ಶಿರಾ
ಯಾಹೊತ್ತು ಸತ್ಯನಾರಾಯಣ್ ನಿಧನರಾದರೋ ಆ ಹೊತ್ತೆ ಅವರ ಧರ್ಮಪತ್ನಿ ಅಮ್ಮಾಜಮ್ಮ ಅವರಿಗೆ ಉಪ ಚುನಾವಣೆಯ ಟಿಕೆಟ್ ನೀಡಬೇಕೆಂದು ನಿರ್ಧರಿಸಿದ್ದೆವು. ಈ ಉಪ ಸಮರದಿಂದಲೆ ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್. ಪಕ್ಷವನ್ನು ನಿರ್ನಾಮ ಮಾಡಲು ವಿರೋಧ ಪಕ್ಷಗಳು ಸಂಚು ನಡೆಸಿದ್ದು, ಆದರೆ ಎಂದೂ ಕೂಡ ಪ್ರಾದೇಶಿಕ ಪಕ್ಷ ಸಾಯುವುದಿಲ್ಲ. ನಮ್ಮ ಕಾರ್ಯಕರ್ತರು ಸಾಯಲು ಬಿಡುವುದೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಚಂಗಾವರ ಗ್ರಾಮದಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ನಮ್ಮದೇ ಪಕ್ಷದಲ್ಲಿದ್ದುಕೊಂಡು ನಮ್ಮ ಜೊತೆಯಲ್ಲಿಯೇ ಬೆಳೆದು ರಾಜಕೀಯದ ಅನುಭವ ಪಡೆದವರು, ನಮ್ಮ ಪ್ರಾದೇಶಿಕ ಪಕ್ಷವನ್ನು ನಿರ್ನಾಮ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಪಕ್ಷವನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಪಕ್ಷದ ಗಟ್ಟಿಕಾಳಿನ ಕಾರ್ಯಕರ್ತರಿರುವಾಗ ಅದು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಚುನಾವಣೆ ಬರಬಾರದಿತ್ತು. ಸತ್ಯನಾರಾಯಣ್ ಅಕಾಲಿಕ ನಿಧನ ಇಡೀ ಪಕ್ಷಕ್ಕೆ ನೋವು ತಂದಿದೆ. ಈ ಹಿಂದೆ ಎ.ಪಿ.ಎಂ.ಸಿ.ಯಲ್ಲಿ ಶೇಂಗಾ ಬೆಲೆ ಕುಸಿದಾಗ ಮಂತ್ರಿಯಾಗಿದ್ದ ಸತ್ಯನಾರಾಯಣ್ ರೈತರ ಸಾವನ್ನು ಕಂಡು ಕಣ್ಣೀರಿಟ್ಟು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕೇಂದ್ರದಲ್ಲಿದ್ದ ನಾನು ಖುದ್ದಾಗಿ ಬಂದು ಆತನನ್ನು ಸಂತೈಸಬೇಕಾಯ್ತು. ಅಷ್ಟೊಂದು ಭಾವನಾತ್ಮಕ ಜೀವಿಯಾಗಿದ್ದರು ಸತ್ಯನಾರಾಯಣ್ ಎಂದು ದಿ.ಸತ್ಯನಾರಾಯಣ್ ಅವರ ಪಕ್ಷನಿಷ್ಠೆಯನ್ನು ಸ್ಮರಿಸಿದರು.
ಉಪ ಚುನಾವಣೆಯ ಎರಡೂ ಕ್ಷೇತ್ರಗಳನ್ನು ಗೆಲ್ಲುತ್ತೇವೆಂದು ವಿರೋಧ ಪಕ್ಷಗಳು ಬೀಗುತ್ತಿವೆ. ಶಿರಾ ಕ್ಷೇತ್ರ ಕೆ.ಆರ್.ಪೇಟೆಯ ರೀತಿ ಇಲ್ಲ. ಅಲ್ಲಿನ ಚುನಾವಣೆಗೆ ಸ್ಥಳೀಯ ಇಲಾಖೆಯ ಅಧಿಕಾರಿಗಳನ್ನು ಬಳಿಸಿಕೊಂಡು ಇಡೀ ಜಿಲ್ಲಾಡಳಿತವನ್ನೇ ಬಿ.ಜೆ.ಪಿ. ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿತು. ಶಿರಾ ಕ್ಷೇತ್ರದಲ್ಲಿ ಅವರ ಆಟ ನಡೆಯುವುದಿಲ್ಲ. ಹಣದ ಅಮಿಷವನ್ನೊಡ್ಡಿ ಜೆ.ಡಿ.ಎಸ್. ಕಾರ್ಯಕರ್ತರನ್ನು ಕೊಂಡುಕೊಳ್ಳಲು ಸಾದ್ಯವಿಲ್ಲ ಎಂದು ಬಿ.ಜೆ.ಪಿ. ಪಕ್ಷದ ರಣತಂತ್ರವನ್ನು ಗೌಡರು ಟೀಕಿಸಿದರು.
ನಾನು ಮುಂದಿನ 8 ದಿನಗಳವರೆಗೂ ಶಿರಾ ಕ್ಷೇತ್ರದಲ್ಲಿಯೇ ಇರುತ್ತೇನೆ. ಮಧುಗಿರಿಯ ಶಾಸಕ ವೀರಭದ್ರಯ್ಯ ಅವರ ಮನೆಯಲ್ಲಿ ಪ್ರತಿದಿನ ರಾತ್ರಿ ತಂಗಿದ್ದು ಶಿರಾದ ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಅಮ್ಮಾಜಮ್ಮ ಅವರ ಪರ ಮತಭಿಕ್ಷೆ ಬೇಡುತ್ತೇನೆ. ನನ್ನೊಂದಿಗೆ ಪಕ್ಷದ ಎಲ್ಲಾ ಪ್ರಮುಖ ಮುಖಂಡರೂ ಶಿರಾದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಈ ಉಪ ಚುನಾವಣೆಯನ್ನು ನಾನು ಸವಾಲನ್ನಾಗಿ ಸ್ವೀಕರಿಸಿದ್ದೇನೆ ಎಂದ ದೇವೇಗೌಡರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ವಿರೋಧ ಪಕ್ಷದವರು ದೌರ್ಜನ್ಯವೆಸಗಿದಲಿಸಿಲ್ಲವೇ ಚುನಾವಣೆ ಸಂಬಂಧ ಕಿರುಕುಳ ನೀಡಿದಲ್ಲಿ ನಾನು ಸುಮ್ಮನೇ ಕೂರುವುದಿಲ್ಲ. ನನಗೊಂದು ಕರೆ ಮಾಡಿ ನಿಮ್ಮಲ್ಲಿಗೆ ಓಡಿ ಬರುತ್ತೇನೆ ಎಂದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಯಾವುದೇ ಸಮುದಾಯಗಳಿಗೆ ರಾಷ್ಟ್ರೀಯ ಪಕ್ಷಗಳು ಸಾಮಾಜಿಕ ಸ್ಥಾನಮಾನಗಳನ್ನು ನೀಡಿಲ್ಲ. ಶಿರಾ ಕ್ಷೇತ್ರವೊಂದರಲ್ಲಿಯೇ ಕುಮಾರಣ್ಣ ಸಿ.ಎಂ. ಆಗಿದ್ದಾಗ 18,000 ಮಂದಿ ರೈತರ 90 ಕೋಟಿ ರೂಗಳ ಸಾಲ ಮನ್ನಾ ಮಾಡಿದ್ದಾರೆ. ಅಂತಹ ರೈತರ ಬೆಂಬಲ ಪಕ್ಷಕ್ಕಿದೆ. ಚುನಾವಣಾ ನಿಯಮಗಳನ್ನು ಯಾರೂ ಕೂಡಾ ಉಲ್ಲಂಘಿಸಬೇಡಿ. ಸರಳ ಸಜ್ಜನಿಕೆ ಅಮ್ಮಾಜಮ್ಮನನ್ನು ಗೆಲ್ಲಿಸಿ ಮಡಿದ ಸತ್ಯನಾರಾಯಣ್ ಆತ್ಮಕ್ಕೆ ಶಾಂತಿ ದೊರಕಿಸಿ ಎಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ