ಸೈಕಲ್ ಸ್ಟ್ಯಾಂಡ್‍ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ದಾವಣಗೆರೆ:

        ವಿದ್ಯಾ ನಗರಿ ಎಂದೇ ಖ್ಯಾತಿಯಾಗಿರುವ ದಾವಣಗೆರೆಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಳು, ಗುರುವಾರ ಕಾಲೇಜಿನ ಸೈಕಲ್ ಸ್ಟ್ಯಾಂಡ್‍ನಲ್ಲಿ ಪರೀಕ್ಷೆ ಬರೆದಿರುವುದು, ಸರ್ಕಾರಿ ಶಾಲಾ-ಕಾಲೇಜುಗಳ ಅವ್ಯವಸ್ಥೆಗೆ ಕೈಗನ್ನಡಿಯಾಗಿದೆ.

        ಹೌದು… ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿರುವ, ಪ್ರಥಮ ಸೆಮಿಸ್ಟರ್‍ನ 280ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕಾಲೇಜಿನ ಸೈಕಲ್ ಸ್ಟ್ಯಾಂಡ್‍ನಲ್ಲಿ ಊಟದ ಟೇಬಲ್ ಹಾಗೂ ಪ್ಲಾಸ್ಟಿಕ್ ಕುರ್ಚಿ ಹಾಕಿಸಿ ಪರೀಕ್ಷೆ ಬರೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಶಾಲಾ-ಕಾಲೇಜುಗಳು ಕೊಠಡಿ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿರುವುದಕ್ಕೆ ಈ ಘಟನೆ ಉತ್ತಮ ನಿದರ್ಶನವಾಗಿದೆ.

       ದಾವಣಗೆರೆ ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಪ್ರಥಮ ವರ್ಷದ ಪದವಿಯಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ವಿಭಾಗಗಳಲ್ಲಿ ಸುಮಾರು 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಥಮ ವರ್ಷದ ಪದವಿಯ ಮೊದಲ ಸೆಮಿಸ್ಟರ್‍ನಲ್ಲಿ ದ್ವಿತೀಯ ಭಾಷೆ ಇಂಗ್ಲೀಷ್‍ಗೆ ಸಾಮಾನ್ಯವಾಗಿ ಒಂದೇ ಪಠ್ಯ ಇರುವುದರಿಂದ ಎಲ್ಲಾ 1600 ಜನ ವಿದ್ಯಾರ್ಥಿಗಳು, ಗುರುವಾರ ನಡೆದ ಪ್ರಥಮ ಸೆಮಿಸ್ಟರ್‍ನ ಇಂಗ್ಲೀಷ್ ಪರೀಕ್ಷೆಗೆ ಹಾಜರಾಗಿದ್ದಾರೆ.

       ಪರೀಕ್ಷೆಗಾಗಿ ಕಾಲೇಜಿನಲ್ಲಿರುವ 24 ಬೋಧನಾ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಎಲ್ಲಾ ಕೊಠಡಿಗಳು ತುಂಬಿ ಇನ್ನೂ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳಿದಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ಸೌಲಭ್ಯ ಇಲ್ಲದ ಕಾರಣ ಸೈಕಲ್ ಸ್ಟ್ಯಾಂಡ್‍ನಲ್ಲಿ ಸಭೆ, ಸಮಾರಂಭಗಳಲ್ಲಿ ಬಳಸುವ ಊಟದ ಟೇಬಲ್ ಹಾಗೂ ಪ್ಲಾಸ್ಟಿಕ್ ಛೇರ್ ಹಾಕಿಸಿ, ಸುಮಾರು 280ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಲಾಗಿದೆ.

        ಸೈಕಲ್ ಸ್ಟ್ಯಾಂಡ್‍ನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಹೊರಗಡೆ ಓಡಾಡುವ ವಾಹನಗಳ ಶಬ್ಧ ಒಂದು ಕಡೆಯಲ್ಲಿ ಸುಗಮವಾಗಿ ಪರೀಕ್ಷೆ ಬರೆಯಲು ಬಿಡದೇ ಕಿರಿಕಿರಿ ಉಂಟು ಮಾಡುತ್ತಿದ್ದರೆ. ಇನ್ನೊಂದೆಡೆ ಸೈಕಲ್ ಸ್ಟ್ಯಾಂಡ್‍ನ ಮೇಲ್ಛಾವಣಿಯು ತಗಡಿನ ಸೀಟಿಗಳಿಂದ ಕೂಡಿದ್ದರಿಂದ, ತಗಡಿನ ಸೀಟುಗಳು ಬಿಸಲಿಗೆ ಕಾದು ವಿದ್ಯಾರ್ಥಿಗಳು ಬೆವಿಯುವಂತೆ ಮಾಡಿತ್ತು. ಹೀಗಾಗಿ ವಿದ್ಯಾರ್ಥಿಗಳು ವಲ್ಲದ ಮನಸ್ಸಿನಿಂದಲೇ ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ.

       ಪದವಿ ವಿದ್ಯಾರ್ಥಿಗಳು ಐಚ್ಛಿಕ ಭಾಷೆಯಾಗಿ ಕನ್ನಡ, ಹಿಂದಿ, ಉರ್ದು ತೆಗೆದುಕೊಂಡಿರುತ್ತಾರೆ.ಈ ಎಲ್ಲರಿಗೂ ಇಂಗ್ಲೀಷ್ ಭಾಷಾ ಕಲಿಕೆ ಸಾಮಾನ್ಯವಾಗಿದೆ. ಆದ್ದರಿಂದ ಇಂಗ್ಲೀಷ್ ಪರೀಕ್ಷೆ ಇದ್ದಾಗ ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಕೊರತೆಯಾಗುತ್ತದೆ. ಹೀಗೆ ಕೊಠಡಿ ಕೊರತೆಯಿಂದಾಗಿ ತರಗತಿಯನ್ನು ಸಹ ಕಂಬೈನ್ಡ್ ಆಗಿ ಕಾಲೇಜಿನಲ್ಲಿ ಮಾಡಲಾಗುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಎಷ್ಟೇ ವಿದ್ಯಾರ್ಥಿಗಳು ಪ್ರವೇಶ ಬಯಸಿದರೂ ದಾಖಲು ಮಾಡಿಕೊಳ್ಳಬೇಕೆಂಬ ಸರ್ಕಾರದ ಆದೇಶ ಸಹ ಇದೆ. ಈ ಹಿನ್ನೆಲೆಯಲ್ಲಿ ನಗರ, ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ವರ್ಷ ವರ್ಷಕ್ಕೂ ದಾಖಲಾತಿ ಪ್ರಮಾಣ ಹೆಚ್ಚುತ್ತಿರುವ ಕಾರಣ ಕೊಠಡಿಗಳು, ಬೋಧನಾ ಕೊಠಡಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಂಕರ್ ಆರ್. ಶೀಲಿ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap