ದಾವಣಗೆರೆ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಜ್ಞಾಪಕಾರ್ಥವಾಗಿ ಸಾರ್ವಜನಿಕರಲ್ಲಿ ಆರೋಗ್ಯಯುತ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಯೋಜಿಸಲಾಗಿರುವ ಸ್ವಾಸ್ಥ ಭಾರತ ಸೈಕಲ್ ಜಾಥಾ ತಂಡವು ನ.18 ರಂದು ನಗರಕ್ಕೆ ಆಗಮಿಸಿದ್ದು ಇಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಏರ್ಪಡಿಸಲಾಗಿದ್ದ ಸೈಕಲ್ ಜಾಥಾಕ್ಕೆ ಬೆಳಿಗ್ಗೆ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಚಾಲನೆ ನೀಡಿದರು.
ಸುಮಾರು 6 ತಂಡಗಳ ಸೈಕಲ್ ಯಾತ್ರೆಯು ವಿವಿಧ ದಿಕ್ಕುಗಳಿಂದ ಹೊರಟು 2019 ರ ಜ.26 ರಂದು ನವದೆಹಲಿ ತಲುಪಲಿದೆ. ಅಶೋಕ್ ಮಿಶ್ರಾರವರ ನೇತೃತ್ವದ 3 ನೇ ತಂಡವು ತಿರುವನಂತಪುರದಿಂದ ಹೊರಟು ಬೆಂಗಳೂರು ಚಿತ್ರದುರ್ಗ ಮಾರ್ಗವಾಗಿ ನ.18 ರಂದು ದಾವಣಗೆರೆ ತಲುಪಿತು. ನ.19 ರಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮೇಜರ್ ಬೋಪಣ್ಣ ನೇತೃತ್ವದ ಎನ್.ಸಿ.ಸಿ ತಂಡ, ನೆಹರು ಯುವ ಕೇಂದ್ರ, ಸ್ಕ್ವಾಡ್ ಅಂಡ್ ಗೈಡ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಕಿತಾಧಿಕಾರಿಗಳು, ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ, ದಾವಣಗೆರೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ನ.19 ರ ಬೆಳಿಗ್ಗೆ ಜಾಥಾ ಏರ್ಪಡಿಸಲಾಗಿತ್ತು.
ಅಪರ ಜಿಲ್ಲಾಧಿಕಾರಿಗಳು ಚಾಲನೆ ನೀಡಿದ ಜಾಥಾವು ಜಿಲ್ಲಾ ಚಿಗಟೇರಿ ಆಸ್ಪತ್ರೆಯಿಂದ ಪಿ ಜೆ ಬಡಾವಣೆ, ಪಿಬಿ ರಸ್ತೆ, ಮಂಡಿಪೇಟೆ ಮಾರ್ಗವಾಗಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮೂಲಕ ಸಾಗಿ ಚಾಮರಾಜಪೇಟೆಯಲ್ಲಿ ಮುಕ್ತಾಯಗೊಂಡಿತು.
ಜಾಥಾದಲ್ಲಿ ಸುಮಾರು 300 ಜನ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ದಾರಿಯುದ್ದಕ್ಕೂ ಈಟ್ ರೈಟ್ ಇಂಡಿಯಾ ಘೋಷ ವಾಕ್ಯದೊಂದಿಗೆ ಸಾಗಿದರು. ಚಾಮರಾಜ ಪೇಟೆ ಸರ್ಕಲ್ ಮತ್ತು ಮಾರ್ಕೆಟ್ ರಸ್ತೆಯಲ್ಲಿ ಎಲ್‍ಇಡಿ ಪರದೆ ಮೇಲೆ ವೈಶ್ಣವ ಜನತೋ ಗಾಯನವನ್ನು ಮತ್ತು ಆಹಾರ ಸುರಕ್ಷತೆ ಬಗ್ಗೆ ಸಂದೇಶಗಳನ್ನು ಸಾರಲಾಯಿತು. ಜಾಥಾದೊಂದಿಗಿದ್ದ ಮೊಬೈಲ್ ಫುಡ್ ಟೆಸ್ಟಿಂಗ್ ಲ್ಯಾಬ್ ತಂಡದವರು ಸುಲಭವಾಗಿ ಆಹಾರವನ್ನು ಪರೀಕ್ಷಿಸುವ ಕುರಿತು ಪ್ರಾಥ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಅಂಕಿತಾಧಿಕಾರಿ ಡಾ. ಕೆ ಹೆಚ್ ಗಂಗಾಧರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ಆಹಾರ ಸುರಕ್ಷತಾಧಿಕಾರಿಗಳಾದ ಹೆಚ್.ಕೊಟ್ರೇಶ್, ಮಂಜನಾಥ್ ಕುಸಮನವರ್, ನಿವಾಸಿ ವೈದ್ಯಾಧಿಕಾರಿ ಡಾ.ಹೆಚ್.ಡಿ.ವಿಶ್ವನಾಥ್, ಸಿಬ್ಬಂದಿ ವರ್ಗ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
