ಚಿತ್ರದುರ್ಗ:
ಭೋವಿಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ದ ವಿನಾಕಾರಣ ದೂರು ದಾಖಲಿಸಿರುವುದನ್ನು ಚುನಾವಣಾ ಆಯೋಗ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಭೋವಿ ಸಮಾಜದವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ವಾಮೀಜಿಗಳ ಮೇಲೆ ದೂರು ದಾಖಲಿಸಿರುವವರ ವಿರುದ್ದ ಘೋಷಣೆಗಳನ್ನು ಕೂಗಿದರು.
ಭೋವಿ ಸಮಾಜ ಎದುರಿಸುತ್ತಿರುವ ಅನೇಕ ಸವಾಲು ಸಮಸ್ಯೆಗಳ ಕುರಿತು ಚರ್ಚಿಸಲು ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ ಸಭೆ ಕರೆದಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಚುನಾವಣಾ ಆಯೋಗ ಸ್ವಾಮೀಜಿ ವಿರುದ್ದ ದೂರು ದಾಖಲಿಸಿ ಪ್ರಜಾಪ್ರಭುತ್ವದಲ್ಲಿ ಹಕ್ಕನ್ನು ಮೊಟಕುಗೊಳಿಸಲು ಹೊರಟಿದೆ. ಕೂಡಲೆ ಸ್ವಾಮೀಜಿ ಮೇಲಿನ ಕೇಸನ್ನು ಹಿಂದಕ್ಕೆ ಪಡೆದು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ನೇರ್ಲಗುಂಟೆ ರಾಮಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಭೋವಿ ಅಭಿವೃದ್ದಿ ನಿಗಮ ಹಾಗೂ ಹಬ್ಬದ ವಿಚಾರವಾಗಿ ಭೋವಿ ಸಮಾಜದ ಮುಖಂಡರ ಜೊತೆ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ ಸಭೆ ಕರೆದು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ನೋಟಾಕ್ಕೆ ಮತದಾನ ಮಾಡಿ ಎಂಬ ಸಂದೇಶ ನೀಡಿರುವುದಾಗಿ ಕೆಲವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದರ ಆಧಾರದ ಮೇಲೆ ಚುನಾವಣಾ ಆಯೋಗ ವಿಚಾರಣೆ ನಡೆಸದೆ ಏಕಾಏಕಿ ಸ್ವಾಮೀಜಿ ವಿರುದ್ದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿರುವುದನ್ನು ನೋಡಿದರೆ ಚುನಾವಣಾ ಆಯೋಗ ಸರ್ಕಾರದ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಅನಗತ್ಯವಾಗಿ ಧ್ವನಿಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಪೋಲಿಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಒಂದು ವೇಳೆ ಸ್ವಾಮೀಜಿ ಚುನಾವಣೆಯಲ್ಲಿ ನೋಟಾಕ್ಕೆ ಮತದಾನ ಮಾಡಿ ಎಂದು ಹೇಳಿರುವುದರಲ್ಲಿ ಯಾವ ತಪ್ಪು ಇಲ್ಲ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಭೋವಿ ಸಮಾಜಕ್ಕೆ ಸ್ಪರ್ಧಿಸಲು ಅವಕಾಶ ನೀಡುವಂತೆ ಬಿಜೆಪಿ.ನಾಯಕರುಗಳನ್ನು ಒತ್ತಾಯಿಸಲಾಗಿತ್ತು. ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ.ಅಭ್ಯರ್ಥಿ ಸ್ವಾಮೀಜಿ ಮೇಲೆ ದೂರು ದಾಖಲಿಸಿರುವುದನ್ನು ಭೋವಿ ಸಮಾಜ ಸಹಿಸುವುದಿಲ್ಲ. ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಮೂಲಕ ಹೋರಾಟ ಮಾಡಲಾಗುವುದೆಂದು ಬೆದರಿಕೆ ಹಾಕಿದರು.
ತಿಮ್ಮಣ್ಣ, ಲಕ್ಷ್ಮಣ, ಗೋವಿಂದಪ್ಪ, ಮೋಹನ್, ತುಳಸಿ, ನರೇನಹಳ್ಳಿ ಅರುಣ್‍ಕುಮಾರ್, ಅಲೆಮಾರಿ ಅರೆಅಲೆಮಾರಿ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್, ಗೋಡೆ ಹನುಮಂತಪ್ಪ ಸೇರಿದಂತೆ ಭೋವಿ ಸಮಾಜ ಹಾಗೂ ಇತರೆ ಪರಿಶಿಷ್ಟ ಜಾತಿಗೆ ಸೇರಿದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.