ಸುಸಜ್ಜಿತ ಸಹಕಾರ ಭವನ ನಿರ್ಮಿಸೋಣ

ದಾವಣಗೆರೆ:

    ಸರ್ಕಾರ ಅನುದಾನ, ಜಮೀನು ಕೊಡಲಿ ಬಿಡಲಿ ನಾವೆಲ್ಲರೂ ಸೇರಿ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸುಸಜ್ಜಿತ ಸಹಕಾರ ಭವನ ನಿರ್ಮಿಸೋಣ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಡಾ.ಜೆ.ಆರ್.ಷಣ್ಮುಖಪ್ಪ ಕರೆ ನೀಡಿದರು.

     ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಶುಕ್ರವಾರ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಇವುಗಳ ಸಂಯುಕ್ರಾಶ್ರಯದಲ್ಲಿ ದಾವಣಗೆರೆ, ಚನ್ನಗಿರಿ ಮತ್ತು ಜಗಳೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ‘ವಿಶೇಷ ಕಾರ್ಯದಕ್ಷತೆ’ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಸಹಕಾರ ಸಂಸ್ಥೆಗಳಿಗೆ, ಸಹಕಾರ ಯೂನಿಯನ್ ಮಾತೃ ಸಂಸ್ಥೆ ಇದ್ದಂತೆ, ಹೀಗಾಗಿ ಸಹಕಾರ ಕ್ಷೇತ್ರ ಬೆಳೆಯಬೇಕಾದರೆ, ಸಹಕಾರ ಯೂನಿಯನ್ ಸದೃಢವಾಗಬೇಕಿವೆ. ಈ ಯೂನಿಯನ್ ಶುರುವಾಗಿ 15ರಿಂದ 16 ವರ್ಷಗಳು ಕಳೆದಿವೆ. ಆದರೂ ಸಹ ಒಂದು ಸ್ವಂತ ಕಟ್ಟಡ ಇಲ್ಲ. ನಮ್ಮದೇ ಒಂದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಡೂಡಾದಿಂದ ಜಮೀನು ಪಡೆಯಲು ಪ್ರಯತ್ನಿಸಲಾಗಿತ್ತು. ಆದರೆ, ಕಾರಣಾಂತರದಿಂದ ಜಮೀನು ಸಿಗಲಿಲ್ಲ. ನಮಗೆ ಸರ್ಕಾರ ಜಮೀನು ಕೊಡಲಿ, ಬಿಡಲಿ ನಾವುನಾವೇ ಸೇರಿಕೊಂಡು ವಂತಿಗೆ ಹಾಕಿಕೊಂಡು ಸುಸಜ್ಜಿತ ಸಹಕಾರ ಭವನ ನಿರ್ಮಿಸಿಕೊಳ್ಳೋಣ ಎಂದರು.

    ಸಹಕಾರ ಕ್ಷೇತ್ರ ಈಗ ಈ ಹಿಂದಿನಂತಿಲ್ಲ. ಸಾಕಷ್ಟು ಬದಲಾವಣೆಯಾಗಿದೆ. ಮೊದಲು ರೈತರು ಕೇಳಿದ ದಾಖಲೆಗಳನ್ನು ಕೊಡುತ್ತಿದ್ದರು. ಆದರೆ, ಈಗ ಅರ್ಜಿಯ ಮೇಲೆ ಸಹಿ ಮಾಡಲು ಹೇಳಿದರೆ, ಪಹಣಿ ಕೇಳಿದರೆ, ಹೋದ ವರ್ಷವೇ ಕೊಟ್ಟಿದ್ವಲ್ಲ. ಈಗ ಮತ್ತ್ಯಾಕೆ ಎಂಬುದಾಗಿ ಕೇಳಿವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಸಾಲ ವಸೂಲಿಗೆ ಈಗ ರೈತರ ಮನೆ ಬಾಗಿಲಿಗೆ ಹೋದರೆ, ಸಾಲ ಮನ್ನಾ ಆಗಿದೆಯಲ್ಲ. ಏಕೆ ಕೊಡಬೇಕೆಂದು ಪ್ರಶ್ನಿಸುತ್ತಾರೆ. ಆದರೆ, ತಾಂತ್ರಿಕ ಕಾರಣಗಳಿಂದ ಸಹಕಾರ ಬ್ಯಾಂಕುಗಳ 1.36 ಲಕ್ಷ ರೈತರ ಸಾಲ ಇನ್ನೂ ಮನ್ನಾವಾಗಿಲ್ಲ. ಅಗತ್ಯ ದಾಖಲೆ ಪಡೆದು ತಕ್ಷಣವೇ ಸಾಲ ಮನ್ನಾ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸಹ ತಾಕೀತು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

     ಸರ್ಕಾರ ಬೀದಿ ವ್ಯಾಪಾರಿಗಳಿಗೆ ಹಾಗೂ ಕಾಯಕ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಬೇಕೆಂದು ಸೂಚಿಸಿದೆ. ಆದರೆ, ಏನು ದಾಖಲೆ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ನಿರ್ದೇಶನ ನೀಡಿಲ್ಲ. ಈಗ ಭದ್ರತೆ ಪಡೆದು ಸಾಲ ಕೊಟ್ಟು ವಸೂಲಿ ಮಾಡುವುದೇ ಕಷ್ಟವಾಗಿದೆ. ಅಂತಹದರಲ್ಲಿ ಯಾವುದೇ ದಾಖಲೆ ಪಡೆಯದೇ ಸಾಲ ನೀಡಿದರೇ, ಸಹಕಾರ ಕ್ಷೇತ್ರ ದಿವಾಳಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ . ಆದ್ದರಿಂದ ಪತ್ತಿನ ಸಹಕಾರ ಸಂಘಗಳ ಕಾರ್ಯನಿರ್ವಾಹಕಾಧಿಕಾರಿಗಳು ಅಗತ್ಯ ದಾಖಲೆಗಳನ್ನು ಪಡೆದು ಸಾಲ ನೀಡಿ, ಬ್ಯಾಂಕ್‍ಗಳನ್ನು ಉಳಿಸಬೇಕೆಂದು ಕಿವಿಮಾತು ಹೇಳಿದರು.

       ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್.ಲಕ್ಷ್ಮಣ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಆದರೂ ಏಕೆ ನಾವು ಬದಲಾವಣೆಯಾಗಿಲ್ಲ ಎಂಬುದನ್ನು ಪ್ರಶ್ನಿಸಿಕೊಂಡು, ಇನ್ನೂ ಮುಂದಾದರೂ ಕಾರ್ಯಾಧ್ಯಕ್ಷತೆ ವೃದ್ಧಿಸಿಕೊಂಡು, ಹುದ್ದೆ ನಿಭಾಯಿಸುವ ಶಕ್ತಿ ಹೊಂದಬೇಕೆಂದು ಸಲಹೆ ನೀಡಿದರು.

         ಸಹಕಾರ ಕ್ಷೇತ್ರ ಅತ್ಯಂತ ಕ್ಲಿಷ್ಟಕರವಾಗಿದ್ದು, ನೀವುಗಳು ನಿರಂತರ ರೈತರ ಮಧ್ಯೆ ಇರ್ತಿರಿ, ಆದರೆ, ನೀವೇ ರೈತರ ಮುಖ ನೋಡದೇ ಇದ್ದರೆ ಹೇಗೆ? ಅಲ್ಲದೇ, ನಿಮ್ಮ ಪಾಲ್ಗೊಳ್ಳುವಿಕೆ ಸರಿಯಾಗಿರದ ಕಾರಣಕ್ಕೆ ಇಂದಿನ ವರೆಗೂ ಸಾಲ ಕೊಡಲು ಡಿಸಿಸಿ ಬ್ಯಾಂಕ್ ಅನ್ನೇ ಅವಲಂಬಿಸಿರುವುದು ಸರಿಯಲ್ಲ. ಇನ್ನೂ ಮುಂದಾದರೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸ್ವಂತ ಬಲದ ಮೇಲೆ ಸಾಲ ನೀಡುವ ವಾತಾವರಣ ಸೃಷ್ಟಿಸಬೇಕೆಂದು ಕಿವಿಮಾತು ಹೇಳಿದರು.

      ಜಿಲ್ಲಾ ಸಹಕಾರ ಬ್ಯಾಂಕ್ ಯೂನಿಯನ್ ನಿಯಮಿತ ನಿರ್ದೇಶಕ ಎನ್.ಎ.ಮುರುಗೇಶ್ ಮಾತನಾಡಿ, ಯಾವುದೇ ಒಂದು ಸಂಸ್ಥೆ ದಕ್ಷತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಕಾಪಾಡಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ನೀವು ಎಲ್ಲಿಯ ವರೆಗೂ ಈ ಮೂರು ಗುಣಗಳನ್ನು ಅಳವಡಿಸಿಕೊಳ್ಳುತ್ತಿರೋ ಅಲ್ಲಿಯ ವರೆಗೂ ನಿಮ್ಮ ಬ್ಯಾಂಕ್‍ಗಳು ಸರಿಯಾಗಿರುತ್ತವೆ.

      ಅಕಸ್ಮಾತ್ ನೀವು ಆಮಿಷಕ್ಕೆ ಒಳಗಾಗಿ ಸಂಸ್ಥೆಯನ್ನು ಕಾಪಾಡದೇ, ಅಡ್ಡ ಮಾರ್ಗ ಹಿಡಿದರೇ, ಸಹಕಾರಿ ಬ್ಯಾಂಕ್‍ಗಳೇ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದರು.

       ಇಂದು ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದ್ದು, ಆನ್‍ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ನೆಫ್ಟ್, ಆರ್‍ಟಿಜಿಎಸ್ ಹೀಗೆ ಹಣ ವರ್ಗಾವಣೆ ಮಾಡುವ ಸಾಕಷ್ಟು ತಂತ್ರಜ್ಞಾನ ಬಂದಿದೆ. ಆದರೆ, ಸಹಕಾರಿ ಬ್ಯಾಂಕ್‍ಗಳು ಇನ್ನೂ ಕಂಪ್ಯೂಟರೀಕರಣಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಆದ್ದರಿಂದ ನೀವು ಸಹ ತಂತ್ರಾಂಶದ ಬಗ್ಗೆ ಅರಿತು, ಸಹಕಾರ ಬ್ಯಾಂಕ್‍ನಲ್ಲೂ ಗಣಕೀಕೃತ ವ್ಯವಸ್ಥೆ ಜಾರಿಗೆ ತರಬೇಕೆಂದು ಸಲಹೆ ನೀಡಿದರು.

      ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಅಧ್ಯಕ್ಷ ಬಿ.ವಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿ. ಉಪಾಧ್ಯಕ್ಷ ಗಿಡ್ಡಳ್ಳಿ ನಾಗರಾಜ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕರುಗಳಾದ ಜೆ.ಎಸ್.ವೇಣುಗೋಪಾಲರೆಡ್ಡಿ, ಬಿ.ಶೇಖರಪ್ಪ, ಎಸ್.ಬಿ.ಶಿವಕುಮಾರ್, ಡಿ.ಎಂ.ಮುರಿಗೇಂದ್ರಯ್ಯ, ಟಿ.ರಾಜಣ್ಣ, ಸಿರಿಗೆರೆ ರಾಜಣ್ಣ, ಆರ್.ಎಂ.ಮಾಲತೇಶ್, ಅನ್ನಪೂರ್ಣ, ಡಿ.ಶಿವಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ನಿರೂಪಿಸಿದರು. ಬಸವರಾಜ್ ಪ್ರಾರ್ಥಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link