ಹುಳಿಯಾರು:
ಗ್ರಹಣದ ಸಂದರ್ಭದಲ್ಲಿ ವಿಕಲಚೇತನರನ್ನು ಮಣ್ಣಿನಲ್ಲಿ ಹೂತರೆ ಅಂಗವೈಕಲ್ಯ ಹೋಗುತ್ತದೆ ಎನ್ನುವ ಮೌಡ್ಯದ ಬೆನ್ನತ್ತಿ 6 ವರ್ಷದ ವಿಕಲಚೇತನ ಬಾಲಕಿ ಹೇಮಲತಾನನ್ನು ಮಣ್ಣಿನಲ್ಲಿ ಹೂತಿಟ್ಟ ಘಟನೆ ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಲ್ಲಪ್ಪನಹಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಈಗ ಮಣ್ಣಿನಲ್ಲಿ ಹೂತಿಟ್ಟ ಬಾಲಕಿಯ ತಂದೆ ಚಿಕ್ಕಣ್ಣ ಅವರಿಗೂ ಬಾಲ್ಯದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. 8 ವರ್ಷಗಳ ಕಾಲ ಅವರು ತಿರುಗಾಡದಂತ್ತಾಗಿದ್ದರು. ಚಿಕ್ಕಣ್ಣನ ತಂದೆ ಶಿಗಜ್ಜ ಸಹ ಇಪ್ಪತ್ತು ವರ್ಷಗಳ ಹಿಂದೆ ಗ್ರಹಣದ ಸಂದರ್ಬದಲ್ಲಿ ಚಿಕ್ಕಣ್ಣನನ್ನು ಮಣ್ಣಿನಲ್ಲಿ ಹೂತಿಟ್ಟಿದ್ದರು. ಆಗ ಚಿಕ್ಕಣ್ಣನ ಅಂಗವೈಕಲ್ಯ ನಿವಾರಣೆಯಾಗಿತ್ತಂತ್ತೆ. ಹಾಗಾಗಿ ಈ ಸೂರ್ಯ ಗ್ರಹಣದಲ್ಲಿ ಚಿಕ್ಕಣ್ಣ ತನ್ನ ಮಗಳು ಹೇಮಲತಾಳ ಅಂಗವಿಕಲತೆ ಹೋಗಲೆಂದು ಮಣ್ಣಿನಲ್ಲಿ ಕುತ್ತಿಗೆಯವರೆವಿಗೂ ಹೂತಿಟ್ಟದರೆಂದು ಗ್ರಾಮದ ಯುವಕ ಚಿತ್ತಯ್ಯ ಪತ್ರಿಕೆಗೆ ತಿಳಿಸಿದ್ದಾರೆ.
ಮೂಡನಂಬಿಕೆಯಿಂದ ಮಣ್ಣಿನಲ್ಲಿ ಹೂತಿಟ್ಟಿ ಪರಿಣಾಮ ನಿತ್ರಾಣಗೊಂಡ ಬಾಲಕಿ ಆಕ್ರಂದನ ಮುಗಿಲು ಮುಟ್ಟಿದ್ದರೂ ಸಹ ಕೇಳದೆ ಪೋಷಕರು ಮೌನವಾಗಿದ್ದರು. ಸ್ಥಳದಲ್ಲಿದ್ದ ಬಾಲಕಿಯ ಅಜ್ಜಿ ಸಹ ಅಸಾಹಯಕಳಾಗಿದ್ದಳು. ಊರೊಳಗಿನ ಮನೆಯ ಮುಂಭಾಗವೇ ಮಣ್ಣಿನಲ್ಲಿ ಹೂತಿಟ್ಟಿದ್ದರಿಂದ ವಿಷಯ ತಿಳಿದ ಯುವಕರು ಸ್ಥಳಕ್ಕೆ ಆಗಮಿಸಿ ಪೋಷಕರ ಮನವೊಲಿಸಿ ಗ್ರಹಣ ಮುಗಿಯುವ ಮುಂಚೆಯೇ ಬಾಲಕಿಯನ್ನು ಮಣ್ಣಿನಿಂದ ಹೊರತೆಗೆಯಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







