ಉಪ ಕಸುಬುಗಳನ್ನು ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು

ಹೊನ್ನಾಳಿ:

     ಹೈನುಗಾರಿಕೆ, ಕುರಿ-ಕೋಳಿ ಸಾಕಣಿಕೆ ಸೇರಿದಂತೆ ಕೃಷಿ ಜತೆಗೆ ವಿವಿಧ ಉಪ ಕಸುಬುಗಳನ್ನು ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

    ತಾಲೂಕಿನ ಯರೇಚಿಕ್ಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹೊನ್ನಾಳಿಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಯರೇಚಿಕ್ಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಿಶ್ರ ತಳಿ ಹಸು-ಕರುಗಳ ಪ್ರದರ್ಶನ ಮತ್ತು ಪಶು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ವಿವಿಧ ಕಾರಣಗಳಿಂದಾಗಿ ಇಂದು ಕೃಷಿಕರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಬರಗಾಲ, ಬೆಳೆ ಹಾನಿ, ಅತಿ ವೃಷ್ಟಿಗಳಿಂದಾಗಿ ರೈತರು ಆದಾಯ ಲಭಿಸದೇ ಸಾಲಗಾರರಾಗುವಂತಾಗುತ್ತದೆ. ಅಂಥ ಸಂದರ್ಭಗಳಲ್ಲಿ, ಹೈನುಗಾರಿಕೆ ಕೃಷಿಕರ ಕೈ ಹಿಡಿಯುತ್ತದೆ ಎಂದು ತಿಳಿಸಿದರು.

      ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮಲ್ಲಿ ಲಭಿಸುವ ಹಾಲು, ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ವಿವಿಧ ಹೈನು ಉತ್ಪನ್ನಗಳನ್ನು ಉಚಿತವಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ದಿನ ಕಳೆದಂತೆ ಹೈನುಗಾರಿಕೆ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಹಾಲಿನಲ್ಲಿನ ಪೌಷ್ಟಿಕಾಂಶಗಳ ಕಾರಣದಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂಗಾರದ ಬೆಲೆ ಲಭಿಸಿದೆ.

      ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ವೇಳೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೆ ತಂದರು. ನಂತರದ ಸರಕಾರಗಳೂ ಸಹಾಯಧನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ಇದೀಗ, ಗ್ರಾಮೀಣ ಪ್ರದೇಶಗಳಲ್ಲಿನ ಜನತೆ ತಮ್ಮ ಮನೆಗೂ ಹಾಲನ್ನು ಇಟ್ಟುಕೊಳ್ಳದೇ ಎಲ್ಲವನ್ನೂ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ನಮ್ಮ ಸಮಾಜ ಎಷ್ಟು ಕಮರ್ಷಿಯಲ್ ಆಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಏನೇ ಆಗಲಿ, ಒಟ್ಟಿನಲ್ಲಿ ನಾಡಿನ ರೈತರ ಬದುಕು ಹಸನಾಗಬೇಕು. ಅದಕ್ಕೆ ಹೈನುಗಾರಿಕೆ ತನ್ನದೇ ಆದ ಕಾಣಿಕೆ ನೀಡುತ್ತಿದೆ ಎಂದು ವಿವರಿಸಿದರು.

     ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಮಾತನಾಡಿ, ಹೈನುಗಾರಿಕೆ ಗ್ರಾಮೀಣ ಜನತೆಯ ಜೀವನಾಡಿ ಆಗಿದೆ. ಇಂದು ಕೃಷಿ ಉತ್ಪನ್ನಕ್ಕೆ ಸರಿ ಸಮನಾಗಿ ಹೈನೋದ್ಯಮ ರೈತ ಕುಟುಂಬಗಳಿಗೆ ಹಣ ನೀಡುತ್ತಿದೆ ಎಂದು ತಿಳಿಸಿದರು.

     ಗ್ರಾಮೀಣ ರೈತ ಕುಟುಂಬಗಳು ಹೈನುಗಾರಿಕೆ, ಮೀನು ಸಾಕಣಿಕೆ ಮತ್ತಿತರ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಅದಕ್ಕೆ ಬೇಕಾದ ಎಲ್ಲಾ ನೆರವನ್ನೂ ನೀಡಲು ಜಿಪಂ ಸಿದ್ಧವಿದೆ. ಸರಕಾರದಿಂದ ಲಭಿಸುವ ಪ್ರಯೋಜನಗಳನ್ನು ಪಡೆದುಕೊಂಡು ಬದುಕನ್ನು ಹಸನಾಗಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

      ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಕುಂದೂರು ಡಿ.ಜಿ. ಷಣ್ಮುಖ ಪಾಟೀಲ್ ಮಾತನಾಡಿ, ಹೊನ್ನಾಳಿ ತಾಲೂಕಿನ ಜನತೆ ಹಾಲು ಉತ್ಪಾದನೆ ನಿಟ್ಟಿನಲ್ಲಿ ಹೆಚ್ಚಿನದಾಗಿ ಶ್ರಮಿಸುತ್ತಿದ್ದಾರೆ. ಈ ಕಾರಣಕ್ಕೆ ಮೊದಲಿನಿಂದಲೂ ಹೊನ್ನಾಳಿ ತಾಲೂಕು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಗುಣಮಟ್ಟದ ಹಾಲು ಪೂರೈಕೆಯಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟಗಳು ಮುಂಚೂಣಿಯಲ್ಲಿವೆ ಎಂದು ತಿಳಿಸಿದರು.

       ಯರೇಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ. ಲೋಕೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೈನುಗಾರಿಕೆ ಅವರಿಗೆ ಸಂಜೀವಿನಿಯಾಗಿದೆ. ಆದರೆ, ಈಚೆಗೆ ಹಾಲಿನ ಬೆಲೆಯಲ್ಲಿ ಇಳಿಕೆ ಮಾಡಿರುವುದರಿಂದ ಉತ್ಪಾದಕರಿಗೆ ತೀವ್ರ ತೊಂದರೆಯಾಗಿದೆ. ಮೇವು, ಹಿಂಡಿಯ ಬೆಲೆ ಜಾಸ್ತಿ ಆಗಿರುವ ಕಾರಣ ಹಾಲು ಉತ್ಪಾದನೆ ಲಾಭದಾಯಕವಾಗಿ ಉಳಿದಿಲ್ಲ. ಆದ್ದರಿಂದ, ಹೆಚ್ಚಿನ ಬೆಲೆ ನೀಡುವ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು.

       ಜಿಪಂ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್, ಸದಸ್ಯೆ ಯಕ್ಕನಹಳ್ಳಿ ದೀಪಾ ಜಗದೀಶ್, ಬನ್ನಿಕೋಡು ಗ್ರಾಪಂ ಸದಸ್ಯ ಬಿ. ರೇವಣಸಿದ್ಧಪ್ಪ, ಮುಖಂಡ ಮುಕ್ತೇನಹಳ್ಳಿ ಮರುಳಸಿದ್ಧಪ್ಪ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶಿವಪ್ಪ ಹುಲಿಕೇರಿ ಇತರರು ಮಾತನಾಡಿದರು.

       ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಎಚ್.ಕೆ. ಫಾಲಾಕ್ಷಪ್ಪ, ಎಚ್.ಕೆ. ಬಸಪ್ಪ, ಮಾರುಕಟ್ಟೆ ವ್ಯವಸ್ಥಾಪಕ ಕೆ.ಎಂ. ಲೋಹಿತೇಶ್ವರ್, ವ್ಯವಸ್ಥಾಪಕ ಡಾ.ಬಿ.ಎಂ. ಸದಾಶಿವಪ್ಪ, ಉಪ ವ್ಯವಸ್ಥಾಪಕ ಡಾ.ಎಂ.ಎಚ್. ರಾಜಪ್ಪ, ವಿಸ್ತರಣಾಧಿಕಾರಿ ರಾಮು, ಪಶು ವೈದ್ಯಾಧಿಕಾರಿ ಡಾ.ಕೆ.ಎ. ಕಿರಣ್, ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಕೆ.ಶಿವಪ್ರಸಾದ್ , ಹೊನ್ನಾಳಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೊಟ್ರೇಶಪ್ಪ, ಕೂಲಂಬಿ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಜಿ.ಬಿ. ಅಶೋಕ್‍ಕುಮಾರ್, ಯರೇಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷೆ, ನಿರ್ದೇಶಕರು, ಸಿಬ್ಬಂದಿ, ಬನ್ನಿಕೋಡು ಗ್ರಾಪಂ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ವಿಜಯಕುಮಾರಿ ಪ್ರಕಾಶ್, ಸದಸ್ಯರಾದ ಎಂ. ಮುರಿಗೇಶಪ್ಪ, ವಿ.ಎಲ್. ಹಾಲೇಶಪ್ಪ, ಗಿರಿಜಮ್ಮ ಗೋಣಿಬಸಪ್ಪ, ನೇತ್ರಾವತಿ ಸಿದ್ಧೇಶ್, ನಿರ್ಮಲಾ ಸಿದ್ಧಯ್ಯ, ನಾಗರತ್ನಮ್ಮ ಹಾಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

       ಶಿಬಿರದಲ್ಲಿ ಒಟ್ಟು 85 ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಕೆಲವು ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಯಿತು.
ಗ್ರಾಮದ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ