ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಕಾರಿ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

ಕೊರಟಗೆರೆ

       ಮಹಿಳೆಯ ಹೊಟ್ಟೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಗರ್ಭಕೋಶದ ಸುತ್ತಲು ಬೆಳೆದಿದ್ದ 2 ಕೆಜಿ 650 ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಶಸ್ತ್ರಚಿಕಿತ್ಸೆ ಮಂಗಳವಾರ ಯಶಸ್ವಿಯಾಗಿದೆ.

      ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ನಾಗಭೂಷಣ್, ಅರವಳಿಕೆ ತಜ್ಞ ಡಾ.ಪ್ರಕಾಶ್, ಸಿಬ್ಬಂದಿ ಚಂದ್ರಕಲಾ, ಪ್ರೇಮಾ ಮತ್ತು ನಂಜೇಗೌಡ ನೇತೃತ್ವದ ವೈದ್ಯರ ತಂಡ ಕಮಲಮ್ಮ ಎಂಬ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

     ತುಂಬಾಡಿ ಗ್ರಾಪಂ ವ್ಯಾಪ್ತಿಯ ಪುಟ್ಟಮ್ಮನಪಾಳ್ಯ ಗ್ರಾಮದ ಕಮಲಮ್ಮ ಎಂಬ ಮಹಿಳೆಯ ಗರ್ಭಕೋಶದ ಸುತ್ತಲೂ ಕಳೆದ ನಾಲ್ಕು ವರ್ಷದಿಂದ ಬೆಳೆದಿದ್ದ 2 ಕೆಜಿ 650 ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಪಟ್ಟಣದ ಸರಕಾರಿ ವೈದ್ಯರ ತಂಡ ಸುಸೂತ್ರವಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಆಸ್ಪತ್ರೆಯಲ್ಲಿ ಶುಶ್ರೂಷೆ ನೀಡುತ್ತಿದ್ದಾರೆ.

      ಕಳೆದ ಹದಿನೈದು ದಿನದ ಹಿಂದೆ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆಯನ್ನು ವೈದ್ಯರು ಪರೀಕ್ಷೆ ನಡೆಸಿದ ವೇಳೆ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. ನಂತರ ಶುಕ್ರವಾರ ಆಸ್ಪತ್ರೆಗೆ ದಾಖಲು ಮಾಡಿಕೊಂಡ ವೈದ್ಯರ ತಂಡ ಮಂಗಳವಾರ ಸತತ 2 ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿ ಆಗಿದ್ದಾರೆ.

       ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ನಾಗಭೂಷಣ್ ಮಾತನಾಡಿ, ಮಹಿಳೆಗೆ ಹೃದಯ ಸಂಬಂಧಿ ಕಾಯಿಲೆಯ ನಡುವೆಯು ಗರ್ಭಕೋಶದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮಹಿಳೆಯ ಮಗನ ಒಪ್ಪಿಗೆಯ ಮೇಲೆ ದೊಡ್ಡ ಗಾತ್ರದ ಗೆಡ್ಡೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಕೀರ್ತಿ ಅರವಳಿಕೆ ತಜ್ಞರಾದ ಡಾ.ಪ್ರಕಾಶ್ ಮತ್ತು ಆಸ್ಪತ್ರೆಯ ಸಿಬ್ಬಂದಿಗೂ ಸಲ್ಲುತ್ತದೆ ಎಂದು ಹೇಳಿದರು.

       ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯ ಮಗ ಹರೀಶ್ ಪ್ರಗತಿಗೆ ಪ್ರತಿಕ್ರ್ರಿಯಿಸಿ, ನನ್ನ ತಾಯಿ ಹೊಟ್ಟೆ ನೋವಿನ ಬಾಧೆಯಿಂದ ಬಳಲುತ್ತಿದ್ದರು. ಕಳೆದ ಹದಿನೈದು ದಿನದ ಹಿಂದೆ ವೈದ್ಯರು ಪರೀಕ್ಷೆ ನಡೆಸಿದ್ದರು. ಇದೀಗ ಶಸ್ತ್ರ ಚಿಕಿತ್ಸೆ ಮಾಡಿ 2 ಕೆಜಿಗೂ ಅಧಿಕ ಗಾತ್ರದ ಗೆಡ್ಡೆಯನ್ನು ಹೊರ ತೆಗೆದು ನನ್ನ ತಾಯಿಗೆ ದೇವರ ರೀತಿಯಲ್ಲಿ ವೈದ್ಯರ ತಂಡ ಮರು ಜನ್ಮ ನೀಡಿದ್ದಾರೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link