ಹೊಳಲ್ಕೆರೆ:
ವಿಧಾನ ಸಭಾ ಸದಸ್ಯತ್ವಕ್ಕೆ ಶಾಸಕರು ರಾಜಿನಾಮೆ ಏಕೆ ಕೊಟ್ಟರು? ಇದರ ಉದ್ದೇಶ ಮುಂದೆ ಅಧಿಕಾರ, ಮತ್ತು ಹಣ ಸಂಪಾದನೆ ಮಾಡುವ ಒಂದು ವ್ಯವಸ್ಥಿತ ಸಂಚು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚುನಾಯಿತ ಜನಪ್ರತಿನಿಧಿಗಳ ವಿರುಧ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಪ್ರಸನ್ನ ಗಣಪತಿಯ ಕಲ್ಯಾಣ ಮಂಟಪದಲ್ಲಿ ಪಟ್ಟಣದ ರೈತ ಸಂಘದ ಶಾಖೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚುನಾವಣೆಗೆ ಮುನ್ನ ಜನರ ಸೇವೆ ಮಾಡುತ್ತೇವೆ ಎಂಬ ಸುಳ್ಳು ಆಶ್ವಾಸನೆ ನೀಡಿ ಇಂದು ತಮಗೆ ಇಚ್ಚೆ ಬಂದಂತೆ ರಾಜಿನಾಮೆ ನಾಟಕ ಆಡುತ್ತಿರುವುದನ್ನು ಇಡೀ ರಾಜ್ಯದ ಜನತೆ ನೋಡುತ್ತಿದೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಯಾವುದು ಇಲ್ಲ. ಹಣ ಮಾಡುವುದೇ ಇವರ ಮುಖ್ಯ ಗುರಿ. ಸಂಪಾದನೆ ಮಾಡಿದ ಹಣವನ್ನು ಸ್ವೀಸ್ ಬ್ಯಾಂಕ್ ಮತ್ತು ಸಿಂಗಾಪುರ ಬ್ಯಾಂಕ್‍ಗಳಲ್ಲಿ ಗುಪ್ತವಾಗಿ ಠೇವಣೆ ಇಡುವುದೇ ಇವರ ಮೂಲ ಉದ್ದೇಶವಾಗಿದೆ ಎಂದು ಚಂದ್ರಶೇಖರ್ ಶಾಸಕರ ನಡವಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ನಿಮ್ಮ ಸೇವೆ ಮಾಡುತ್ತೇವೆ ಎಂಬ ಸೋಗಿನಲ್ಲಿ ಮತದಾರರನ್ನು ವಂಚಿಸಿ ಆಯ್ಕೆಯಾಗಿ ತಮ್ಮ ಆಸೆ ಆಕಾಂಕ್ಷೆಗಳಿಗೆ ಪ್ರಜಾಪ್ರಭುತ್ವದ ಮಾನ ಮರ್ಯಾದೆಯನ್ನೇ ಹಾಳು ಮಾಡುತ್ತಿದ್ದಾರೆ. ಮೊದಲು ಮತದಾರ ತಾನು ಪ್ರಭು ಎಂಬ ತಿಳುವಳಿಕೆ ಬರಬೇಕು. ಈ ತಿಳುವಳಿಕೆ ಇಲ್ಲಿಯವರೆಗೆ ಮತದಾರನಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಉದ್ದಾರವಾಗುವುದಿಲ್ಲ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷ ಕಳೆದರು ಹಳ್ಳಿಗರ ರೈತರ ಸ್ಥಿತಿ ಎತ್ತ ಕಡೆ ಸಾಗಿದೆ. ಅವರ ಜೀವನ ಯಾವ ರೀತಿ ಸಂಘರ್ಷದಲ್ಲಿದೆ ಎಂಬ ಬಗ್ಗೆ ಈ ಚುನಾಯಿತ ಪ್ರತಿನಿಧಿಗಳಿಗೆ ಸ್ವಲ್ಪವಾದರು ಕಾಳಜಿ ಇಲ್ಲ ಎಂದು ತಿಳಿಸಿ ಇಂದು ನಡೆಯುತ್ತಿರುವ ವಿಧಾನ ಸಭಾ ಅವಿಶ್ವಾಸ ನಿರ್ಣಯದ ಕಡೆ ನಿಮ್ಮ ಒಲವು ಇದೆ. ನಿಮ್ಮಲ್ಲಿ ಜಾಗೃತಿ, ಜಾಣತನ, ಎಲ್ಲವು ಇದ್ದರು ಚುನಾವಣೆ ಬಂದ ತಕ್ಷಣ ಜಾತಿ, ಧರ್ಮ, ಭಾಷೆ, ಮತ್ತು ಹಣ, ಹೆಂಡಕ್ಕೆ ಬಲಿಯಾಗುತ್ತಿರುವುದು ನಮ್ಮ ದುರದೃಷ್ಟಕರ ಸಂಗಾತಿಯಾಗಿದೆ ಎಂದು ಚಂದ್ರಶೇಖರ್ ಮಾರ್ಮಿಕವಾಗಿ ನುಡಿದರು.
ನಮ್ಮ ಹಳ್ಳಿಗರಿಗೆ ಮತ್ತು ಪಟ್ಟಣಗರಿಗೆ ತಮ್ಮ ಸಮಸ್ಯೆಗಳಿಗಿಂತ ಕ್ಷುಲ್ಲಕ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ತುಂಬಾ ಕಾಳಜಿ. ಇದರಿಂದ ನಾವು ಅಭಿವೃಧ್ದಿ ಸಾಧಿಸಲು ಸಾಧ್ಯವಾಗುವುದಿಲ್ಲ. ರಾಜಕಾರಣಿಗಳು ಯಾರಿಗೋಸ್ಕರ ರಾಜಕಾರಣ ಮಾಡುತ್ತಿದ್ದಾರೆ ಎಂದರೆ ಅವರ ಮಕ್ಕಳು ಮೊಮ್ಮಕ್ಕಳು ಸೊಸೆಯವರಿಗೋಸ್ಕರ ಎಂಬ ಬಗ್ಗೆ ನಮಗೆ ಅರಿವು ಬಹಳ ಮುಖ್ಯ. ಚುನಾಯಿತ ಪ್ರತಿನಿಧಿಗಳು ನಾವು ಜನ ಸೇವಕರು ಎಂಬ ನೀತಿ, ನಿಯಮವನ್ನು ಗಾಳಿಗೆ ತೂರಿ ನಾವೆಲ್ಲ ಸರ್ವಾಧಿಕಾರಿಗಳು ಎಂಬ ವರ್ತನೆ ಮಾಡುವುದನ್ನು ಅಧ್ಯಕ್ಷರು ಖಂಡಿಸಿದರು.
ರಾಜ್ಯ ಕಾರ್ಯಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ ಹೊಳಲ್ಕೆರೆ ಪಟ್ಟಣದಲ್ಲಿ ಬಹಳ ವರ್ಷಗಳ ನಂತರ ರಾಜ್ಯ ರೈತ ಸಂಘದ ನೂತನ ಶಾಖೆಯನ್ನು ಉದ್ಘಾಟನೆಯಾಗಿರುವುದು ತುಂಬಾ ಸಂತೋಷಕರ ಸಂಗತಿ. ಆದರೆ ಈ ಶಾಖೆಯಲ್ಲಿ ಬಹುಮುಖ್ಯವಾಗಿ ಮಹಿಳೆಯರ ಕೊರತೆ ಎದ್ದು ಕಾಣುತ್ತಿದೆ. ರೈತ ಸಂಘ ಯಶಸ್ವಿಯಾಗಲು ಮಹಿಳೆಯರ ಪಾತ್ರ ಬಹಳ ಮುಖ್ಯ. ಅವರನ್ನು ಈ ಸಭೆಗೆ ಕರೆದು ತರಬೇಕಾಗಿತ್ತು.
ಮಹಿಳೆಯರು ಇದ್ದರೆ ಸಂಘದ ಸಂಘಟನೆಗೆ ತುಂಬಾ ಪರಿಣಾಮಕಾರಿಯಾದ ಪ್ರೋತ್ಸಾಹ ದೊರೆಯುತ್ತದೆ. ಮತದಾರ ಸರ್ವಶ್ರೇಷ್ಠ, ಆದರೆ ರಾಜಕೀಯ ಸ್ಥಿತಿಯನ್ನು ನೋಡಿದರೆ ನಮಗೆ ತಲೆ ತಗ್ಗಿಸಬೇಕಾಗಿದೆ. ರೈತ ಸಂಘದ ನೂತನ ಸದಸ್ಯರಿಗೆ ಹಸಿರು ಶಾಲನ್ನು ಹಾಕುವುದರ ಮೂಲಕ ಸಂಘ ನಿಮ್ಮನ್ನು ಸ್ವಾಗತಿಸಿದೆ. ಇಂದಿನಿದ ಹಸಿರು ಶಾಲು ತಮ್ಮ ಹೆಗಲ ಮೇಲೆ ಸದಾ ಇರಬೇಕು. ಹಸಿರು ಶಾಲು ಹೋರಾಟದ ಸಂಕೇತ ಎಂದು ತಿಳಿಸಿ, ಹಸಿರು ಶಾಲು ರೈತರ ದಿವ್ವಾಸ್ತ್ರವಾಗಿದೆ ಎಂದು ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಅಗ್ನಿಶಾಮಕ ನಿವೃತ್ತ ಅಧೀಕ್ಷಕ ಎನ್.ಆರ್.ಮಾರ್ಕಂಡೇಯ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ತಾಲ್ಲುಕು ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಹೆಚ್.ಟಿ.ಮಲ್ಲಕಾರ್ಜುನ, ಮಾತನಾಡಿದರು.ರೈತ ಮುಖಂಡರುಗಳಾದ ರಾಮಲಿಂಗಪ್ಪ, ರೇವಣಸಿದ್ದಪ್ಪ, ಪಟೇಲ್ ಚಂದ್ರಶೇಖರಪ್ಪ, ಚಂದ್ರಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಗಂಗಮ್ಮ ವೀರಭದ್ರಯ್ಯ, ಸನಾಉಲ್ಲ ಮುಂತಾದ ರೈತ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








