ದಾವಣಗೆರೆ:
ಉಗ್ರರ ಮೇಲೆ ಭಾರತೀಯ ವಾಸು ಸೇನೆ ನಡೆಸಿರುವ ನಿರ್ದಿಷ್ಟ ದಾಳಿಯನ್ನು ಬಿಜೆಪಿ ಚುನಾವಣಾ ದಾಳವನ್ನಾಗಿ ಬಳಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏರ್ ಸ್ಟ್ರೈಕ್‍ನಿಂದ ಕರ್ನಾಟಕದಲ್ಲಿ ಬಿಜೆಪಿ 22 ಸೀಟು ಗೆಲ್ಲಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಯಿಸಿ, ಏರ್ ಸ್ಟ್ರೈಕ್‍ನಂತಹ ನಿರ್ಧಿಷ್ಟ ದಾಳಿಯನ್ನು ಯಾರೂ ಸಹ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದರು.
ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷವು ಎಂದಿಗೂ ರಾಜಕಾರಣ ಮಾಡುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಯಾವ ಪದ ಬಳಸಿದ್ದಾರೆ ಗೊತ್ತಿಲ್ಲ. ಯಾರೂ ಕೂಡ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದ ಅವರು, ವ್ಯಕ್ತಿಗಿಂತ ದೇಶ ದೊಡ್ಡದು. ಸೇನೆಯ ವಿಚಾರವನ್ನು ಚುನಾವಣಾ ದಾಳವನ್ನಾಗಿ ಬಿಜೆಪಿ ಬಳಸಿಕೊಳ್ಳುವುದಿಲ್ಲ ಎಂದರು.
ಚುನಾವಣೆ ಸಿದ್ಧತೆಗಾಗಿ ಬೂತ್ ಮಟ್ಟದಿಂದ ಕಳೆದ ಮೂರು ತಿಂಗಳಿಂದ ಕೆಲಸ ಮಾಡಲಾಗುತ್ತಿದೆ. ಮಾರ್ಚ್ 2ರಂದು ಇಡೀ ರಾಜ್ಯಾದ್ಯಂತ ಒಂದೇ ದಿನ ಬೈಕ್‍ರ್ಯಾಲಿ ಹಮ್ಮಿಕೊಂಡಿದ್ದೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಗೆಲ್ಲಿಸಿದರೆ ದೆಹಲಿಯಲ್ಲಿ ಕನ್ನಡಿಗರ ಧ್ವನಿ ಬರುತ್ತೆ ಎಂಬುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್, ಕರ್ನಾಟಕದ 17 ಜನ ಬಿಜೆಪಿ ಸಂಸದರು ಸಹ ಕನ್ನಡಿಗರೇ ಆಗಿದ್ದಾರೆ. ಕನ್ನಡದಲ್ಲೇ ಪ್ರಮಾಣವಚನ ಮಾಡಿದ್ದಾರೆ, ಮಾತನಾಡಿದ್ದಾರೆ. ಭಾಷೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತರವಲ್ಲ ಎಂದರು.
ಉಗ್ರರನ್ನು ಸಾಯಿಸಬಾರದಿತ್ತು ಎಂದಿರುವ ತೋಟಗಾರಿಕೆ ಸಚಿವ ಮನಗುಳಿ ಅವರಿಗೆ ಮರೆಗುಳಿತನ ಬಂದಂತಿದೆ. ಸೈನಿಕರ ಬಗ್ಗೆ ಬಾಲಿಶ ಹೇಳಿಕೆ ನೀಡಿರುವುದು ಅವರ ಮರೆಗುಳಿತನಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಬೇರೂರಿರುವ ಭಯೋತ್ಪಾದನೆ ಕಿತ್ತು ಹಾಕಲು ಇದು ಒಳ್ಳೆಯ ಸಮಯ. ಇದನ್ನು ಬಿಟ್ಟು ಧಾರವಾಹಿಯ ರೂಪದಲ್ಲಿ ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗಲ್ಲ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದರು.
ಪೈಲಟ್ ಅಭಿನಂದನ್ ಅವರಿಗೆ ಯಾವುದೇ ತೊಂದರೆ ನೀಡದೇ, ಭಾರತಕ್ಕೆ ವಾಪಸ್ ಕಳುಹಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಅಭಿನಂದನ್ ಆದಷ್ಟು ಬೇಗ ಭಾರತಕ್ಕೆ ವಾಪಸ್ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.