ದಾವಣಗೆರೆ :
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ, ಸಾವಿನ ಹೊರತು ದೊಡ್ಡ ಜೀವನ ಇದೆ. ಒಬ್ಬ ತಾಯಿ ಮನಸ್ಸು ಮಾಡಿದರೆ ಬೇಕಾದನ್ನು ಸಾಧಿಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಾಯಲು ನಿರ್ಧರಿಸಿದ್ದೇನೆಂದು ಹೇಳಿಕೊಂಡು ಬಂದಿದ್ದ ಮಹಿಳೆಯೊಬ್ಬರಿಗೆ ಪಾಠ ಮಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಹೆಬ್ಬಾಳು ಗ್ರಾಮದ ನಿವಾಸಿ ರೇಣುಕಮ್ಮ ಎಂಬುವರು ಅರ್ಜಿ ಸಲ್ಲಿಸಿ, ತಮ್ಮ ಪತಿಯನ್ನು ಅವರ ಮನೆಯವರೇ ಕೊಲೆ ಮಾಡಿ, ತನ್ನನ್ನು ಮಕ್ಕಳ ಸಮೇತ ಮನೆಯಿಂದ ಹೊರಹಾಕಿದ್ದಾರೆ.
ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಜೀವನ ನಿರ್ವಹಿಸಲು ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ತನ್ನ ಗಂಡನ ಪಾಲಿನ ಆಸ್ತಿ ಕೊಡಿಸಬೇಕು. ಅದು ಸಿಗದಿದ್ದರೆ, ಸಾಯಬೇಕೆಂದು ನಿರ್ಧರಿದಿದ್ದೇನೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜೀವನದಲ್ಲಿ ಎಲ್ಲದಕ್ಕೂ ಸಾವೊಂದೇ ಪರಿಹಾರವಲ್ಲ. ಸಾವಿನ ಹೊರತಾಗಿ ದೊಡ್ಡ ಜೀವನವಿದೆ.
ಒಬ್ಬ ತಾಯಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ನಿಮ್ಮ ಮಕ್ಕಳ ಸಾಧನೆಯಿಂದ ನಿಮಗೆ ಅನ್ಯಾಯ ಮಾಡಿದವರಿಗೆ, ಉತ್ತರ ಕೊಡಿಸಬೇಕು. ನಿಮ್ಮ ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು ಎಂದರು.
ಸ್ಟೈಫಂಡ್ ಕೊಡಿಸಿ:
ಜೆಜೆಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಪಿಜಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ನೀಡಬೇಕು. ಆದರೆ, ಇದಕ್ಕೆ ಯಾವುದೇ ಯೋಜನೆಗಳಿಲ್ಲ. ಕಾಲೇಜಿನಿಂದ ಕೊಡಬಹುದೆಂದು ಎಂದು ನೀವು ಹಿಂದೆ ತಿಳಿಸಿದ್ದೀರಿ, ಆದರೆ ಕಾಲೇಜಿನಲ್ಲಿ ಆರ್ಥಿಕವಾಗಿ ಯಾವುದೇ ಹಣ ಇಲ್ಲವೆಂದು ಹೇಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ತೊರೆದ ಪತಿಯೊಂದಿಗೆ ಮಾತನಾಡಿಸಿ:
ಅಜಾದ್ ನಗರ ನಿವಾಸಿ ತಹಸೀನಾ ಕೌಸರ್ ಎಂಬುವರು ಅರ್ಜಿ ಸಲ್ಲಿಸಿ, ಒಂದು ವರ್ಷದ ಹಿಂದೆ ನಸ್‍ರುಲ್ಲಾ ಎಂಬುವರೊಂದಿಗೆ ತಮ್ಮ ವಿವಾಹವಾಗಿದ್ದು, ಪತಿಯು ತನ್ನನ್ನು ತೊರೆದಿದ್ದಾನೆ. ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿಕೊಂಡಿದ್ದು, ಅವರೊಂದಿಗೆ ಮಾತನಾಡಲು ಆಗುತ್ತಿಲ್ಲ. ದಯವಿಟ್ಟು ಅವರೊಂದಿಗೆ ಮಾತನಾಡಲು ಪೊಲೀಸ್ ಇಲಾಖೆಯಿಂದ ತಮಗೆ ಸಹಕಾರ ಕೊಡಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ, ಎಸ್‍ಪಿ ಅವರ ನೇತೃತ್ವದಲ್ಲಿ ನಿಮ್ಮ ದೂರು ಪರಿಶೀಲಿಸಿ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದರು.
ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಿ:
ಚನ್ನಗಿರಿ ನಿವಾಸಿ ಅಜ್ಜಯ್ಯ ಎಂಬುವರು ಅರ್ಜಿ ನೀಡಿ, 2016ರ ಕಾಯ್ದೆಯನ್ವಯ ಅಂಗವಿಕಲರಿಗಾಗಿ ನೀಡುವ ಸೌಲಭ್ಯಗಳನ್ನು ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಅತ್ಯವಶ್ಯವಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮಾಣ ಪತ್ರ ನೀಡುತ್ತಿಲ್ಲ. ಸರ್ಕಾರಿ ಬಸ್‍ಗಳು ಅಂಗವಿಕಲರನ್ನು ನೋಡಿದರೆ ನಿಲ್ಲಿಸುವುದಿಲ್ಲ. ಕೆಎಸ್‍ಆರ್‍ಟಿಸಿಯಲ್ಲಿ ಬಸ್‍ಪಾಸ್ ಮಾಡಿಕೊಡುತ್ತಿಲ್ಲ. ಮತ್ತು ಅಂಗವಿಕಲರಿಗೆ ತ್ರಿ ಚಕ್ರವಾಹನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಚನ್ನಗಿರಿ ನಿವಾಸಿ ಯೋಗರಾಜ್ ಅರ್ಜಿ ಸಲ್ಲಿಸಿ, ಗ್ರಾಮ ಪಂಚಾಯತ್‍ನಲ್ಲಿ 3 ತಿಂಗಳಿಗೊಮ್ಮೆ ಅಂಗವಿಕಲರ ಕುಂದು ಕೊರೆತ ಸಭೆ ನಡೆಸಿ, ಅಂಗವಿಕಲರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.ಇವುಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ, ಅಂಗವಿಕಲರ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳನ್ನು ಅವರಿಗೆ ತಲುಪಿಸಬೇಕು ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳು ಬಸ್ ನಿಲ್ದಾಣ ಇರುವಲ್ಲಿ ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‍ನ ಸದಸ್ಯರು, ಫೆಬ್ರವರಿ ತಿಂಗಳನಲ್ಲಿ ಕೊಟ್ಟೂರು ಪಾದಯಾತ್ರೆ ಆರಂಭಗೊಳ್ಳಲಿದ್ದು, ಪಾದಯಾತ್ರೆ ಹೋಗುವ ಭಕ್ತರಿಗೆ ಜಿಲ್ಲಾಡಳಿತದಿಂದ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.
ಚನ್ನಗಿರಿ ನಿವಾಸಿ ಅಲ್ಲಾಭಕ್ಷಿ ದಾವಣಗೆರೆ ಚನ್ನಗಿರಿ ಮಾರ್ಗದಲ್ಲಿ ಸಂಚರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ನಗರದ ಹೈಸ್ಕೂಲ್ ಮೈದಾನದಲ್ಲೇ ಪ್ರತೇಕವಾಗಿ ನಿಲುಗಡೆ ಮಾಡಬೇಕು ಎಂದು ಮನವಿ ಮಾಡಿದರು.ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಲೇಶ್ವರ್ ಮಾತನಾಡಿ, ನಗರದಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮುಳ್ಳು. ಕಸ ಕಡ್ಡಿಗಳಿಂದ ತುಂಬಿದ್ದು, ಅದನ್ನು ಸ್ವಚ್ಚಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ನಗರದ ಹೈಸ್ಕೂಲ್ ಮೈದಾನದ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿ ನಡೆಸುತ್ತಿರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಜನಸಾಮಾನ್ಯರಿಗೆ ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ, ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ ಮುದಜ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ, ದಾವಣಗೆರೆ ತಹಶೀಲ್ದಾರ್ ಸಂತೋಷ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ