ಚಿತ್ರದುರ್ಗ:
ನಾಗರೀಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸುಡುಗಾಡು ಸಿದ್ಧ, ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಆದ್ಯತೆ ಮೇರೆಗೆ ಸರ್ಕಾರಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಅಲೆಮಾರಿ, ಅರೆ ಅಲೆಮಾರಿ, ಬುಡುಕಟ್ಟು, ಸುಡುಗಾಡುಸಿದ್ಧ ಜನಾಂಗಗಳ ಅಭಿವೃದ್ಧಿ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸುಡುಗಾಡುಸಿದ್ಧ ಅಲೆಮಾರಿ ಜನಾಂಗಗಳ ಕಾಲೋನಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಚರಂಡಿ, ಮುಂತಾದ ನಾಗರೀಕ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಅಲೆಮಾರಿ, ಬುಡಕಟ್ಟು, ಎಸ್.ಸಿ., ಎಸ್.ಟಿ. ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ಸುಡುಗಾಡುಸಿದ್ಧರ ಕಾಲೋನಿಗಳಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯಗಳಿಲ್ಲದೇ ಪರಿತಪಿಸಬೇಕಾದ ಸ್ಥಿತಿ ಇನ್ನೂ ಜೀವಂತವಿದ್ದು, ಈ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವಂತಹ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಸಂಚಾಲಕ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಟಿ. ಗೌರಿಪುರ, ಎನ್. ಮಹದೇವಪುರ, ಕಡದರಹಳ್ಳಿ, ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ, ಸೇರಿದಂತೆ, ಹಲವು ಕಡೆ ಗುಡಿಸಲು ನಿವಾಸಿಗಳಾಗಿ ವಾಸಮಾಡುತ್ತಿರುವ ಸುಡುಗಾಡುಸಿದ್ಧರು, ಸಿಳ್ಳೆಕ್ಯಾತರು, ಚಿನ್ನಿದಾಸರು, ದೊಂಬಿದಾಸರು, ಹಂದಿಜೋಗಿಗಳು ಮುಂತಾದ ಜಾತಿ ಜನಾಂಗಗಳು ಸ್ವಾತಂತ್ರ್ಯ ಬಂದು ಎಪ್ಪತ್ತೆರಡು ವರ್ಷ ಕಳೆದರೂ ಸಮಾಜದ ಮುಖ್ಯವಾಹಿನಿಗೆ ಬರದೇ ಇರುವುದು, ವಿಷಾದಕರ ಎಂದರು.
ಸುಡುಗಾಡುಸಿದ್ಧರ ಕಾಲೋನಿ ಮತ್ತು ಅಲೆಮಾರಿ ಜನಾಂಗದ ಪರವಾಗಿ ಮಾತನಾಡಿದ ರಂಗಪ್ಪ, ಹೊರಕೇರಪ್ಪ, ರಾಮಚಂದ್ರಪ್ಪ, ಮಹಂತೇಶ್ ನಾಯ್ಕ ಇವರುಗಳೆಲ್ಲಾ ಒಕ್ಕರಲಿನಿಂದ ಜಿಲ್ಲಾ ಪಂಚಾಯತ್ ಸಿ.ಇ.ಓ. ಅವರಲ್ಲಿ ಮನವಿ ಮಾಡಿಕೊಂಡಿದ್ದು ಎಂದರೆ, ಅಲೆಮಾರಿ ಕಾಲೋನಿಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದಾಗ ಮಾತ್ರ ಸಮಾಜದ ಮುಖ್ಯವಾಹಿನಿ ಬರಲು ಸಾಧ್ಯವೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯ ಆರ್. ವಿಶ್ವಸಾಗರ್, ಕುಮಾರ್, ವೀರದಿಮ್ಮನಹಳ್ಳಿಯ ಅಶೋಕ್, ಮಹೇಶ್, ಎನ್. ಮಹಂತೇಶ್‍ನಾಯ್ಕ್, ರಾಮಾನಾಯ್ಕ್, ಗೋಪಾಲ್‍ನಾಯ್ಕ್, ಲಕ್ಷ್ಮಣ್‍ನಾಯ್ಕ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.