟಿಸಿ ಬಸ್ (ಕೆ.ಎ.06-ಎಫ್-1160) ಗೆ ಹತ್ತಿದ್ದಾರೆ.
ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಬಸ್‍ಪಾಸ್ ತೋರಿಸಿದ್ದರೂ ಸಹ ಕಂಡಕ್ಟರ್ ಶಾಲೆಯ ಐಡಿಕಾರ್ಡ್ ಕೇಳಿದ್ದಾರೆ. ಆದರೆ ಐಡಿ ಕಾರ್ಡ್ ಮನೆಯಲ್ಲಿ ಮರೆತು ಬಂದಿರುವುದಾಗಿ ಹೇಳಿದರೂ ಸಹ ಕೇಳದೆ ತಕ್ಷಣ ಮಾರ್ಗ ಮಧ್ಯದಲ್ಲೇ ಬಸ್ ನಿಲ್ಲಿಸಿ ವಿದ್ಯಾರ್ಥಿನಿಯರನ್ನು ಇಳಿಸಿ ಹೋಗಿದ್ದಾರೆ.
ಮೊದಲೇ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಾಗಿದ್ದರಿಂದ ಆತಂಕಗೊಂಡು ಅಳಲು ಆರಂಭಿಸಿದ್ದಾರೆ. ಇದನ್ನು ಕಂಡ ಯಳನಾಡು ಗ್ರಾಮಸ್ಥರು ಮಕ್ಕಳಿಗೆ ಧೈರ್ಯ ಹೇಳಿ ನಂತರದ ಬಸ್‍ಗೆ ಹತ್ತಿಸಿ ವಿದ್ಯಾರ್ಥಿನಿಯರನ್ನು ಊರಿಗೆ ಕಳುಹಿಸಿ ಕೊಟ್ಟಿದ್ದಾರೆ.ಶಿವಾನಿಯಿಂದ ಬೆಂಗಳೂರಿಗೆ ವಾಪಸ್ ಆಗುವಾಗ ಯಳನಾಡು ಬಳಿ ಗ್ರಾಮಸ್ಥರು ಬಸ್ ತಡೆದಿದ್ದಾರೆ.
ಪಾಸ್ ತೋರಿಸಿದ್ದರೂ ಮಾರ್ಗ ಮಧ್ಯೆ ಶಾಲಾ ವಿದ್ಯಾರ್ಥಿನಿಯರನ್ನು ಅದರಲ್ಲೂ ಸಣ್ಣ ಮಕ್ಕಳನ್ನು ಇಳಿಸಿ ಹೋಗಿರುವುದು ನ್ಯಾಯವೇ ಎಂದು ಪ್ರಶ್ನಿಸಿ ಇನ್ನೆಂದೂ ಈ ರೀತಿಯ ಅಮಾನವೀಯವಾಗಿ ನಡೆದುಕೊಳ್ಳದಂತೆ ಎಚ್ಚರಿಸಿ ಕಳುಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಇಲಾಖೆಗೆ ದೂರು ಸಹ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
