26ನೇ ವಾರ್ಡ್‍ನಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ತುಮಕೂರು:

     ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ವಾರ್ಡ್‍ನಲ್ಲಿಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಸ್ಮರಣಾರ್ಥ ಹಾಗೂ ಮಹಾತ್ಮಗಾಂಧೀಜಿಯವರ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

     ನಗರದ 26ನೇ ವಾರ್ಡ್ ವ್ಯಾಪ್ತಿಯ ಚಂದ್ರಶೇಖರ ಆಜಾದ್ ಪಾರ್ಕ್ ಸಮೀಪದಿಂದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಮತ್ತು ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಸ್ಮರಣಾರ್ಥ ಹಾಗೂ ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಪ್ರತಿಯೊಬ್ಬರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂಬುದು ಪ್ರಧಾನಿ ಮೋದಿಯವರ ಆಶಯ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

     ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಂಡರೆ ನಗರದಲ್ಲಿ ಅಲ್ಲಲ್ಲಿ ಕಂಡು ಬರುವ ಕಸದ ರಾಶಿಗಳು ತಾನಾಗಿಯೇ ಮಾಯವಾಗುತ್ತವೆ. ಈ ಕಾರ್ಯದಿಂದ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡಲು ಅವಕಾಶ ಇಲ್ಲದಂತಾಗುತ್ತದೆ ಎಂದರು.

      ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿ ದಿನ ಅಥವಾ ವಾರಕ್ಕೊಮೆಯಾದರೂ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ವೈಯಕ್ತಿಕವಾಗಿ, ಸಾಮಾಜಿಕವಾಗಿ ಹಾಗೂ ಸಾರ್ವಜನಿಕವಾಗಿ ಸ್ವಚ್ಚತೆ ಕಾಪಾಡಿಕೊಂಡರೆ ಸಹಜವಾಗಿ ವ್ಯಕ್ತಿಯ ಉನ್ನತಿಯಾಗುತ್ತದೆ. ಜತೆಗೆ ರೋಗ ರುಜಿನಗಳಿಂದ ದೂರು ಇರಬಹುದಾಗಿದೆ ಎಂದರು.

      ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸ್ವಚ್ಚತೆ ಕಾಪಾಡಿಕೊಂಡರೆ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬ ಮಹಾತ್ಮಗಾಂಧಿ ಅವರು ನೀಡಿದ ಕರೆಯನ್ನು ನಾವೆಲ್ಲರೂ ಚಾಚೂತಪ್ಪದೇ ಪಾಲಿಸಬೇಕು ಎಂದರು.

     ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ಚಾಲನೆ ನೀಡಿರುವ ಸ್ವಚ್ಚ ಭಾರತ್ ಅಭಿಯಾನ 2019ರಲ್ಲಿ ಪೂರ್ಣಗೊಳ್ಳಲಿದೆ. ಈ ಕಾರ್ಯಕ್ಕೆ ನಾವು ನೀವೆಲ್ಲರೂ ಕೈಜೋಡಿಸೋಣ ಎಂದರು.

     26ನೇ ವಾರ್ಡ್‍ನ ಪಾಲಿಕೆ ಸದಸ್ಯ ಹೆಚ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ವಚ್ಚತಾ ಕಾರ್ಯಕ್ರಮವನ್ನು 26ನೇ ವಾರ್ಡ್‍ನಲ್ಲಿ ಪ್ರಾರಂಭಿಸಲಾಗುತ್ತಿದೆ. ಕಳೆದ 1 ತಿಂಗಳಿನಿಂದ ಪ್ರತಿ ಮನೆ ಮನೆಗೂ ಕರಪತ್ರ ಹಂಚಿ ಸ್ವಚ್ಚತೆ ಕಾಪಾಡುವಂತೆ ತಿಳಿಸಿದ್ದೇವೆ.

     ಆದರೂ ಸಹ ಇನ್ನು ಸ್ವಚ್ಚತಾ ಕಾರ್ಯದ ಜನರಲ್ಲಿ ಅರಿವು ಮೂಡಿದಂತಿಲ್ಲ . ಎಲ್ಲೆಂದರಲ್ಲಿ ಕಸ ಹಾಕುತ್ತಾ ಅನೈರ್ಮಲ್ಯ ತಾಂಡವವಾಡುವಂತೆ ಮಾಡಲಾಗುತ್ತಿದೆ . ಹಾಗಾಗಿ ಇಂದು ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು .
ಸ್ವಚ್ಚತಾ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಸಂಬಂಧ ಕಳೆದ 1 ತಿಂಗಳಿಂದ ಕರಪತ್ರಗಳನ್ನು ಮುದ್ರಿಸಿ ಪ್ರತಿ ಮನೆ ಮನೆಗೆ ಸ್ವತಃ ತಾವೇ ಹಂಚುತ್ತಿರುವುದಾಗಿ ಅವರು ತಿಳಿಸಿದರು.

      ಸ್ವಚ್ಚತೆ ಕಾಪಾಡುವ ಮೂಲಕ 26ನೇ ವಾರ್ಡ್‍ನ್ನು ಮಾದರಿ ವಾರ್ಡನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಅವರು ಹೇಳಿದರು.ಈ ಸ್ವಚ್ಚತಾ ಅಭಿಯಾನದಲ್ಲಿ ಮುಖಂಡರಾದ ಕೊಪ್ಪಲ್ ನಾಗರಾಜು, ಸುಜಾತ ಚಂದ್ರಶೇಖರ್, ಮುರುಳಿಕೃಷ್ಣ, ಚಂದ್ರಪ್ಪ, ವಿನಯ್ ಜೈನ್, ಓಂಕಾರ್ ಮತ್ತಿತರರು ಪಾಲ್ಗೊಂಡಿದ್ದರು. 

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link