ಜೂ.11ರಿಂದ ಸ್ವಚ್ಛ ಮೇವ ಜಯತೆ ಆಂದೋಲನ

ದಾವಣಗೆರೆ:

   ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್‍ನ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜೂನ್ 11ರಿಂದ ಜುಲೈ 10ರ ವರೆಗೆ ಜಿಲ್ಲಾದ್ಯಂತ ಸ್ವಚ್ಛ ಮೇವ ಜಯತೆ ಆಂದೋಲನ ಏರ್ಪಡಿಸಲಾಗಿದೆ ಎಂದು ಜಿ.ಪಂ. ಸಿಇಒ ಹೆಚ್.ಬಸವರಾಜೇಂದ್ರ ತಿಳಿಸಿದರು.

      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಆಂದೋಲನಕ್ಕೆ ಜೂ.11ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ. ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಶಾಸಕರಾದ ಮೋಹನ್‍ಕುಮಾರ್ ಕೊಂಡಜ್ಜಿ, ಪ್ರೊ.ಎನ್.ಲಿಂಗಣ್ಣ, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಎಸ್.ರಾಮಪ್ಪ, ಎಂ.ಪಿ.ರೇಣುಕಾಚಾರ್ಯ, ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿ.ಪಂ. ಉಪಾಧ್ಯಕ್ಷ ಸಿ.ಸುರೇಂದ್ರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜೆ.ಸವಿತಾ, ಎಂ.ಆರ್.ಮಹೇಶ್, ಬಿ.ಎಂ.ವಾಗೀಶಸ್ವಾಮಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.

      ಜೂ.11 ರಿಂದ ಜು.10ರ ವರೆಗೆ ಜಿಲ್ಲೆ, ತಾಲ್ಲೂಕು ಮತ್ತು ಗ್ರಾ ಪಂ ಮಟ್ಟದಲ್ಲಿ ಸ್ವಚ್ಛತೆಗೆ ಪೂರಕವಾದ ವಿವಿಧ ಜನಾಂದೋಲನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದ ಪ್ರಯುಕ್ತ ನಿರ್ಮಾಣ ಮಾಡಿರುವ ಸ್ವಚ್ಛತಾ ರಥವು ಸ್ವಚ್ಛತೆಗೆ ಸಂಬಂಧಿಸಿದಂತೆ ಹಲವು ಘೋಷಣೆಗಳನ್ನು ಹೊತ್ತುಕೊಂಡು ಜಿಲ್ಲಾದ್ಯಂತ ಸಂಚರಿಸಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಿದೆ. ಅಲ್ಲದೇ, ಹಸಿರು ಇಂಧನ(ಬಯೋ ಡೀಸೆಲ್) ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂದು ಶೇ.5 ರಷ್ಟು ಬಯೋ ಡೀಸೆಲ್ ಮಿಶ್ರಣದ ಬಳಕೆಗೆ ಕೂಡ ಅಂದು ಚಾಲನೆ ನೀಡಲಾಗುವುದು ಎಂದರು.

      ಈ ಆಂದೋಲನಕ್ಕೆ ಎನ್‍ಜಿ ಗಳ ಸಹಭಾಗಿತ್ವ ಕೋರಿ ಅವರೊಂದಿಗೆ ಸಭೆ ನಡೆಸಿ ಈಗಾಗಲೇ ಚರ್ಚಿಸಿದ್ದು, ಅವರೂ ಈ ಸ್ವಚ್ಚತೆ ಆಂದೋಲನದಲ್ಲಿ ಕೈಜೋಡಿಸಲಿದ್ದಾರೆ ಎಂದರು.

       ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಪ್ರಯುಕ್ತ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯದಿಂದ ಸ್ವಚ್ಚತಾ ರ್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮತ್ತು ನಿರ್ವಹಣೆ, ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು. ಅಲ್ಲದೇ, ಗ್ರಾಮದಲ್ಲಿ ಸ್ವಚ್ಚತೆಯ ನಿರ್ಮಾಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು, ಸ್ವಯಂ ಸೇವಕರು(ಎನ್‍ಸಿಸಿ, ಎನ್‍ಎಸ್‍ಎಸ್, ಎನ್‍ವೈಕೆ, ಇತರೆ) ಮತ್ತು ಗ್ರಾಮಸ್ಥರನ್ನು ಒಳಗೊಂಡು ಸ್ವಚ್ಚತೆಗಾಗಿ ಶ್ರಮದಾನ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಸ್ವಚ್ಚತೆಯ ಕುರಿತು ಶಾಲಾ ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಅವರು ವಿವರಿಸಿದರು.

     ಗ್ರಾಮೀಣ ಸಮುದಾಯಕ್ಕೆ ವೈಯಕ್ತಿಕ ಶೌಚಾಲಯದ 2 ಗುಂಡಿಗಳ ಉಪಯೋಗ ಮತ್ತು ಅದರ ಮಹತ್ವ ತಿಳಿಸುವ ಬಗ್ಗೆ ಕಾರ್ಯಕ್ರಮ ಆಯೋಜನೆ, ಸ್ವಚ್ಚಮೇವ ಜಯತೇ ಆಂದೋಲನದ ಅಂಗವಾಗಿ ಜೂ.21 ರಂದು ಗ್ರಾಮೀಣ ಮಟ್ಟದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ, ಬೇಸ್‍ಲೈನ್ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಅಭಿಯಾನ ಮತ್ತು ಎಂ.ಐ.ಎಸ್ ದಾಖಲಾತಿ ಅಭಿಯಾನ, ಕೈತೊಳೆಯುವ ಅಭಿಯಾನ, ಈ ಆಂದೋಲನ ಪ್ರಯುಕ್ತ ವಿಶೇಷ ಗ್ರಾಮ ಸಭೆಗಳ ಆಯೋಜನೆ, ಕುಡಿಯುವ ನೀರು, ನೈರ್ಮಲ್ಯ ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧದ ಕುರಿತು ಗ್ರಾಮೀಣ ಸಮುದಾಯದಲ್ಲಿ ಅರಿವು ಸೇರಿದಂತೆ ವಿವಿಧ ಸ್ವಚ್ಛತಾ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲರೂ ಹಸಿರು ಪ್ರಜ್ಞೆಯನ್ನು ಹೆಚ್ಚಿಸಿಕೊಂಡು, ಸ್ವಚ್ಚತೆಯೆಡೆ ಗಮನ ಹರಿಸಿ ಸ್ವಚ್ಚಮೇವ ಜಯತೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

      ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಸ್ವಚ್ಛ ಮೇವ ಜಯತೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದೆ. ಎಲ್ಲರ ಸಹಭಾಗಿತ್ವದಿಂದ ಮಾತ್ರ ಈ ಕಾರ್ಯಕ್ರಮದ ಯಶಸ್ಸು ಸಾಧ್ಯ. ಈ ಕಾರ್ಯಕ್ರಮದಡಿ ನಗರೀಕರಣ ಹೊಂದುತ್ತಿರುವ, ನಗರಕ್ಕೆ ಹತ್ತಿರವಾಗಿರುವ ಗ್ರಾ.ಪಂ ಗಳನ್ನು ಘನ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮ ಅನುಷ್ಟಾನಕ್ಕೆ ಮೊದಲನೇ ಹಂತದಲ್ಲಿ ಆಯ್ಕೆ ಮಾಡಿಕೊಂಡಿದ್ದು, ಇಲ್ಲಿ ವಿವಿಧ ರೀತಿಯ ಸ್ವಚ್ಛತೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ತಿಳಿಸಿದರು.

      ಸುದ್ದಿಗೋಷ್ಠಿಯಲ್ಲಿ ಜಿ.ಪಂ.ನ ಯೋಜನಾ ಅಭಿಯಂತರ ಟಿ.ಎಸ್.ಬಸವರಾಜ್, ಸಹಾಯಕ ನಿರ್ದೇಶಕ ಶಶಿಧರ್, ಬಯೋ ಡೀಸೆಲ್ ಉತ್ಪಾದಕ ಕಕ್ಕರಗೊಳ್ಳದ ಕೆ.ಎಸ್.ಮಂಜುನಾಥ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link