ಬೆಂಗಳೂರು:
ನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಪಾರ್ಟ್ ಮೆಂಟ್ ಮೇಲ್ವಿಚಾರಕನೊಬ್ಬನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಅಪರಾಧಿಯನ್ನು 58 ವರ್ಷದ ಜೋಸೆಫ್ ಎಂದು ಗುರುತಿಸಲಾಗಿದಡೆ ಅಪಾರ್ಟ್ ಮೆಂಟ್ ನ ನಿರ್ವಹಣಾ ಕೊಠಡಿಯನ್ನು ಸ್ವಚ್ಛಗೊಳಿಸಲು ಹೇಳಿ ಅಲ್ಲಿ ಆಕೆ ಸ್ವಚ್ಛ ಮಾಡುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಹಿನ್ನಲೆ:
ಅಂಬಭವಾನಿ ನಗರದ ನಿವಾಸಿಯಾದ ಸಂಧ್ಯಾ ಇದೇ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಕಳೆದ ಮಾರ್ಚ್ 20ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಜೋಸೆಫ್ ಸಂಧ್ಯಾಳನ್ನು ಮೈಂಟೆನೆನ್ಸ್ ರೂಂಗೆ ಕರೆದಿದ್ದಾನೆ. ಅಲ್ಲಿ ಕೋಣೆಯ ಮೂಲೆಯಲ್ಲಿ ಸ್ವಚ್ಛ ಮಾಡುತ್ತಿದ್ದಾಗ ಜೋಸೆಫ್ ಹಿಂದಿನಿಂದ ಬಂದು ಗಟ್ಟಿಯಾಗಿ ಹಿಡಿದು ಅತ್ಯಾಚಾರವೆಸಗಲು ಯತ್ನಿಸಿದ. ಸಂಧ್ಯಾ ಹೇಗೋ ತಪ್ಪಿಸಿಕೊಂಡು ಹೊರಬಂದಳು. ಉಳಿದ ಹೌಸ್ ಕೀಪಿಂಗ್ ಸಿಬ್ಬಂದಿ ಅಳುತ್ತಿದ್ದ ಸಂಧ್ಯಾಳನ್ನು ಏನಾಯ್ತೆಂದು ಕೇಳಿದಾಗ ಎಲ್ಲವನ್ನೂ ವಿವರಿಸಿದಳು.
ಮರುದಿನ ಸಂಧ್ಯಾ ಮತ್ತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ಘಟನೆಯಾದ ದಿನ ಜೋಸೆಫ್ ಸಂಧ್ಯಾಳನ್ನು ಕರೆದುಕೊಂಡು ಸೂಪರ್ ಮಾರ್ಕೆಟ್ ಗೆ ಹೋಗಿ ಹೌಸ್ ಕೀಪಿಂಗ್ ಗೆ ಬೇಕಾದ ವಸ್ತುಗಳನ್ನು ತಂದಿದ್ದನು. ಸಂಧ್ಯಾಳ ಮೊಬೈಲ್ ಸಂಖ್ಯೆಯನ್ನು ಕೂಡ ಕೇಳಿದ್ದನು. ಆದರೆ ಆಕೆ ಕೊಡಲು ನಿರಾಕರಿಸಿದ್ದಳು.
ಹುಡುಗಿಯ ಹೇಲಿಕೆಯ ಮೇರೆಗೆ ಆರೋಪಿಯ ವಿಚಾರಣೆ ನಡೆಸದಾಗ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ ಮತ್ತು ಅಪರಾಧಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








