ಪ.ನಾ.ಹಳ್ಳಿ
ಲಾರ್ವಹಾರಿ ಮೀನು ಪ್ರತಿ ನೀರಿನ ತೊಟ್ಟಿಯಲ್ಲಿ ಇದ್ದರೆ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ಇರುವುದಿಲ್ಲ. ಸ್ವಚ್ಚತೆಯೊಂದೆ ಮಲೇರಿಯಾ ರೋಗ ನಿಯಂತ್ರಣದ ಮಾರ್ಗ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಘಟಕದ ಹಿರಿಯ ಆರೋಗ್ಯ ಸಹಾಯಕ ವೆಂಕಟಚಲಯ್ಯ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗುವ ಅವಶ್ಯಕತೆ ಇದ್ದು, ಪೋಷಕರಿಗೆ ಮತ್ತು ಗ್ರಾಮದಲ್ಲಿನ ಅಕ್ಕ ಪಕ್ಕದ ಕುಟುಂಬಗಳ ಸದಸ್ಯರಿಗೆ ಈ ರೋಗ ಹರಡುವ ಬಗ್ಗೆ ಅರಿವು ಮೂಡಿಸಿ. ತೊಟ್ಟಿ ಹಾಗೂ ತೆಂಗಿನ ಚಿಪ್ಪಿನಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಹೇಗೆ ಮಾಡುತ್ತವೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೊರಿಸ ಬೇಕು. ಇದರಿಂದ ಜನರಲ್ಲಿ ಸುಲಭವಾಗಿ ಅರಿವು ಮೂಡಲಿದ್ದು ರೋಗ ನಿಯಂತ್ರಣ ಸಾಧ್ಯವಾಗಲಿದೆ. ಅನ್ಯ ರಾಜ್ಯದಿಂದ ರಾಜ್ಯಕ್ಕೆ ಬರುವ ಕೂಲಿ ಕಾರ್ಮಿಕರಿಂದ ಹೆಚ್ಚು ರೋಗ ಹರಡುವ ಸಾಧ್ಯತೆ ಇದ್ದು ಜನ ಜಾಗೃತರಾಗಿರ ಬೇಕೆಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ ಮಾತನಾಡಿ ಮನುಷ್ಯ ತನ್ನ ಜೀವನಶೈಲಿಯನ್ನು ಬದಲಾವಣೆ ಮಾಡಿ ಕೊಳ್ಳುವ ಅವಶ್ಯಕತೆ ಇದೆ. ತರಕಾರಿ ಸೇರಿದಂತೆ ಉತ್ತಮ ಆಹಾರ ಸೇವನೆ ರೂಡಿಸಿಕೊಂಡು ಸರಳ ಜೀವನ ಪದ್ದತಿ ಇದ್ದರೆ ರೋಗ ನಿಮ್ಮ ಹತ್ತಿರ ಸುಳಿಯುವುದಿಲ್ಲ. ನಮ್ಮ ಮನೆ, ಗ್ರಾಮ ಸ್ವಚ್ಚ ಮಾಡುವಂತಹ ಮನೋಭಾವ ಪ್ರತಿಯೊಬ್ಬರು ಬೆಳಸಿ ಕೊಂಡಾಗ ಸ್ವಚ್ಚಂದ ಪರಿಸರ ನಿರ್ಮಾಣವಾಗಲಿದ್ದು ರೋಗ ನಿಮ್ಮ ಹತ್ತಿರ ಸುಳಿಯುವುದಿಲ್ಲ ಎಂದರು.
ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಕರಿಯಮ್ಮ, ಸದಸ್ಯ ಸೀತಾರಾಮಯ್ಯ, ವೈದ್ಯಶ್ರೀ ಪ್ರಶಸ್ತಿ ಪುರಸ್ಕøತ ವೈದ್ಯಾಧಿಕಾರಿ ಡಾ.ತಿಮ್ಮರಾಜು, ಮುಖ್ಯ ಶಿಕ್ಷಕಿ ಕಾವೇರಮ್ಮ, ಶಿಕ್ಷಕರಾದ ಕಿರಣ್ಕುಮಾರ್, ಮಂಜುನಾಥ್, ಪಿ.ಡಿ.ಓ. ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ಶ್ರೀನಿವಾಸಮೂರ್ತಿ, ತಿಮ್ಮರಾಜು, ಕಿಶೋರ್ ಅಹಮದ್, ಸೇರಿದಂತೆ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.