ಎಸ್ಸಿ-ಎಸ್ಟಿ ಸಂತ್ರಸ್ತರಿಗೆ ಧಮ್ಕಿ ಹಾಕಿದರೆ ಸೂಕ್ತ ಕ್ರಮ

ದಾವಣಗೆರೆ :

     ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಬಲವಂತಾಗಿ ರಾಜೀ ಸಂಧಾನ ಹಾಗೂ ದೂರು ನೀಡದಂತೆ ಧಮ್ಕಿ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಎಚ್ಚರಿಕೆ ನೀಡಿದರು.

      ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯ 2ನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ಬಲವಂತವಾಗಿ ರಾಜೀ ಸಂಧಾನ ಹಾಗೂ ದೂರು ನೀಡದಂತೆ ಸಂತ್ರಸ್ಥರನ್ನು ಹೆದರಿಸಿ ಧಮ್ಕಿ ಹಾಕುವ ಪ್ರಕರಣಗಳು ಕಂಡುಬಂದರೆ, ತಕ್ಷಣವೇ ಇಲಾಖೆಯ ಗಮನಕ್ಕೆ ತನ್ನಿ, ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

     ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಸರ್ಕಾರದ ನಿಯಮಾವಳಿಯಂತೆ ಎಸ್.ಸಿ. ಮತ್ತು ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಾಗಿ, ಎಫ್‍ಐಆರ್ ಆದ ಬಳಿಕ ಶೇ.25 ರಷ್ಟು, ಚಾರ್ಜ್‍ಶೀಟ್ ಸಲ್ಲಿಕೆಯ ನಂತರ ಶೇ.50 ರಷ್ಟು ಹಾಗೂ ಕೇಸ್ ಮುಗಿದ ಬಳಿಕ ಸಲ್ಲಬೇಕಾದ ಪರಿಹಾರವನ್ನು ನಿಗದಿತ ಅವಧಿಯಲ್ಲಿ ವಿತರಿಸಬೇಕೆಂದು ಸೂಚಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಆಧಾರಿತ ಪ್ರಕರಣಗಳು ದಾಖಲಾದ ನಂತರದಲ್ಲಿ ಆಯಾ ಕೇಸ್‍ಗಳಿಗೆ ತಕ್ಕಂತೆ ಮತ್ತು ಸರ್ಕಾರದ ನಿಯಮಗಳಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

     ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ್ ಕುಂಬಾರ್ ಮಾತನಾಡಿ, ಜನವರಿಯಿಂದ ಜೂನ್ ಅಂತ್ಯದ ವರೆಗೆ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 18 ಪ್ರಕರಣಗಳ ಮೇಲೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿವೆ. 6 ಪ್ರಕರಣಗಳು ತನಿಖೆ ಹಂತದಲ್ಲಿವೆ. ಇನ್ನುಳಿದ 3 ಪ್ರಕರಣಗಳಲ್ಲಿ ಬಿ.ರಿಪೋರ್ಟ್ ಹಾಕಲಾಗಿದೆ. 9 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಆದೇಶದಂತೆ ಎಫ್‍ಐಆರ್ ಮತ್ತು ಚಾರ್ಜ್‍ಶೀಟ್ ಸಲ್ಲಿಕೆಯಾದ ನಂತರ ಶೇ.50 ರಷ್ಟು ಪರಿಹಾರವನ್ನು ಒಟ್ಟಿಗೆ ನೀಡುವಂತೆ ಸೂಚಿಸಿದ ಪರಿಣಾಮ ಈಗ ಅದರಂತೆ ನೀಡಲಾಗುತ್ತಿದೆ ಎಂದರು.

     ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಒಮ್ಮತದಿಂದ ಸರ್ಕಾರ ನಿಯಮಾಳಿಗಳಂತೆ ಪರಿಹಾರ ಒದಗಿಸಿ ಸಲಹೆ ನೀಡಿದರು.
ಸರ್ಕಾರಿ ಅಭಿಯೋಜಕ ಕೆಂಚಪ್ಪ ಮಾತನಾಡಿ, ದಾವಣಗೆರೆ ಗ್ರಾಮಾಂತರ, ದಾವಣಗೆರೆ ತಾಲೂಕು, ಹೊನ್ನಾಳಿ ತಾಲೂಕು, ಹರಿಹರ ಹಾಗೂ ಚನ್ನಗಿರಿಗೆ ತಲಾ ಒಂದು ಪ್ರಕರಣಗಳು ಬಾಕಿ ಉಳಿದಿವೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮಾತನಾಡಿ, ಬಾಕಿ ಇರುವ ಪ್ರಕರಣ ಬಗ್ಗೆ ಪರಿಶೀಲನೆ ನಡೆಸಿ, ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

      ಎಸ್.ಸಿ, ಎಸ್.ಟಿ ಜಾಗೃತ ದಳದ ನಾಮ ನಿರ್ದೇಶನ ಸದಸ್ಯ ಆವರಗೆರೆ ಉಮೇಶ್ ಮಾತನಾಡಿ, ದಾವಣಗೆರೆ ಕೆ.ಟಿ.ಜೆ ನಗರದಲ್ಲಿ ಹಾಗೂ ಹರಪನಹಳ್ಳಿಯ ಠಾಣೆಯಲ್ಲಿ ದಾಖಲಾದ ದೂರುಗಳ ಅಪರಾಧಿಗಳ ಪತ್ತೆಯಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಮನವಿ ಮಾಡಿದರು.

       23ನೇ ವಾರ್ಡಿನ ಆವರಗೆರೆಯ ಸರ್ವೇ ನಂ.321/1ಪಿ1ರಲ್ಲಿ ಸರ್ಕಾರ 1.20 ಗುಂಟೆ ಜಮೀನು ಖರೀದಿಸಿ 74 ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಅಲ್ಲಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪಾಲಿಕೆ ವತಿಯಿಂದ ನೀಡಲು ಹೋದರೆ ಆ ಜಮೀನಿಗೆ ತೆರಳುವ ಮಾರ್ಗದಲ್ಲಿ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಆವರಗೆರೆ ಸರ್ವೇ ನಂ.273/3ರಲ್ಲಿ ಸರ್ಕಾರ 3.8 ಗುಂಟೆ ಜಮೀನು ಖರೀದಿಸಿ ವಿಶೇಷವಾಗಿ ಎಸ್.ಸಿ ಮತ್ತು ಎಸ್.ಟಿ.ಗಳಿಗೆ ನೀಡಿದೆ. ಅಲ್ಲೂ ರುದ್ರಭೂಮಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಜಮೀನು ಹದ ಮಾಡಿ ನಾಟಿ ಮಾಡಲಾಗಿದೆ. ಶವಗಳನ್ನು ಅಲ್ಲಿಗೆ ಸಾಗಿಸಲು ಫಜೀತಿ ಪಡುವಂತಾಗಿದೆ ಇದರ ಬಗ್ಗೆ ಪರಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ, ಪರಿಶೀಲನೆ ನಡೆಸಿ ಮುಂದಿನ ಸಭೆಯ ವೇಳೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಶಾಮನೂರು ಹತ್ತಿರ 2 ಎಸ್.ಸಿ ಮತ್ತು ಎಸ್.ಟಿ ಬಾಲಕಿಯರ ಹಾಸ್ಟೇಲ್‍ಗಳಿಗೆ ಸೂಕ್ತ ಬಸ್ಸಿನ ಸೌಕರ್ಯವಿಲ್ಲದೆ 2 ಕಿ.ಮೀ ನಡೆದು ಹೋಗಬೇಕಾಗಿದೆ. ಮಾರ್ಗ ಮಧ್ಯದಲ್ಲಿ ಯುವಕರು ಕ್ರಿಕೆಟ್ ಆಡುತ್ತಾರೆ, ಓಡಾಡುವ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಕೆ.ಎಸ್.ಆರ್.ಟಿ..ಸಿ ವತಿಯಿಂದ ಜೆ.ಎಚ್.ಪಟೇಲ್ ಬಡಾವಣೆಯ ತನಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

      ಈ ವೇಳೆ ಜಿಲ್ಲಾಧಿಕಾರಿ ದೂರವಾಣಿ ಮೂಲಕ ಕೆಎಸ್‍ಆರ್‍ಟಿಸಿ ಅಧಿಕಾರಿಯನ್ನು ಸಂಪರ್ಕಿಸಿ ಬಸ್‍ಗಳು ಹಾಸ್ಟೆಲ್ ತನಕ ಹೋಗುವಂತೆ ಸೂಚಿಸಿ, ಅದರ ವರದಿ ನೀಡಬೇಕೆಂದು ಸೂಚಿಸಿದರು.ಹರಿಹರ ತಾಲೂಕು ಎಸ್.ಸಿ, ಎಸ್.ಟಿ ಜಾಗೃತ ದಳದ ನಾಮನಿರ್ದೇಶನ ಸದಸ್ಯ ಸುಭಾಷ್‍ಚಂದ್ರಬೋಸ್ ಮಾತನಾಡಿ, ಜಿಲ್ಲಾದ್ಯಂತ ಖಾಸಗಿ ಶಾಲೆಗಳಲ್ಲಿ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ತೆಗದುಕೊಳ್ಳಬಾರದು ಎಂಬ ಆದೇಶವಿದ್ದರೂ ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಖಾಸಗಿ ಶಾಲೆ-ಕಾಲೇಜುಗಳಿಗೆ ಪ್ರವೇಶ ಶುಲ್ಕ ಕಟ್ಟಿಸಿಕೊಳ್ಳದಂತೆ ಸೂಚಿಸಬೇಕೆಂದು ಮನವಿ ಮಾಡಿದರು.

      ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡದಂತೆ ವಿಟಿಯು, ಡಿಡಿಪಿಯು, ಡಿಡಿಪಿಐ, ಐಟಿಐ, ಡಿಪ್ಲೊಮ, ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಚ್ಚರಿಸಲಾಗುವದು. ಅದಕ್ಕೆ ಸರಿಹೋಗದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುದು ಎಚ್ಚರಿಸಿದರು.ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರಾಘವನ್, ಎಸ್.ಸಿ ಮತ್ತು ಎಸ್.ಟಿ ಜಾಗೃತ ದಳದ ನಾಮ ನಿರ್ದೇಶನ ಸದಸ್ಯರುಗಳಾದ ಅರವಿಂದ್, ಬಸವರಾಜು, ರಾಮಪ್ಪ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap