ವೈದ್ಯರಲ್ಲಿ ಅಚ್ಚರಿ ಮೂಡಿಸಿದ ಶ್ರೀಗಳು…!!!

ತುಮಕೂರು

        ಪರಮಪೂಜ್ಯ ಸಿದ್ದಗಂಗಾ ಸ್ವಾಮೀಜಿಗಳು ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ಸಂಜೆಯಿಂದ ವೈದ್ಯರಿಗೆ ಅಚ್ಚರಿಯಾಗುವಂತೆ ಚೇತರಿಕೆ ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

         ಶುಕ್ರವಾರ ಸಂಜೆ ವೇಳೆಗೆ ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಶ್ರೀಗಳ ಭೇಟಿ ಮಾಡಿ, ವೈದ್ಯರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದಲ್ಲಿ ಸ್ಥಿರತೆ ಕಾಣುತ್ತಿದ್ದೇವೆ. ದೈಹಿಕವಾಗಿ ಕ್ಷೀಣಿಸಿದರೂ ದೈವ ಶಕ್ತಿಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕಳೆದ 12-13 ದಿನಗಳಿಂದ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದ ಶ್ರೀಗಳು ಗುರುವಾರ ಸಂಜೆಯಿಂದ ಸ್ವಾಭಾವಿಕವಾಗಿ ಉಸಿರಾಡುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಯಾಗಿದೆ ಎಂದರು.

        ಶ್ರೀಗಳು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ನಮ್ಮೆಲ್ಲರಿಗೂ ಅವರ ದರ್ಶನ ಸಿಗುತ್ತೆ ಎಂಬ ವಿಶ್ವಾಸ ಇದೆ. ಶ್ರೀಗಳು ಇಂದು ಚೇತರಿಕೆಯಾಗುತ್ತಿರೋದು ಪವಾಡವೇ ಸರಿ. ಭಕ್ತರು ಯಾವುದೇ ಗಾಬರಿ ಪಡುವ ಅವಶ್ಯಕತೆಯಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರೂ ಶ್ರೀಗಳಲ್ಲಿ ಪವಾಡ ಸದೃಶವಾಗಿ ಚೇತರಿಕೆ ಕಂಡು ಬರುತ್ತಿದೆ. ನಾನು ಈ ರೀತಿಯ ಪವಾಡವನ್ನ ಎಲ್ಲೂ ನೋಡಿರಲಿಲ್ಲ. ಇದು ವೈದ್ಯರಿಗೂ ಒಂದು ರೀತಿಯ ಅಚ್ಚರಿಯಾಗಿದೆ. ಹೆಚ್ಚಿನ ಚಿಕಿತ್ಸೆಗೆ ಎಲ್ಲಿಗೂ ರವಾನೆ ಮಾಡುವ ಆಲೋಚನೆಯಿಲ್ಲ. ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

         ಸಿದ್ದಲಿಂಗ ಸ್ವಾಮಿಗಳು ಮಾಧ್ಯಮದವರೊಂದಿಗೆ ಮಾತನಾಡಿ, ಪೂಜ್ಯರ ವಿಲ್‍ಪವರ್ ವೈದ್ಯರಿಗೂ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ. ಅವರ ಆರೋಗ್ಯ ಚೇತರಿಕೆ ವೈದ್ಯರಲ್ಲೂ ಅಚ್ಚರಿಯನ್ನು ಮೂಡಿಸಿದೆ. ರೇಲಾ ಆಸ್ಪತ್ರೆ ವೈದ್ಯರು, ಸಿದ್ದಗಂಗಾ ಆಸ್ಪತ್ರೆ ವೈದ್ಯರು ಸೇರಿದಂತೆ ಅಮೇರಿಕಾದಿಂದ ಬಂದ ಡಾ.ನಾಗಣ್ಣನವರಿಗೂ ವಿಸ್ಮಯಕಾರಿಯಾಗಿದೆ. ದೇಹದಲ್ಲಿ ಪ್ರೊಟೀನ್ ಇಲ್ಲವಾದ್ದರಿಂದ ಶಕ್ತಿ ಕಡಿಮೆಯಾಗುತ್ತಿದೆ ಎಂಬುದು ಬಿಟ್ಟರೆ ಬೇರೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದರು.

ಹೆಬ್ಬೆಟ್ಟು ಮುಟ್ಟಿದಾಗ ಹುಬ್ಬೇರಿಸಿದ ಶ್ರೀಗಳು:

         ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಎನ್.ಮಹೇಶ್ ಮಾಧ್ಯಮದೊಂದಿಗೆ ಮಾತನಾಡಿ, ಸ್ವಾಮೀಜಿಯವರ ವಿಲ್ ಪವರ್ ಚೆನ್ನಾಗಿದೆ. ವೆಂಟಿಲೇಟರ್ ಇಲ್ಲದೆ ಅವರು ಉಸಿರಾಡುತ್ತಿದ್ದಾರೆ. ಸ್ವಾಮೀಜಿ ಅವರ ಆರೋಗ್ಯವನ್ನು ನೋಡಿದರೆ ಆಶ್ಚರ್ಯ ಅನಿಸುತ್ತದೆ. ಶಿವಕುಮಾರ ಸ್ವಾಮೀಜಿ ಅವರನ್ನು ದರ್ಶನ ಮಾಡಿದ ವೇಳೆ ಅವರ ಹೆಬ್ಬೆಟ್ಟು ಮುಟ್ಟಿದಾಗ ಅವರು ಹುಬ್ಬೇರಿಸಿ ಪ್ರತಿಕ್ರಿಯಿಸಿದ್ದಾರೆ ಎಂದರು.

        1990ರಲ್ಲಿ ನಾನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕನಾಗಿದ್ದಾಗ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದೆ. ಆ ವೇಳೆಯಲ್ಲಿ ಸಿದ್ದಗಂಗಾ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಅಡಚಣೆ ಇತ್ತು. ಆ ಅಡಚಣೆ ಬಗೆಹರಿಸಿ ಅನುದಾನ ಬಿಡುಗಡೆ ಮಾಡಿದ್ದೆ ಎಂದು ಮಾಧ್ಯಮದ ಮುಂದೆ ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಪವಾಡ ರೀತಿಯಲ್ಲಿ ಚೇತರಿಕೆ:

       ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಡಾ. ಪರಮೇಶ್ ಶ್ರೀ ಶಿವಕುಮಾರ ಸ್ವಾಮೀಜಿಯವರ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಕಡಿಮೆಯಾಗಿದ್ದು, ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಆಗಿದೆ. ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತಿದೆ. ಗುರುವಾರದಿಂದಲೂ ಅವರೇ ಉಸಿರಾಡುತ್ತಿದ್ದಾರೆ. ರಕ್ತ ಪರೀಕ್ಷೆಯಲ್ಲಿ ಸೋಂಕಿನ ಅಂಶ ಕಡಿಮೆ ಆಗಿದೆ. ಅಲ್ಬಮಿನ್ ಅಂಶ ಏರಿಕೆ ಆಗುತ್ತಿಲ್ಲ. ದ್ರವರೂಪದ ಆಹಾರ ಏನು ಕೊಡುತ್ತಿಲ್ಲ ಎಂದು ತಿಳಿಸಿದರು.

       ಶುಕ್ರವಾರ ಬೆಳಗ್ಗೆ 1 ಗಂಟೆ ಕಾಲ ಸ್ವತಃ ಉಸಿರಾಟ ಮಾಡಿದ್ದಾರೆ. ಬಳಿಕ ಒಂದು ಗಂಟೆ ವೆಂಟಿಲೇಷನ್ ಹಾಕಿದ್ದೇವೆ. ಹಾಗೆ ಎರಡನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗುರುವಾರ ಸಂಜೆಯಿಂದ ಪ್ರೋಟೀನ್ ಅಂಶ 2.7 ರಿಂದ 2.5ಕ್ಕೆ ಕಡಿಮೆಯಾಗಿದೆ. ಆದರೂ ಶ್ರೀಗಳು ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಕೈ-ಕಾಲುಗಳಲ್ಲಿ ಚಲನವಲನ ಆಗುತ್ತಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಸುರೇಶ್‍ಬಾಬು, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿ.ಪಂ ಸಿಇಒ ಅನ್ನೀಸ್ ಕಣ್ಮಣಿಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೊನಾ ವಂಶಿಕೃಷ್ಣ, ಎಎಸ್‍ಪಿ ಡಾ.ಶೋಭಾರಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಾರತರತ್ನಕ್ಕೆ ಒತ್ತಾಯ:

        ನಾನು ಕಳೆದ ಬಾರಿ ಸಿಎಂ ಆಗಿದ್ದಾಗಲೇ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂರವರಿಗೆ ಒತ್ತಾಯ ಮಾಡಿದ್ದೆ. ಪ್ರತಿಯೊಬ್ಬರಲ್ಲೂ ಶ್ರೀಗಳಿಗೆ ಭಾರತರತ್ನ ನೀಡಬೇಕೆಂಬ ಭಾವನೆ ಇದೆ. ಅವರ ಕಾಯಕ ಸೇವೆ ಸಮಾಜಕ್ಕೆ ಅಗತ್ಯವಿದೆ. ಪತ್ರ ಬರೆಯುವುದಷ್ಟೆ ಅಲ್ಲದೆ ಅನಿವಾರ್ಯತೆ ಇದ್ದರೆ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಒತ್ತಾಯಿಸುತ್ತೇನೆ.
ಎಚ್.ಡಿ.ಕುಮಾರಸ್ವಾಮಿ. ಮುಖ್ಯಮಂತ್ರಿ

ಕಿಟಕಿ ಮೂಲಕ ಶ್ರೀಗಳ ದರ್ಶನ:

          ಕಳೆದ ಎರಡು ದಿನಗಳಿಂದ ಶ್ರೀಗಳ ದರ್ಶನ ಮಾಡಲು ಮಠದ ಹಿಂಬಾಗಿಲನಲ್ಲಿರುವ ಕಿಟಕಿಯ ಬಳಿ ಅನುಕೂಲ ಮಾಡಿದ್ದು, ರಾತ್ರಿ ವೇಳೆ ಹಾಗೂ ಮುಂಜಾನೆಯ ಸಮಯದಲ್ಲಿ ಮಠದ ವಿದ್ಯಾರ್ಥಿಗಳು ದರ್ಶನ ಪಡೆಯುತ್ತಿದ್ದಾರೆ. ನಂತರ ಸಾರ್ವಜನಿಕರಿಗೂ ದರ್ಶನಕ್ಕೆ ಅನುಕೂಲ ಮಾಡಿದ್ದರಿಂದ ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸೂಕ್ತ ಬಂದೋಬಸ್ತ್ :

         ಸಿದ್ದಗಂಗಾ ಮಠಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಜಿಲ್ಲೆಗಳ ಶಾಸಕರು, ಸಚಿವರುಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ ಹಳೆ ಮಠದ ಮುಂಭಾಗದಲ್ಲಿ ಹಾಗೂ ಮಠದ ಆವರಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap