ಬೆಂಗಳೂರು : 
ಕರ್ನಾಟಕದ ಚತುರ್ವೇದ ವಿದ್ವಾಂಸರು , ಸ್ವಾತಂತ್ರ ಹೋರಾಟಗಾರರು ಮತ್ತು ಶತಾಯುಷಿಗಳು ಆಗಿದ್ದ ಶ್ರೀಯುತ ಸುಧಾಕರ ಚತುರ್ವೇದಿ ಅವರು ನಿಧನರಾಗಿದ್ದಾರೆ.
ಅವರಿಗೆ 124 ವರ್ಷ ವಯಸ್ಸಾಗಿತ್ತು.ಹೆಚ್ಚಿನ ಕನ್ನಡಿಗರ ಫಾಲಿಗೆ ಅಪರಿಚಿತರಾಗಿಯೇ ಉಳಿದಿದ್ದ ಅವರು ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಗಳಾಗಿದ್ದರು.
ಜಯನಗರ ಕೃಷ್ಣಸೇವಾಶ್ರಮದ ಎದುರಿನ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಮೃತದೇಹದ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಸಂಜೆ 4ಕ್ಕೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಗಳು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1897ರ ಏಪ್ರಿಲ್ 20ರ ರಾಮನವಮಿಯಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗ್ರಾಮದ ದಂಪತಿಗಳಾದ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ಶ್ರೀಕೃಷ್ಣರಾಯರವರ ಮಗನಾಗಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಸುಧಾಕರ ಚತುರ್ವೇದಿ ಸಮಾಜದ ಅನಿಷ್ಟ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತ ಬೆಳೆದಿದ್ದರು.
ಬಾಲ್ಯದಲ್ಲಿಯೇ ಅತೀ ಕ್ರಿಯಾಶೀಲ, ಚಟುವಟಿಕಗಳ ಗಣಿಯಾಗಿ ಪ್ರತಿಭಾವಂತ ಎಂದು ಕರೆಸಿಕೊಂಡಿದ್ದ ಚತುರ್ವೇದಿಯವರ ಆರೋಗ್ಯ ಅಷ್ತಾಗಿ ಉತ್ತಮವಾಗಿರಲಿಲ್ಲ. ಆದರೆ ಎಂಟನೇ ವರ್ಷದಲ್ಲೇ ಹಿರಿಯ ಸಹೋದರಿ ಪದ್ಮಕ್ಕನಿಂದ ಕನ್ನಡ ಸಾಹಿತ್ಯ, ಸಂಸ್ಕೃತ ಮತ್ತು ಭಾರತ ದರ್ಶನ, ವೇದ ಅಧ್ಯಯನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಆ ನಂತರ ಹರಿದ್ವಾರದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








