ಹುಳಿಯಾರು
ಹುಳಿಯಾರು ಬಸ್ ನಿಲ್ದಾಣದಲ್ಲಿದ್ದ ಅನಧಿಕೃತ ಗೂಡಂಗಡಿಗಳನ್ನು ಯಾವುದೇ ನೋಟಿಸ್ ಸಹ ಕೊಡದೆ ಏಕಾಏಕಿ ಪೊಲೀಸ್ ಸರ್ಪಗಾವಲಿನೊಂದಿಗೆ ಪಪಂ ಮುಖ್ಯಾಧಿಕಾರಿಗಳು ತೆರವುಗೊಳಿಸಿದ್ದರು.
ಇದರ ಇನ್‍ಪ್ಯಾಕ್ಟ್ ಈಗ ಪಟ್ಟಣದಲ್ಲಿದ್ದ ಅನಧಿಕೃತ ಗೂಡಂಗಡಿಗಳ ಮೇಲೂ ಬಿದ್ದಿದ್ದು ಪಪಂನಿಂದ ಯಾವುದೇ ಸೂಚನೆ ನೀಡದಿದ್ದರೂ ಸ್ವಯಂ ಪ್ರೇರಣೆಯಿಂದ ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾಗುತ್ತಿದ್ದಾರೆ.ಹುಳಿಯಾರಿನ ಬಸ್ ನಿಲ್ದಾಣ ಬಿಟ್ಟರೆ ಇಲ್ಲಿನ ರಾಜ್ ಕುಮಾರ್ ರಸ್ತೆಯಲ್ಲಿ ಅತೀ ಹೆಚ್ಚು ಅನಧಿಕೃತ ಗೂಡಂಗಡಿಗಳಿದ್ದವು. ಇಲ್ಲಿನ ಚರಂಡಿಯ ಮೇಲೆಯೇ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು. ಹಾಗಾಗಿ ಮುಂದಿನ ತೆರವು ಕಾರ್ಯ ಇಲ್ಲಿಯೇ, ಇದೇ ತಿಂಗಳ 25 ಕ್ಕೆ ತೆರವು ದಿನಾಂಕ ನಿಗದಿ ಮಾಡಿಕೊಂಡಿದ್ದಾರೆಂದು ಜನ ಮಾತಾಡಿಕೊಳ್ಳುತ್ತಿದ್ದರಷ್ಟೆ.
ಆದರೆ ಅಧಿಕೃತವಾಗಿ ಪಪಂನಿಂದ ಇವರಿಗೆ ನೋಟಿಸ್ ಇರಲಿ ಮೌಖಿಕವಾಗಿಯೂ ಸಹ ತೆರವು ಮಾಡಲು ಸೂಚಿಸಿರಲಿಲ್ಲ. ಪತ್ರಿಕೆಗಳಲ್ಲಾಗಲೀ, ಸೋಷಿಯಲ್ ಮೀಡಿಯಾದಲ್ಲಾಗಲೀ ತೆರವು ಮಾಡುವಂತೆ ಹೇಳಿಕೆ ಕೂಡ ಕೊಟ್ಟಿಲ್ಲ. ಪೊಲೀಸ್ ಇಲಾಖೆಗೆ ಸಹಕಾರ ಕೊಡುವಂತೆ ಪತ್ರ ಸಹ ಬರೆದಿಲ್ಲ. ಆದರೂ ಇಲ್ಲಿನ ಪೆಟ್ಟಿಗೆ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ತೆರವಿಗೆ ಮುಂದಾಗುತ್ತಿದ್ದಾರೆ.
ಅಲ್ಲದೆ ಬೇರೆಯವರ ಗೂಡಂಗಡಿಗಳನ್ನು ಬಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದವರೂ ಸಹ ಬಾಡಿಕೆ ಕರಾರು ಕ್ಯಾನ್ಸಲ್ ಮಾಡಿಕೊಂಡು ಅಂಗಡಿ ಖಾಲಿ ಮಾಡುತ್ತಿದ್ದಾರೆ. ಕೆಲವರಂತೂ ಅಂಗಡಿಯ ಬಾಗಿಲು ಸಹ ತೆರೆಯದೆ ಸುಮ್ಮನಾಗಿದ್ದಾರೆ. ಒಟ್ಟಾರೆ ಹುಳಿಯಾರಿನಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ತಕರಾರು ತೆಗೆಯದೆ ತೆರವು ಮಾಡಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.