ಬೆಂಗಳೂರು
ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾನುವಾರ ಜನತಾ ಕರ್ಫ್ಯೂ ವೇಳೆ ಸಾರ್ವಜನಿಕರು ಅನಗತ್ಯವಾಗಿ ಹೊರಬಂದರೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.
ಅಗತ್ಯವಿಲ್ಲದಿದ್ದರೂ ಹೊರಗೆ ಬರುವುದು ಅನಗತ್ಯವಾಗಿ ಬೀದಿಗೆ ಬಂದು ಗುಂಪು ಸೇರುವುದು, ನಿಂತುಕೊಳ್ಳುವುದು, ಕಾಲಹರಣ ಮಾಡುವುದು ಮಾಡಿದರೆ ಪ್ರಕರಣ ದಾಖಲಿಸಲಿದ್ದು, ಸಾರ್ವಜನಿಕರು ಜನತಾ ಕರ್ಫ್ಯೂವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾರಣಾಂತಿಕ ಕೊರೋನಾ ಹಬ್ಬುತ್ತಿರುವ ಇಂತಹ ಸಂಕಷ್ಟಕರ ಸಮಯದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಕರ್ಫ್ಯೂ ವಿಧಿಸಿಕೊಂಡು ಮಾರಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೊಬ್ಬರೂ ಕೂಡ ಮನೆಯಿಂದ ಹೊರಗೆ ಬರಬಾರದು” ಎಂದು ಮನವಿ ಮಾಡಿದರು.
ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು, ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ಪ್ರವಾಸ, ವಾಕಿಂಗ್ ಕಾರ್ಯಕ್ರಮ ಎಂದು ರಸ್ತೆ ಮೇಲೆ ತಿರುಗಾಡುತ್ತಿದ್ದರೆ 31(ಐ) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಸಿದ್ದೇವೆ.
ಮುಚ್ಚಿಟ್ಟರೆ ಕ್ರಮ ಕೊರೊನಾ ಸೋಂಕಿತರು ವಿಷಯ ಮುಚ್ಚಿಡುತ್ತಿರುವುದು ಬೆಳಕಿಗೆ ಬರುತ್ತಿದೆ. ಸೋಂಕು ಮುಚ್ಚಿಡುತ್ತಿರುವವರು ಬಡವರಲ್ಲ ಶ್ರೀಮಂತರು, ಪ್ರಭಾವಿಗಳಾಗಿದ್ದು ಅಂತಹವರನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.ಬೆಂಗಳೂರಿನಲ್ಲಿ ಎಲ್ಲಾ ಕಡೆ ಬ್ಯಾರಿಕೇಡ್‍ಗಳನ್ನು ಹಾಕಿ ಪೊಲೀಸರು ಗಸ್ತಿನಲ್ಲಿರುತ್ತಾರೆ. ಈಗಾಗಲೇ ಸಭೆ ನಡೆಸಿ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಲಾಗಿದ್ದು, ಹೊರಗಡೆ ಇರುವ ಪ್ರತಿ ಸಿಬ್ಬಂದಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಲು ಹೇಳಿದ್ದೇನೆ ಎಂದು ಪೆÇಲೀಸ್ ಆಯುಕ್ತ ಭಾಸ್ಕರ್‍ರಾವ್ ಹೇಳಿದರು.
ಪ್ರತಿಯೊಬ್ಬರ ಒಳಿತಿಗಾಗಿ ಇಂತಹ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ಪ್ರತಿಯೊಬ್ಬರು ಇದಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುವುದು ಅತಿಮುಖ್ಯ ಎಂದರು.
ನೋಡೆಲ್ ಅಧಿಕಾರಿ
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ ಬಿಟ್ಟು ಯಾವುದೇ ಕಚೇರಿ ಕಾರ್ಯನಿರ್ವಹಿಸುವುದಿಲ್ಲ ಈಗಾಗಲೇ ಬೇರೆ ದೇಶಗಳಿಂದ ನಗರಕ್ಕೆ ಬಂದಿರುವವರನ್ನು ಗುರುತಿಸಿ ಅವರ ಕೈಗಳಿಗೆ ಕೊರೊನಾ ಸೀಲ್ ಹಾಕಲಾಗಿದೆ. ಅವರ ಮನೆಯವರು ಅಕ್ಕಪಕ್ಕದವರು ಸೇರಿ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.ಕೊರೊನಾ ಸೋಂಕು ಸಂಬಂಧ ಕಮಾಂಡ್ ಸೆಂಟರ್‍ನ ಡಿಸಿಪಿ ಇಶಾಪಂತ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ