ನಿರ್ಧಿಷ್ಟ ಗುರಿ, ಶ್ರದ್ಧೆ ಇದ್ದರೆ ಯಶಸ್ಸು ಸಾಧ್ಯ

ದಾವಣಗೆರೆ:

     ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಕಿವಿ, ಗಂಟಲು, ಮೂಗು ತಜ್ಞರ ಸಂಘದ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್ ತಿಳಿಸಿದರು.

     ಇಲ್ಲಿನ ಎಂಸಿಸಿ ಎ ಬ್ಲಾಕ್‍ನಲ್ಲಿರುವ ವನಿತಾ ಸಮಾಜದ ಅಂಗ ಸಂಸ್ಥೆ ಸಿ.ಕೇಶವಮೂರ್ತಿ ವಿಕಲಚೇತನ ಹೆಣ್ಣು ಮಕ್ಕಳ ವೃತ್ತಿ ತರಬೇತಿ ಕೇಂದ್ರ, ಸಿಕೆ ವಾಕ್ ಶ್ರವಣ ಕೇಂದ್ರ ಸಾಹಸ್‍ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಚಲವಾದ ನಂಬಿಕೆ, ಗುರಿಯೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದರು.

    ವನಿತಾ ಸಮಾಜದ ಸಂಸ್ಥಾಪಕರಾದ ಡಾ.ನಾಗಮ್ಮ ಕೇಶವಮೂರ್ತಿ ಹಾಗೂ ಹಿರಿಯ ಮಕ್ಕಳ ತಜ್ಞೆ ಡಾ.ನಿರ್ಮಲಾ ಕೇಸರಿ ದಾವಣಗೆರೆಯ ಮಹಾನ್ ಚೇತನಗಳಾಗಿದ್ದಾರೆ. ನಾಗಮ್ಮನವರಿಗೆ ಒಂದು ಗುರಿ ಇತ್ತು. ಕಿವುಡ, ಮೂಗ ಮಕ್ಕಳು ಸಮಾಜದಲ್ಲಿ ಎಲ್ಲ ಮಕ್ಕಳಂತೆ ಬಾಳಲಿ, ಅವರಿಗೂ ದಾರಿಯಾಗಲಿ ಎಂಬ ಉದ್ದೇಶದಿಂದ ಪತಿ ಸಿ.ಕೇಶವಮೂರ್ತಿ ಹಾಗೂ ದಾನಿಗಳ ಸಹಕಾರದಿಂದ ಈ ಸಂಸ್ಥೆ ಆರಂಭಿಸುವ ಮೂಲಕ ತಮ್ಮ ಗುರಿ ತಲುಪಿದರು. ಇಲ್ಲಿನ ವನಿತಾ ಸಮಾಜ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ನಮ್ಮ ಜಿಲ್ಲೆಯಲ್ಲಿ ಎಲ್ಲರಿಗೂ ತಲುಪಬೇಕು ಎಂದರು.

     ನಾಗಮ್ಮನವರ ಅಚಲ ನಂಬಿಕೆಯಿಂz ತಮ್ಮ ಹಿಂಬಾಲಕರ ಸಹಕಾರದೊಂದಿಗೆ ಈ ಸಂಸ್ಥೆ ಇಂದು ದಶ ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯವಾಗಿದೆ ಎಂದು ಅವರು, ಇಲ್ಲಿ ನಮಗೆ ಸನ್ಮಾನ ಮಾಡುವುದಕ್ಕಿಂತ ಇಲ್ಲಿ ಸೇವೆ ಮಾಡುವ ಶಿಕ್ಷಕರು, ತರಬೇತುದಾರರನ್ನು ಗೌರವಿಸಬೇಕಿತ್ತು. ಏಕೆಂದರೆ, ದಾನಿಗಳು ಧನ ಸಹಾಯ, ಕಟ್ಟಡ, ಇತರೆ ಸಹಾಯವನ್ನು ಮಾಡುತ್ತಾರೆ. ಆದರೆ, ಇಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಬಹಳ ಕಷ್ಟಕರ ಕೆಲಸ. ಇಲ್ಲಿ ಸೇವೆ ಸಲ್ಲಿಸಲು ಬಂದಿರುವ ನೀವು ನಿಮ್ಮ ಕೆಲಸಗಳನ್ನು ಬಿಟ್ಟು ಬಂದು ಇಲ್ಲಿ ಸೇವಾ ಕಾರ್ಯ ಮಾಡುತ್ತಿರುವುದು ಮೆಚ್ಚುವಂತಹ ಕೆಲಸ ಎಂದು ನುಡಿದರು.

      ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಮಾತನಾಡಿ, ಕಿವುಡ, ಮೂಗ ಮಕ್ಕಳಿಗೆ ಇಲ್ಲಿ ತರಬೇತಿ ನೀಡುವ ಮೂಲಕ ಅವರ ಬದುಕಿನಲ್ಲೂ ಭರವಸೆಯ ಬೆಳಕು ಮೂಡಿಸಿದ್ದಾರೆ. ಕಾಲಚಕ್ರದಡಿ ನಾವು ಹುಟ್ಟಿ ಬಂದಿದ್ದು, ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕು. ನಮ್ಮಲ್ಲಿ ಶ್ರೀಮಂತರು ಜಾಸ್ತಿ ಆಗುತ್ತಿದ್ದಾರೆ. ಅವರಲ್ಲಿ ಗುಣವಂತಿಕೆ ಬರಬೇಕು. ಇಂತಹ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ನೋಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಹಾಯ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

     ವನಿತಾ ಸಮಾಜದ ಗೌರವಾಧ್ಯಕ್ಷೆ, ಮಾಜಿ ಶಿಕ್ಷಣ ಸಚಿವೆ ಡಾ.ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಭಾ ರವೀಂದ್ರ, ಸುನಿತಾ ಇಂದೂಧರ, ವಾಗ್ದೇವಿ, ನಾಗರತ್ನ ಜಗದೀಶ, ಶಾಂತಾ ಕೇಶವಮೂರ್ತಿ, ಡಾ.ಪ್ರಕಾಶ, ಶೋಭಾ, ಆಶಾ, ಶ್ರೀಮತಿ ಚಂದ್ರಶೇಖರ ಅಡಿಗ, ಭವಾನಿ ಗುರುಪ್ರಸಾದ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ದಾನಿಗಳಾದ ಮಧು ಕೊಠಾರಿ, ಲಕ್ಷ್ಮಣರಾವ್‍ಕೊಠಾರಿ, ಡಾ.ಎ.ಎಂ.ಶಿವಕುಮಾರ ಹಾಗೂ ಇತರೆ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು .ವಿಕಲಚೇತನ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಹಾಗೂ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link