ಚಳ್ಳಕೆರೆ
ತಾಲ್ಲೂಕಿನ ಸಮಸ್ತ ಜನರ ಸಮಸ್ಯೆಗಳು ಅವುಗಳ ಪರಿಹಾರ ಮತ್ತು ಸರ್ಕಾರದ ಸೌಲಭ್ಯಗಳ ವಿಚಾರಣೆಯ ಬಗ್ಗೆ ಚರ್ಚಿಸಲು ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಸರ್ಕಾರದ ನಿಯಮಾವಳಿ ಪ್ರಕಾರ ನಡೆಸಲಾಗುತ್ತಿದ್ದು, ತಾಲ್ಲೂಕು ಮಟ್ಟದ ಅಧಿಕಾರಿಗಳು ನೈಜ ಪರಿಸ್ಥಿತಿಯನ್ನು ಅರಿವು ಮಾಹಿತಿ ನೀಡಬೇಕೆ ವಿನಃ ಸುಳ್ಳು ಮಾಹಿತಿ ನೀಡುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಾಡದಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧಿಕಾರಿ ವರ್ಗಕ್ಕೆ ಮಾತಿನ ಚಾಟಿ ಬೀಸಿದರು.
ಅವರು, ಶನಿವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕೆಲವು ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡುವಾಗ ಯಾವುದೇ ಪೂರ್ವಸಿದ್ದತೆ ಮಾಡಿಕೊಂಡಂತೆ ಕಂಡು ಬಂದಿಲ್ಲ. ನೀವು ನೀಡಿರುವ ದಾಖಲೆಗೆ ಸಭೆಯಲ್ಲಿ ನೀಡುತ್ತಿರುವ ಮಾಹಿತಿಗೂ ಹಲವಾರು ವ್ಯತ್ಯಸಗಳಿವೆ. ಪ್ರತಿಯೊಂದು ಹಂತದಲ್ಲೂ ಕಾನೂನನ್ನು ಜಾರಿಗೊಳಿಸಿ ಜನರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬದಲಾಗಿ ತಾವು ವಿವೇಚನೆಯಿಂದ ವರ್ತಿಸಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ಹಿರಿಯ ಅಧಿಕಾರಿಗಳಿಗೂ ಸಹ ಸಕರಾತ್ಮಕ ಮಾಹಿತಿ ನೀಡಿ ಕೆಲವೊಂದು ಯೋಜನೆಗಳ ಪರಿಣಾಮಕಾರಿ ಜಾರಿಗೆ ಮುಂದಾಗಬೇಕಿದೆ. ಕೇವಲ ಮಾಹಿತಿ ನೀಡಿದರೆ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಹರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಈ ಬಗ್ಗೆ ಪ್ರತಿಯೊಬ್ಬ ಅಧಿಕಾರಿಯೂ ಜಾಗ್ರತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ದೇವರ ದಯದಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ನಿಯಂತ್ರಣದಲ್ಲಿದ್ದು, ಇನ್ನೂ ತಾಲ್ಲೂಕಿನಾದ್ಯಂತ ಒಟ್ಟು 70 ಕಡೆ ಶುದ್ದ ಕುಡಿಯುವ ನೀರಿನ ಘಟಕಗಳ ರಿಪೇರಿ ಕಾರ್ಯ ನೆನೆಗುದಿಗೆ ಬಿದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಘಟಕಗಳ ರಿಪೇರಿಗೆ ಮುಂದಾಗಬೇಕೆಂದರು. ಮಾಹಿತಿ ನೀಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಕುಮಾರ್, ಸದ್ಯದ ಪರಿಸ್ಥಿತಿಯಲ್ಲಿ ರಿಪೇರಿಗೆ ಹಣ ಮಂಜೂರಾಗಿಲ್ಲವೆಂದರು.
ಇದರಿಂದ ಅಸಮದಾನಗೊಂಡ ಶಾಸಕ ರಘುಮೂರ್ತಿ ನಿಮ್ಮ ಅಧಿಕಾರಿಗಳಿಗೆ ಈ ಬಗ್ಗೆ ಸ್ವಷ್ಪ ಚಿತ್ರಣ ನೀಡಿ ಹಣವನ್ನು ಮಂಜೂರು ಮಾಡಿಸಿಕೊಳ್ಳಿ ಇಲ್ಲವಾದರೆ ನಾನೇ ನಿಮ್ಮ ಹಿರಿಯ ಅಧಿಕಾರಿಗಳಿಗೆ ಮಾತನಾಡಿ ರಿಪೇರಿಗೆ ಅವಶ್ಯವಿರುವ ಹಣವನ್ನು ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಇಲಾಖೆ, ಸಾಮಾಜಿಕ ಅರಣ್ಯ ವಲಯ, ಬೆಸ್ಕಾಂ, ಕುಡಿಯುವ ನೀರು ಸರಬರಾಜು ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಇಲಾಖೆ, ನಿರ್ಮಿತಿ ಕೇಂದ್ರ, ತೋಟಗಾರಿಕೆ ಇಲಾಖೆ ಮುಂತಾದ ಇಲಾಖೆಗಳ ಮಾಹಿತಿಯನ್ನು ಪಡೆದುಕೊಂಡ ಶಾಸಕರು ಸಹಾಯಕ ಕೃಷಿ ನಿರ್ದೇಶಕ ಮೋಹನ್ಕುಮಾರ್ ಪಿಎಚ್ಡಿ ಪದವಿ ಪಡೆದು ಕಾರ್ಯನಿರ್ವಹಿಸಲು ಇಲ್ಲಿಗೆ ಬಂದಿದ್ಧಾರೆ. ನೀವು ಸಹ ಜನರ ಸಮಸ್ಯೆಗಳಿಗೆ ಇನ್ನೂ ಹೆಚ್ಚು ಸ್ಪಂದಿಸಬೇಕೆಂದರು. ಗ್ರಾಮೀಣ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಕಿರಣ್ರವರು ಸಹ ಗ್ರಾಮೀಣ ಭಾಗಗಳ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸುತ್ತಿರುವುದು ಸಂತಸ ವಿಷಯವೆಂದರು.
ಸರ್ಕಾರಿಯೋಜನೆಗಳ ಅನುಷ್ಠಾನದ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಗ್ರಾಮೀಣ ಭಾಗದ ಸ್ವಚ್ಚತೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಇತ್ತೀಚೆಗೆ ತಾನೇ ನೂತನ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ವಚ್ಚತೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ 10 ರಿಂದ 15 ಲಕ್ಷ ಹಣ ನೀಡುವ ಭರವಸೆ ನೀಡಿದ್ದು, ಈ ಹಣ ಸದ್ವಿನಿಯೋಗವಾಗುವಂತೆ ಜಾಗ್ರತೆ ವಹಿಸಬೇಕು. ಮಹಾತ್ಮ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಅಧಿಕಾರಿವರ್ಗ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿಯ ನೂತನ ಸಭಾಂಗಣಕ್ಕೆ ಸರ್ಕಾರ ಹೆಚ್ಚುವರಿ ಸೌಲಭ್ಯಕ್ಕಾಗಿ 25 ಲಕ್ಷ ಮಂಜೂರು ಮಾಡಿದ್ದು, ಡಿಸೆಂಬರ್ ಅಂತ್ಯದೊಳಗೆ ಒಳಾಂಗಣದ ಎಲ್ಲಾ ಕಾಮಗಾರಿಯನ್ನು ಪೂರೈಸಿ ಮುಂದಿನ ಸಭೆಯನ್ನು ಅಲ್ಲಿಯೇ ನಡೆಸುವಂತೆ ಇಒ ಶ್ರೀಧರ್ ಐ.ಬಾರಿಕೇರ್ರವರಿಗೆ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಟಿ.ಗಿರಿಯಪ್ಪ, ಸಮರ್ಥರಾಯ, ಟಿ.ತಿಪ್ಫೇಸ್ವಾಮಿ, ತಿಮ್ಮಾರೆಡ್ಡಿ, ಸಣ್ಣಸೂರಯ್ಯ, ಸಿ.ಕರಡಪ್ಪ, ಪಿ.ತಿಪ್ಪೇಸ್ವಾಮಿ, ಜಿ.ವೀರೇಶ್, ಉಮಾಜನಾರ್ಥನ್, ರತ್ನಮ್ಮ, ತಿಪ್ಪಕ್ಕ, ಸುವರ್ಣಮ್ಮ, ರೇಣುಕಮ್ಮ, ಗಂಗೀಬಾಯಿ, ಹನುಮಕ್ಕ ಮುಂತಾದವರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಪ್ರಾರಂಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್, ಶಾಸಕರನ್ನು ಸ್ವಾಗತಿಸಿ ಪ್ರಸ್ತುತ ತಾಲ್ಲೂಕಿನ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದ ಶಾಸಕರಿಗೆ ಸ್ವಾಗತಕೋರಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ತಿಪ್ಪಮ್ಮಲಿಂಗಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ ಸಭೆಯಲ್ಲಿ ಉಪಸ್ಥಿತರಿದ್ದರು.








