ಬೆಂಗಳೂರು
ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ರಾಜ್ಯದ ನಿಯೋಗ ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಅಭಾವ ಪರಿಸ್ಥಿತಿಯಿಂದಾಗಿ ಸುಮಾರು 16,662 ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಬರ ಪರಿಹಾರ ಕಾರ್ಯಗಳಿಗೆ ಎನ್‍ಡಿಆರ್‍ಎಫ್‍ನಿಂದ 2,434 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಮತ್ತಿತರ ಅಧಿಕಾರಿಗಳು ಇದ್ದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್.ವಿ. ದೇಶಪಾಂಡೆ, ರಾಜ್ಯದಲ್ಲಿ ಮುಂಗಾರು ವೈಫಲ್ಯದಿಂದ 26 ಲಕ್ಷದ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 15 ಸಾವಿರದ 294 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಉಳಿದಂತೆ ಒಂದು ಲಕ್ಷ 94ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸುಮಾರು 1 ಸಾವಿರದ 368 ಕೋಟಿ ರೂಪಾಯಿ ಮೌಲ್ಯದ ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ, ಹೀಗಾಗಿ ರಾಜ್ಯಕ್ಕೆ ಕೂಡಲೇ ಬರ ಅಧ್ಯಯನ ತಂಡವನ್ನು ಕಳುಹಿಸಬೇಕೆಂದು ಒತ್ತಾಯಿಸಿದರು.
ರಾಜ್ಯದ 159 ಗ್ರಾಮಗಳು ಹಾಗೂ ನಗರ ಪ್ರದೇಶಗಳ 136 ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ, ಬರಪೀಡಿತ ತಾಲೂಕುಗಳ ಸುಮಾರು 6 ಲಕ್ಷ 36 ಸಾವಿರ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದ್ದು, ಇದಕ್ಕಾಗಿ ಸುಮಾರು ಒಂದು ಸಾವಿರದ 43 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ ಎಂದು ಸಚಿವ ದೇಶಪಾಂಡೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
