ತುಮಕೂರು
ಸದಾ ಯಕ್ಷಗಾನದ ಪೌರಾಣಿಕ ಪಾತ್ರಗಳ ಕಥೆಗಳ ಬಗ್ಗೆ ಒಲವು, ಅಭಿಮಾನ, ಅನುಭವವಿರುವ ನನಗೆ, ತುಮಕೂರು ತಾಲೂಕಿನ ಬಾಣಾವಾರ ಎಂಬ ಪುಟ್ಟ ಹಳ್ಳಿಯ ತ್ರಿಲೇಶ ಬಿ.ಎಸ್. ಎನ್ನುವ ಕಲಾವಿದ ಭಾರತ ಸರ್ಕಾರದ ಸಂಸ್ಕøತಿ ಸಚಿವಾಲಯದ ಸಹಕಾರದೊಂದಿಗೆ ನೆನ್ನೆ ಆಯೋಜಿಸಿದ್ದ “ಸುಯೋಧನ” ಎಂಬ ಪೌರಾಣಿಕ ನಾಟಕ ಒಂದು ಹೊಸ ತರಹದ ಅನುಭಾವವನ್ನು ನೀಡಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗುವುದರ ಜೊತೆಗೆ ನಾಟಕವನ್ನು ಆರಂಭದಿಂದ ಅಂತ್ಯದವರೆಗೆ ನೋಡಿದೆ. ನಾಟಕದ ರಚನೆಕಾರರಾದ ಎಸ್.ವಿ.ಕೃಷ್ಣಶರ್ಮರವರು ಸಂಭಾಷಣೆ ಹಾಗು ಸಾಹಿತ್ಯವನ್ನು ಅದ್ಭುತವಾಗಿ ಬರೆದಿದ್ದಾರೆ.
ಸೂತ್ರಧಾರಿ ಆರಂಭದಲ್ಲಿಯೇ ಸುಯೋಧನನ ಬಗ್ಗೆ ನಾನು ಹೇಳಲಾರೆ ಉಳಿದ ಪಾತ್ರಗಳು ನಿರೂಪಿಸುತ್ತವೆ ಎನ್ನುವ ಮಾತಿನಿಂದಾರಂಭಗೊಂಡು ಕೃಷ್ಣನ ಅಂತ್ಯದ ಸಂದೇಶದ ವರೆಗೆ ಸುಂದರವಾಗಿತ್ತು. ಕೃಷ್ಣ ಕರ್ಣನಿಗೆ ತಂದೆ-ತಾಯಿಗಳ ಪರಿಚಯ ಮಾಡುತ್ತಿರುವಾಗಲೇ ನೀನು ಕುಂತಿಯ ಪುತ್ರ ಎಂದಾಗ ಬೇಸರದಿಂದ ಕರ್ಣ ಹೀಗೆನ್ನುತ್ತಾನೆ.
‘ಕೃಷ್ಣಾ ಆ ಕುಂತಿಯ ಗರ್ಭದಿಂದ ನಾನು ಬಂದವನಾದರೆ ನನ್ನ ಈ ದೇಹ ನಿನಗೆ ದಾನ ನೀಡುತ್ತೇನೆ’ ಎನ್ನುವ ದೃಶ್ಯವನ್ನು ಕರ್ಣ ಪಾತ್ರಧಾರಿ ಅಮೋಘವಾಗಿ ಅಭಿನಯಿಸಿದರು. ಇವರ ಸಂಭಾಷಣೆಯನ್ನು ಆಲಿಸಿದ ಶಕುನಿ-ಕೃಷ್ಣರ ಸಂವಾದ ಉತ್ತಮವಾಗಿತ್ತು. ಶಕುನಿಯ ನೋವು ಅರ್ಥಪೂರ್ಣವಾಗಿ ಮೂಡಿಬಂದಿದೆ.
ಗಂಭೀರವಾಗಿ ರಂಗಕ್ಕೆ ಬಂದ ಸುಯೋಧನ ಹಂತ-ಹಂತವಾಗಿ ಉತ್ತಮ ಅಭಿನಯ ನೀಡಿದರು. ಇನ್ನು ಭೀಷ್ಮ, ದ್ರೋಣ, ಕರ್ಣ, ಶಕುನಿ ಪ್ರೇತಾತ್ಮರಾಗಿ ಬಂದು ಕೌರವನನ್ನು ಎಚ್ಚರಸಿದ್ದು ವಿಶೇಷವಾಗಿತ್ತು. ಪ್ರೇತಗಳಲ್ಲೂ ಶಕುನಿ ಸಂತೃಪ್ತ ಆತ್ಮ ಎಂದಾಗ- ಶಕುನಿಯ ಕೌರವ ದ್ವೇಷ ವ್ಯಕ್ತವಾಗಿದೆ.
ಭೀಮನ ಪಾತ್ರಧಾರಿ ಸಮಯೋಚಿತವಾಗಿ ಅಭಿನಯಿಸಿ ಮುದ ನೀಡಿದರು. ಧರ್ಮರಾಯನ ಸಾಂದರ್ಭಿಕ ನುಡಿಗಳು ಸೊಗಸಾಗಿದ್ದವು. ಕೃಷ್ಣನ ಮಾತುಗಳು ಉತ್ತಮವಾಗಿದ್ದರೂ ತ್ವರಿತಗತಿಯಲ್ಲಿತ್ತು. ಕೃತಿಕಾರರು ಪದೇ ಪದೇ ಪಾಂಚಾಲಿಯನ್ನು ವ್ಯೇಶ್ಯೆಯರ ಸಾಲಿಗೆ ಹೋಲಿಸುವ ಅಗತ್ಯವಿರಲಿಲ್ಲ ಅನಿಸುತ್ತದೆ.
ನೀನು ಅಪರಾಧಿ ಸುಯೋಧನ ನಿನ್ನಿಂದಲೇ ಈ ಅನರ್ಥ ಎಂದು ಎಲ್ಲರೂ ಹೇಳುತ್ತಿರುವಾಗ ಎಲ್ಲಕ್ಕೂ ಕಾರಣ ನಾನಲ್ಲ ಎಂದು ನಿರಾಕರಿಸುತ್ತಾ ಕೊನೆಗೆ ವೀರ ಅಭಿಮನ್ಯುವಿನ ಸಾವಿಗೆ ನಾನು ಕಾರಣ ಕೃಷ್ಣ, ಎನ್ನುವ ಸುಯೋಧನನ ಮಾತು ಹೃದಯ ತಟ್ಟಿತು. ಒಟ್ಟಾರೆ ನಾಟಕದ ಕಲಾವಿದರ ಅಭಿನಯ, ಹುಲಿ ನರಸಿಂಹಯ್ಯನವರ ಸಂಗೀತ, ತ್ರಿಲೇಶರವರ ನಿರ್ಮಾಣ, ಮಂಜುನಾಥ ದೊಡ್ಡಮನಿ ಅವರ ನಿರ್ದೇಶನ ಅರ್ಥಪೂರ್ಣವಾಗಿ ಆನಂದನೀಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ