ಕೊರಟಗೆರೆ
ಕಾನೂನು ಬದ್ದ ಹೋರಾಟವನ್ನು ದುರುದ್ದೇಶ ಪೂರ್ವಕವಾಗಿ ಜಾತಿ ನಿಂದನೆಗೆ ಬಳಸಿಕೊಂಡು ಸಂವಿಧಾನವು ತುಳಿತಕ್ಕೆ ಒಳಗಾಗುವ ಜನರಿಗೆ ನೀಡಿರುವ ಕಾನೂನನ್ನು ತನ್ನ ಸ್ವಾರ್ಥಕ್ಕಾಗಿ ಜೆಟ್ಟಿಅಗ್ರಹಾರದ ನಾಗರಾಜು ಬಳಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಕೊರಟಗೆರೆ ಉದ್ಯಮಿ ಎಚ್.ಮಹದೇಶ್ ಆರೋಪ ಮಾಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಖಾಸಗಿ ಜಮೀನಿನ ವಿಚಾರಣೆ ನಡೆದು ರಾಜ್ಯ ಹೈಕೊರ್ಟ್ ನ್ಯಾಯಾಲಯ ನಮ್ಮಂತೆ ಆದೇಶ ನೀಡಿ ಆರು ತಿಂಗಳು ಕಳೆದಿದೆ. ನ್ಯಾಯಾಲಯ ಆದೇಶವನ್ನು ಪಾಲಿಸಲು ಮಧುಗಿರಿ ಎಸಿ ಮತ್ತು ಕೊರಟಗೆರೆ ತಹಸೀಲ್ದಾರ್‍ಗೆ ಬೆದರಿಕೆ ಹಾಕಿ ಜಮೀನು ಬಿಡಿಸದಂತೆ ಒತ್ತಡ ಹಾಕಿದ್ದಾರೆ. ಅಧಿಕಾರಿಗಳು ಆತನ ಬೆದರಿಕೆಯಿಂದ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಳಂಬ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬುಕ್ಕಾಪಟ್ಟಣದ ಗ್ರಾಮದ ಸರ್ವೇ ನಂ.207ರಲ್ಲಿ 3ಎಕರೆ 30 ಕುಂಟೆ ಜಮೀನನ್ನು ನಮ್ಮ ಸ್ವಾಧೀನಕ್ಕೆ ಬಿಡಿಸಿಕೊಡುವಂತೆ ರಾಜ್ಯದ ಹೈಕೊರ್ಟ್ ಮಧುಗಿರಿ ಎಸಿಗೆ ಆದೇಶ ಮಾಡಿದೆ. ಜಮೀನು ಸ್ವಾಧೀನಕ್ಕೆ ಬಿಡಿಸಿಕೊಡಲು ಜಮೀನಿಗೆ ಅಧಿಕಾರಿಗಳು ಬರಲೇ ಇಲ್ಲ. ನಾವು ಸ್ಥಳಕ್ಕೆ ಕಳೆದ ಆರು ತಿಂಗಳಿಂದ ಹೋಗೆ ಇಲ್ಲ. ಆದರೂ ನಮ್ಮ ಮೇಲೆ ವಿನಾಕಾರಣ ಜಾತಿ ನಿಂದನೆ ಪ್ರಕರಣ ದಾಖಲಿಸಿ ಮಾನಹರಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್‍ನಲ್ಲಿ ದಾವೆ ಇರುವ ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆ. ಅವರಿಗೆ ಸಂಬಂಧವೇ ಇಲ್ಲದ ಈ ಜಮೀನಿನ ಸಲುವಾಗಿ ಇಲ್ಲ ಸಲ್ಲದ ಆರೋಪ ಮಾಡಿ ವಿನಾಕಾರಣ ಕೇಸು ದಾಖಲಿಸುವ ಮೂಲಕ ಅಧಿಕಾರಿ ವರ್ಗಕ್ಕೆ ಮತ್ತು ದಲಿತ ಸಂಘಟನೆಗಳಿಗೆ ದಿಕ್ಕು ತಪ್ಪಿಸುವ ಕೆಲಸ ಸರ್ವೇ ಸಾಮಾನ್ಯವಾಗಿದೆ. ನ್ಯಾಯಾಲಯ ಆದೇಶದಂತೆ ಎಸಿ ಮತ್ತು ತಹಸೀಲ್ದಾರ್ ಸ್ಥಳಕ್ಕೆ ಬರುವಂತೆ ಸೂಚಿಸಿದರೆ ಅವರ ಮೇಲೆಯು ಸಹ ಜಾತಿನಿಂದನೆ ಕೇಸು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದರು.
ಜೆಟ್ಟಿಅಗ್ರಹಾರ ಗ್ರಾಮದ ನಾಗರಾಜು ಈ ಹಿಂದೆಯೇ ವಿನಾಕಾರಣ ನಮ್ಮ ಕುಟುಂಬ ಮತ್ತು ನನ್ನ ಬಳಿ ಕೆಲಸ ಮಾಡುವ ಕೆಲಸಗಾರರ ವಿರುದ್ದ ಜಾತಿ ನಿಂದನೆ ಕೇಸು ಹಾಕಿ ನಮಗೆ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಬಳಿ ಕೆಲಸ ಮಾಡುತ್ತಿದ್ದ ಜಾಫರ್ ಎಂಬಾತ ಈತನ ಕಿರುಕುಳದಿಂದ ಮೃತ ಪಟ್ಟಿದ್ದಾನೆ. ಅದರಂತೆ ನಾಗರಾಜು ಪೋಲೀಸ್ ಠಾಣೆಯಲ್ಲಿ ಕೇಸು ಸುಳ್ಳು ಎಂದು ಅಪಾಲಜಿ ಬರೆಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ಈಗ ಮತ್ತೆ ಅದೇ ರೀತಿ ಸುಳ್ಳು ಜಾತಿ ನಿಂದನೆ ಕೇಸು ನೀಡಲಾಗಿದೆ. ಈ ವ್ಯಕ್ತಿ ಆಗಾಗ ಅವರಿವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಹೆದರಿಸಿ, ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ವಿಚಾರ ಮಾಡಲು ಬರುವ ಅಧಿಕಾರಿಗಳ ಮುಂದೆ ನಾಟಕ ವಾಡಿ ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಸಂವಿಧಾನದ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಹಣ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಮೀನು ಮಾಲೀಕ ವಿಜಯಕೃಷ್ಣ ಮಾತನಾಡಿ, ನ್ಯಾಯಾಲಯದಲ್ಲಿ ಇರುವ ಪ್ರಕರಣದ ಪ್ರತಿಯೊಂದು ವಿಚಾರವನ್ನು ನಾಗರಾಜು ವಾಟ್ಸಪ್ ಮತ್ತು ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ನಮ್ಮ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಸಾರ್ವಜನಿಕ ವಲಯದಲ್ಲಿ ನಮಗೆ ತುಂಬ ನೋವಾಗಿದೆ.
ನಾಗರಾಜು ಹರಿಬಿಟ್ಟಿರುವ ಪ್ರತಿ ಮಾಹಿತಿಯನ್ನು ಶೇಖರಣೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮಾನನಷ್ಟ ಪ್ರಕರಣ ದಾಖಲು ಮಾಡುತ್ತೇನೆ. ಮಧುಗಿರಿ ಎಸಿ ಮತ್ತು ಕೊರಟಗೆರೆ ತಹಸೀಲ್ದಾರ್ ವಿರುದ್ದ ಹೈಕೊರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸುತ್ತೇನೆ. ಜಮೀನಿನ ವಿಚಾರದಲ್ಲಿ ವಿನಾಕಾರಣ ಜಾತಿಯ ವಿಚಾರ ಬೆರೆಸಿ ಪ್ರಕರಣ ದಾಖಲಿಸಿರುವ ನಾಗರಾಜು ವಿರುದ್ದ ಸುಪ್ರೀಂಕೋರ್ಟ್‍ನಲ್ಲಿ ಮಾನನಷ್ಟ ಪ್ರಕರಣ ದಾಖಲು ಮಾಡಿ ಬುದ್ದಿ ಕಲಿಸುತ್ತೇನೆ ಎಂದು ಹೇಳಿದರು.