ಹಿರಿಯೂರು :
ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಈರುಳ್ಳಿ ಬೆಳೆದಿರುವ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಹೈರಾಣಾಗಿದ್ದು, ಸರ್ಕಾರ ಈ ಕೂಡಲೇ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸುವಂತೆ ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್.ಗಿರಿಧರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದ ತಾಲ್ಲೂಕು ಕಛೇರಿಯಲ್ಲಿ ವಂದೇ ಮಾತರಂ ಜಾಗೃತಿ ವೇದಿಕೆ ನೇತೃತ್ವದಲ್ಲಿ ತಾಲ್ಲೂಕು ತಹಶೀಲ್ದಾರರವರಿಗೆ ಮನವಿ ಪತ್ರ ಅರ್ಪಿಸಿ ಅವರು ಮಾತನಾಡಿದರು.
ಈ ಬಾರಿ ರಾಜ್ಯದ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರೀಕ್ಷೆಯಂತೆ ಮಳೆಯಾಗದಿರುವ ಹಿನ್ನೆಲೆಯಲ್ಲಿ ಕೃಷಿಕರು ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಬೋರ್‍ವೆಲ್‍ಗಳನ್ನು ಕೊರೆಸಿ, ಬಿತ್ತನೆ ಬೀಜ, ಗೊಬ್ಬರ, ಔಷಧಿ, ಕಟಾವು, ಸಾಗಾಟ ಸೇರಿದಂತೆ ಬಹಳಷ್ಟು ಹಣ ಖರ್ಚು ಮಾಡಿದ್ದರೂ ರೈತರಿಗೆ ಸೂಕ್ತ ಬೆಲೆ ಸಿಗದಂತಾಗಿದೆ ಎಂಬುದಾಗಿ ಅವರು ವಿಷಾದಿಸಿದ್ದಾರೆ.
ರಾಜ್ಯದ ಕೆಲವು ಭಾಗಗಳಲ್ಲಿ ಸಾವಿರಾರು ರೈತರು ಸಾಲ ಮಾಡಿ ಉತ್ತಮ ರೀತಿಯ ಪೋಷಣೆಯಿಂದ ಬಂಪರ್ ಬೆಳೆ ಬೆಳೆದಿದ್ದು ಸಾವಿರಾರು ಟನ್ ಈರುಳ್ಳಿ ಉತ್ಪಾದನೆಯಾಗಿದೆ. ಆದರೆ ಬೆಳೆದ ಬೆಳೆಗೆ ಬೆಲೆ ಸಿಗದೆ ರೈತರು ಪರಿತಪಿಸುತ್ತಿದ್ದಾರೆ. ಚೀಲಕ್ಕೆ ಸುಮಾರು 500/- ರೂ.ಗಳ ಹೊರೆ ರೈತರಿಗೆ ತಟ್ಟುತ್ತಿದ್ದು, ಕಟಾವು ಮಾಡಿದ ಸಾವಿರಾರು ಟನ್ ಈರುಳ್ಳಿ ಹೊಲದಲ್ಲೇ ಕೊಳೆಯುತ್ತಿದೆ. ಅಲ್ಲದೇ ರೈತರು ಪಡೆದ ಕೈಸಾಲದ, ಲೇವಾದೇವಿಗಾರರ ಬಳಿ ಪಡೆದ ಸಾಲದ ಬಡ್ಡಿ ವಿಪರೀತ ಏರುತ್ತಲೇ ಇದ್ದು ರೈತರು ಸಂಕಷ್ಟಗಳಿಂದ ಪಾರಾಗಲು ಆತ್ಮಹತ್ಯೆಯ ಹಾದಿ ತುಳಿಯುವ ಮೊದಲು ಈರುಳ್ಳಿ ಬೆಳೆದ ರೈತರ ಸಂಪೂರ್ಣ ವಿವರಗಳನ್ನು ಕಂದಾಯ, ಕೃಷಿ ಇಲಾಖೆಗಳ ಮೂಲಕ ಸರ್ಕಾರ ಮಾಹಿತಿ ಪಡೆದು ರೈತರಿಗೆ ಬೆಂಬಲ ಬೆಲೆ ಘೋಷಿಸುವಂತೆ ಅವರು ಒತ್ತಾಯಿಸಿದ್ದಾರೆ.