ದಾವಣಗೆರೆ :
ಜಾಗತೀಕರಣ ಹಾಗೂ ಆಧುನಿಕತೆಯ ಭರಾಟೆಯಿಂದಾಗಿ ಸುಗಮ ಸಂಗೀತ ಅಳವಿನಂಚಿನತ್ತ ಸಾಗುತ್ತಿದೆ ಎಂದು ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ನಗರದ ಪಿಬಿ ರಸ್ತೆಯಲ್ಲಿರುವ ಆರ್.ಎಚ್. ಗೀತಾಮಂದಿರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಗೀತ ಗಾಯನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕತೆ ಬೆಳೆದಂತೆ, ಜನರ ಅಭಿರುಚಿಯೂ ಬದಲಾಗುತ್ತಿರುವ ಕಾರಣ ಸುಗಮ ಸಂಗೀತ ಜನಪ್ರಿಯತೆ ಕಳೆದುಕೊಳ್ಳುತ್ತಾ ಅಳವಿನಂಚಿನತ್ತಾ ಸಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸುಗಮ ಸಂಗೀತಕ್ಕೆ ಆದ್ಯತೆ ನೀಡುವ ಮೂಲಕ ಸುಗಮ ಸಂಗೀತವನ್ನು ಉಳಿಸಿ ಬೆಳೆಸಬೇಕಾದ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.
ಪ್ರಸ್ತುತ ಟಿವಿ ವಾಹಿನಿಗಳಲ್ಲಿ ಪ್ರಸಾರಗೊಳ್ಳುತ್ತಿರುವ ರಿಯಾಲಿಟಿ ಶೋಗಳಲ್ಲಿ ಮಾತು, ಹಾಸ್ಯ, ಸಿನಿಮಾ ಹಾಡುಗಳೇ ಹೆಚ್ಚಾಗಿ ಕಾಣುತ್ತಿವೆ. ಹೀಗೆ ಸುಗಮ ಸಂಗೀತವು ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಗೀತಗಾಯನ ಶಿಬಿರ ಹಮ್ಮಿಕೊಳ್ಳುವ ಮೂಲಕ ಸುಗಮ ಸಂಗೀತವನ್ನು ಉಳಿಸಲು ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ಒಂದು ತಪಸ್ಸು ಇದ್ದಂತೆ, ನಮ್ಮ ತಲೆಮಾರಿನವರು ಹಾಡಲು ಆರಂಭಿಸಿದಾಗ ಜನಪ್ರಿಯತೆ ಗಳಿಸಲು ಇಂದಿನಂತೆ ಚಾನೆಲ್‍ಗಳು ಇರಲಿಲ್ಲ. ಇಂದಿನ ತಲೆಮಾರಿನವರಿಗೆ ಹಲವು ಚಾನೆಲ್‍ಗಳಲ್ಲಿ ಹಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಹಿರಿಯ ಸಂಗೀತ ಕಲಾವಿದರು ಕಷ್ಟಪಟ್ಟು ಕಲಿತು ಪ್ರಸಿದ್ಧರಾಗಿರುತ್ತಾರೆ. ಹೀಗಾಗಿ ಕಿರಿಯ ಕಲಾವಿದರು ಹಿರಿಯ ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಹೆಣ್ಣುಮಕ್ಕಳ ಜೊತೆಗೆ ಗಂಡುಮಕ್ಕಳು ಸಹ ಸುಗಮ ಸಂಗೀತ ಕಲಿಯಲು ಮುಂದೆ ಬರಬೇಕೆಂದು ಸಲಹೆ ನೀಡಿದರು.
ರಾಜ್ಯ ಸುಗಮ ಸಂಗೀತ ಸಮ್ಮೇಳನದ ನಿಯೋಜಿತ ಅಧ್ಯಕ್ಷೆ ಮಾಲತಿ ಶರ್ಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸುಗಮ ಸಂಗೀತವು ಹಿನ್ನಡೆ ಕಂಡಿದೆ. ಸಿ.ಅಶ್ವಥ್, ಅನಂತಸ್ವಾಮಿ ಅವರಂತಹ ಗಾಯಕರು ಕಟ್ಟಿ ಬೆಳೆಸಿದ ಸುಗಮ ಸಂಗೀತವನ್ನು ಇಂದಿನ ಯುವ ಪೀಳಿಗೆ ಮುಂದುವರಿಸಿಕೊಂಡು ಹೋಗುವಂತಾಗಬೇಕೆಂದು ಹೇಳಿದರು.
ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್ ಮಾತನಾಡಿ, ಹಿಂದೆ ಸುಗಮ ಸಂಗೀತ ಶ್ರೀಮಂತವಾಗಿತ್ತು. ಈ ಕ್ಷೇತ್ರದ ದಿಗ್ಗಜರಾದ ಪಿ.ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಅಶ್ವಥ್, ಅನಂತಸ್ವಾಮಿ ಅವರ ಬಗ್ಗೆ ತಿಳಿದುಕೊಳ್ಳಬೇಕು. ಹಾಡಿನ ಇತಿಹಾಸ, ಅದಕ್ಕೆ ಸಂಗೀತ ಸಂಯೋಜನೆ ಮಾಡಿದವರು ಯಾರು, ಮೊದಲ ಬಾರಿಗೆ ಹಾಡಿದ್ದು ಯಾರು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾಕುಂಚದ ಅಧ್ಯಕ್ಷ ಕೆ.ಎಚ್. ಮಂಜುನಾಥ್, ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿಗ್ರಾಮ ಗಣೇಶ ಶೆಣೈ, ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್, ಕಚೇರಿ ಕಾರ್ಯದರ್ಶಿ ವಿಜಯಕುಮಾರ ಶೆಟ್ಟಿ, ಶಿಬಿರ ಸಂಚಾಲಕಿ ಶೈಲಾ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ