ದಾವಣಗೆರೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರೀಕ ದಾಖಲಾತಿ (ಎನ್‍ಆರ್‍ಸಿ)ಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಎಸ್‍ಯುಸಿಐ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಎಸ್‍ಯುಸಿಐ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ಸಿಎಎ, ಎನ್‍ಆರ್‍ಸಿ ಜಾರಿಗೆ ತರುವ ಮೂಲಕ ದೇಶದ ಸಾಮರಸ್ಯವನ್ನು ಹಾಳು ಮಾಡಿದೆ ಎಂದು ಆರೋಪಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಯುಸಿಸಿ(ಸಿ) ಮುಖಂಡ ಮಂಜುನಾಥ ಕೈದಾಳೆ, ದೇಶದ ಜನತೆ ಆರ್ಥಿಕ ಹಾಗೂ ಸಾಂಸ್ಕøತಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಜೀವನದ ಸಮಸ್ಯೆಗಳಿಂದ ಜನರ ಗಮನ ಬೆರೆಡೆ ಸೆಳೆಯುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‍ಆರ್‍ಸಿ ಜಾರಿಗೆ ತರುವ ಮೂಲಕ ಜನತೆ ನಡೆಸಬೇಕಾದ ಐಕ್ಯ ಹೋರಾಟಗಳಿಗೆ ಧಕ್ಕೆ ತರಲು, ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯು 1985ರಲ್ಲಿ ನಡೆದ ಅಸ್ಸಾಂ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂಬುದಾಗಿ ಆರೋಪಿಸಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿವೆ. ಈ ಕಾಯ್ದೆಯು ಭಾರತ ರಾಷ್ಟ್ರತ್ವದ ಮೂಲ ಮೌಲ್ಯಗಳಿಗೆ ವ್ಯತಿರಿಕ್ತವಾಗಿದೆ ಎಂದು ದೂರಿದರು.
ಪಾಕಿಸ್ಥಾನ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ಥಾನಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಶರಣು ಕೋರಿ ಬಂದ ಹಿಂದು, ಕ್ರೈಸ್ತ, ಸಿಖ್, ಬೌದ್ಧ, ಜೈನ, ಪಾರ್ಸಿ ಸಮುದಾಯಕ್ಕೆ ಸೇರಿದವರಿಗೆ ಭಾರತದಲ್ಲಿ ಪೌರತ್ವ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಕಾನೂನಿನ ಸಮ್ಮುಖದಲ್ಲಿ ಎಲ್ಲರೂ ಸಮಾನರು ಎಂಬ ಸಂವಿಧಾನದ 14ನೇ ವಿಧಿಗೆ ತದ್ವಿರುದ್ಧವಾಗಿದೆ ಎಂದು ಕಿಡಿಕಾರಿದರು.ಕೋಮುವಾದಿ ರಾಜಕಾರಣವನ್ನು ಮಾಡಿಕೊಂಡು ಹೋಗಲು ಇಂತಹ ಕಾಯ್ದೆಯಿಂದ ಅಪಾರ ಅವಕಾಶ ಬಿಜೆಪಿಗೆ ಸಿಕ್ಕಂತಾಗಿದೆ.
ಜನರು ತಮ್ಮ ದೈನಂದಿನ ಸಮಸ್ಯೆಗಳ ಬಗ್ಗೆ ಹೋರಾಡದೇ, ತಮ್ಮ ಐಕ್ಯತೆಗಾಗಿ ಹೊಡೆದಾಡಬೇಕಾದ ಪರಿಸ್ಥಿತಿಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶದಲ್ಲಿ ಸೃಷ್ಟಿ ಮಾಡಿದ್ದು, ತಕ್ಷಣವೇ ಸರ್ಕಾರ ಸಿಎಎ, ಎನ್‍ಆರ್‍ಸಿಯನ್ನು ರದ್ದುಪಡಿಸಿ, ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆ ಸಮಸ್ಯೆ, ನಿರುದ್ಯೋಗ ಸಮಸ್ಯೆ ತಡೆಯುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಕುಕ್ಕವಾಡ ಮಂಜುನಾಥ, ಡಾ.ಸುನೀತ್ ಕುಮಾರ, ತಿಪ್ಪೇಸ್ವಾಮಿ, ಪರಶುರಾಮ, ನಾಗ ಜ್ಯೋತಿ, ಸೌಮ್ಯ, ಜ್ಯೋತಿ, ನೀತು, ಮಮತಾ, ಧನುಷ್, ಮಂಜುನಾಥ, ಗುರು, ಕಿರಣ್, ಪ್ರಕಾಶ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/12/23_dvg_02.gif)