ದಾವಣಗೆರೆ:

ಬೆಂಗಳೂರು ಕ್ರಿಕೆಟ್ ಅಕಾಡೆಮಿ ಮಾದರಿಯಲ್ಲಿ ರಾಜ್ಯದ ಬೇರೆಲ್ಲಾ ಜಿಲ್ಲೆಗಳಲ್ಲೂ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತುಮಕೂರು ವಲಯದಿಂದ ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಉದ್ದೇಶದಿಂದ ಈಗಾಗಲೇ ಕ್ರಿಕೆಟ್ ತರಬೇತುದಾರರ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಭಾಗವಹಿಸಿದ್ದ 300 ಜನರಲ್ಲಿ 15 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇವರಿಗೆ ಹೆಚ್ಚುವರಿ ತರಬೇತಿ ನೀಡಲಾಗುವುದು ಎಂದರು.
ಕೆಲವೆಡೆ ಅತ್ಯುತ್ತಮ ಕ್ರೀಡಾಂಗಣ:
ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳನ್ನು ಹೊರ ತರುವ ಉದ್ದೇಶದಿಂದ ರಾಜ್ಯದಲ್ಲಿರುವ ಎಲ್ಲಾ ಕ್ರಿಕೆಟ್ ಮೈದಾನಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದ್ದು, ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಅನೇಕ ಕಡೆಗಳಲ್ಲಿ ಅತ್ಯುತ್ತಮ ಕ್ರೀಡಾಂಗಣಗಳಿವೆ ಎಂದರು.
ದೇಶದ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವೂ ಒಂದಾಗಿದೆ. ಇಲ್ಲಿ ಸಬ್‍ವೇ ನಿರ್ಮಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಳೆ ಬಂದರೆ ಕೇವಲ 25-30 ನಿಮಿಷಗಳಲ್ಲೇ ಮಳೆ ನೀರು ಹಿಂಗಿಕೊಳ್ಳಲಿದೆ. ಇಂತಹ ವ್ಯವಸ್ಥೆ ದೇಶದ ಯಾವ ಕ್ರೀಡಾಂಗಣದಲ್ಲೂ ಇಲ್ಲ ಎಂದು ಅವರು ನುಡಿದರು.
ಟರ್ಫ್ ಪಿಚ್ ಕ್ರೀಡೆ ತರಬೇತಿ:
ರಾಜ್ಯದ ಗದಗ, ಹಾಸನ ಮತ್ತಿತರೆ ಕಡೆಗಳಲ್ಲಿ ಟರ್ಫ್ ಪಿಚ್ ಮಾಡುವ ಉದ್ದೇಶವಿದೆ. ನಾವುಗಳೆಲ್ಲರೂ ಅಂದು ಮ್ಯಾಟ್ ಪಿಚ್‍ನಲ್ಲೇ ಆಟವಾಡುತ್ತಿದ್ದೆವು. ಆದರೆ, ಈಗೆಲ್ಲಾ ಟರ್ಫ್ ಪಿಚ್ ಬೇಕು ಎಂದ ಅವರು, ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಅಂತರ ಜಿಲ್ಲಾ ಮಟ್ಟದಲ್ಲಿ 14, 16, 19 ಮತ್ತು 23ರ ವಯೋಮಾನದವರಿಗೆ ಅವರ ವಯೋಮಾನಕ್ಕೆ ಅನುಗುಣವಾಗಿ ಬೆಂಗಳೂರಿನಲ್ಲಿ ನಡೆಯುವ ಬೇಸಿಗೆ ಶಿಬಿರದಲ್ಲಿ ಟರ್ಫ್ ಪಿಚ್ ಕ್ರೀಡೆ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.
ಭಾರತ ಕ್ರಿಕೆಟ್ ತಂಡದಲ್ಲಿ ಹಾಲಿ ಕರ್ನಾಟಕದ ಮೂವರು ಆಟವಾಡುತ್ತಿದ್ದು, ಪ್ರಸಿದ್ಧ ಕೃಷ್ಣ ಮತ್ತು ಕೆ. ಗೌತಮ್ ಕೂಡ ಆಡುವ ಸಾಮಥ್ರ್ಯ ಹೊಂದಿದ್ದು, ತಂಡ ಪ್ರವೇಶಿಸುವ ಹಂತದಲ್ಲಿದ್ದಾರೆ. ಇವರು ಸೇರಿದರೆ ನಮ್ಮ ಕ್ರೀಡಾಪಟುಗಳ ಸಂಖ್ಯೆ 4-5 ಆಗಲಿದೆ. ರಣಜಿ ಪಂದ್ಯದಲ್ಲಿ ಇತ್ತೀಚಿನ 4 ವರ್ಷಗಳಲ್ಲಿ ಕರ್ನಾಟಕ ತಂಡವು ಮೂರು ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಈ ಬಾರಿ ಗೆಲ್ಲುವ ವಿಶ್ವಾಸವಿದೆ. ನಮ್ಮ ತಂಡದ ದೇವದತ್ತ ಪಡಿಕಲ್ ಅವರು ಅತ್ಯುತ್ತಮವಾಗಿ ಆಟ ಆಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ವಿರುದ್ಧ ಗೆಲುವು ಕಷ್ಟ:
ಭಾರತ ಕ್ರಿಕೆಟ್ ತಂಡವು ಉತ್ತಮ ಕ್ರೀಡಾಪಟುಗಳನ್ನು ಹೊಂದಿದೆಯಾದರೂ ನ್ಯೂಜಿಲೆಂಡ್ ವಿರುದ್ದ ಗೆಲ್ಲುವುದು ಕಷ್ಟವೆನಿಸುತ್ತದೆ. ಆಸ್ಟ್ರೇಲಿಯಾ ತಂಡಕ್ಕೆ ಹೋಲಿಸಿದರೆ ನ್ಯೂಜಿಲೆಂಡ್ ವಿರುದ್ದ ಗೆದ್ದಿರುವುದು ತುಂಬಾ ಕಡಿಮೆ. ನಮ್ಮ ಬೌಲರ್‍ಗಳು ಬೌಲಿಂಗ್ ಮಾಡುವ ವೇಗ ಕಡಿಮೆ ಎನಿಸುತ್ತದೆ. ಅದು ಸ್ವಿಂಗ್ ಮತ್ತು ಸೀಮ್ ರೀತಿಯಲ್ಲಿರುತ್ತದೆ ಎಂದು ಹೇಳಿದರು.
ವಾರ್ಷಿಕ ಬಹುಮಾನ ವಿತರಣೆ:
ನಂತರ ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಏರ್ಪಡಿಸಿದ್ದ ತುಮಕೂರು ವಲಯದ 2018-19ನೇ ಸಾಲಿನ ವಾರ್ಷಿಕ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ, ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಕ್ರಿಕೆಟ್ ಆಟಗಾರರಿದ್ದು, ಭಾರತ ತಂಡಕ್ಕೆ ವಿನಯಕುಮಾರ್ ಅವರಂತಹ ಕ್ರೀಡಾಪಟುಗಳನ್ನು ನೀಡಿರುವುದೇ ಇದಕ್ಕೆ ಉದಾಹರಣೆ ಎಂದು ತಿಳಿಸಿದರು.
1980-81ರಲ್ಲಿ ನಾನು ಮೊದಲ ಬಾರಿಗೆ ರಣಜಿ ಕ್ರಿಕೆಟ್ ಆಡಿದ್ದು ಕರ್ನಾಟಕದಲ್ಲಿ ಎಂದು ನೆನಪಿಸಿಕೊಂಡ ಅವರು, ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಮುಂತಾದ ಕಡೆಗಳಲ್ಲಿ ಕ್ರಿಕೆಟ್‍ಗೆ ಅತ್ಯುತ್ತಮ ಮೈದಾನಗಳಿವೆ. ತುಮಕೂರು ವಲಯದಲ್ಲಿ ಉತ್ತಮ ಕ್ರಿಕೆಟ್‍ಪಟುಗಳಿದ್ದು, ಅವರೆಲ್ಲರೂ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕೆಎಸ್‍ಸಿಎ ತುಮಕೂರು ವಲಯದ ಚೇರ್ಮನ್ ಡಿ.ಎಚ್.ಮೋಹನರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಎಸ್‍ಸಿಎ ತುಮಕೂರು ವಲಯದ ಸಂಚಾಲಕ ಕೆ.ಶಶಿಧರ್, ಜೆ.ಅಭಿರಾಂ, ಡಾ.ಜಯರಾಂ, ಸತೀಶ್ಚಂದ್ರ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
